28.2 C
Bengaluru
Wednesday, July 3, 2024

ಬೆಂಗಳೂರು: ಅಪಾರ್ಟ್‌ಮೆಂಟ್ ನಿವಾಸಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ರದ್ದುಪಡಿಸದ ಹೈಕೋರ್ಟ್

ರಾಜಕಾಲುವೆ ಅತಿಕ್ರಮಣ ತೆರವಿಗೆ ಮುಂದಾದ ಅಧಿಕಾರಿಗಳಿಗೆ ಅಡ್ಡಿಪಡಿಸಿದ ವಿಚಾರವಾಗಿ ಮಹದೇವಪುರದ ಔಟರ್ ರಿಂಗ್ ರೋಡ್ ಬಳಿಯ ಶಿಲ್ಪಿಥಾ ಸ್ಪ್ಲೆಂಡರ್ ಅನೆಕ್ಸ್ ಅಪಾರ್ಟ್‌ಮೆಂಟ್ ನಿವಾಸಿಗಳ ವಿರುದ್ಧ 2020ರ ಮಾರ್ಚ್‌ನಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಇದರಿಂದಾಗಿ, ವಿಚಾರಣೆ ಕೈಬಿಡುವಂತೆ ಕೋರಿದ್ದ ನಿವಾಸಿಗಳಿಗೆ ಪ್ರಕರಣದಲ್ಲಿ ಹಿನ್ನಡೆ ಉಂಟಾಗಿದೆ.

ಉಮಾ ಶಂಕರ್ ಮೋಹಪಾತ್ರ ಮತ್ತು ಇತರ 22 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಕೆ.ನಟರಾಜನ್, ʻಅರ್ಜಿದಾರರ ವಿರುದ್ಧ ತನಿಖೆ ನಡೆಸುವುದಕ್ಕೆ, ಉದ್ದೇಶಪೂರ್ವಕ ಅಪರಾಧ ಎಂದು ತೋರಿಸಲು (ಛಾಯಾಚಿತ್ರಗಳು/ವಿಡಿಯೊ ತುಣುಕುಗಳಲ್ಲಿ) ಮೇಲ್ನೋಟಕ್ಕೆ ಪುರಾವೆಗಳಿವೆʼ ಎಂದು ತಿಳಿಸಿದರು.

ʻಹೈಕೋರ್ಟ್ ಆದೇಶದಂತೆ, ಬಿಬಿಎಂಪಿ ಅಧಿಕಾರಿಗಳು ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರು (ಎಡಿಎಲ್ಆರ್) ಅತಿಕ್ರಮಣದ ಸಮೀಕ್ಷೆ ನಡೆಸುವ ಮತ್ತು ಬೇಲಿ ಹಾಕುವ ಪ್ರಕ್ರಿಯೆಗೆ ನಿವಾಸಿಗಳು ಅಡ್ಡಿಪಡಿಸಿದ್ದು ಐಪಿಸಿ 353ರ ಅಡಿ ಸ್ಪಷ್ಟ ಉಲ್ಲಂಘನೆ ಆಗಿದೆʼ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ʻಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ ನಂತರವಷ್ಟೇ, ಅತಿಕ್ರಮಣದಿಂದ ವಶಪಡಿಸಿಕೊಂಡ ಜಾಗಕ್ಕೆ ಬಿಬಿಎಂಪಿ ಅಧಿಕಾರಿಗಳು ಬೇಲಿ ಹಾಕಲು ಸಾಧ್ಯವಾಯಿತು ಎಂಬುದು ಒಪ್ಪಿಕೊಂಡ ಸತ್ಯ. ಆದ್ದರಿಂದ, ಈ ಪ್ರಕರಣವು ತನಿಖಾರ್ಹ ಅಪರಾಧವಲ್ಲ ಎಂದು ಹೇಳಲಾಗುವುದಿಲ್ಲ. ತನಿಖೆಯನ್ನು ಮುಂದುವರಿಸಲು ಪೊಲೀಸರಿಗೆ ಸ್ವಾತಂತ್ರ್ಯವಿದೆʼ ಎಂದು ನ್ಯಾಯಮೂರ್ತಿ ನಟರಾಜನ್ ಸೂಚಿಸಿದರು.

ಮಾರ್ಚ್ 21, 2020ರಂದು ಮಹದೇವಪುರ ವಿಭಾಗದ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಮಾಲತಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ʻಮಹದೇವಪುರ ಗ್ರಾಮದ ವಿವಿಧ ಸರ್ವೆ ನಂಬರ್ಗಳಲ್ಲಿನ ರಾಜಕಾಲುವೆ ಒತ್ತುವರಿ ತೆರವಿಗೆ 2020ರ ಜನವರಿ 16ರಂದು ಹೈಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ಅಧಿಕಾರಿಗಳು 2020ರ ಮಾರ್ಚ್ 9ರಂದು ಸರ್ವೆ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಅತಿಕ್ರಮಣ ತೆರವುಗೊಳಿಸಿ, ತಂತಿ ಬೇಲಿ ಕಾಮಗಾರಿ ನಡೆಸಲು ಎಡಿಎಲ್ಆರ್ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಹೋದಾಗ ಅಪಾರ್ಟ್‌ಮೆಂಟ್ ಮಾಲೀಕರು/ನಿವಾಸಿಗಳು ಅಕ್ರಮವಾಗಿ ಜಮಾಯಿಸಿ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸದಂತೆ ಹಾಗೂ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸದಂತೆ ತಡೆದಿದ್ದಾರೆʼ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಮ್ಮ ವಿರುದ್ಧ ಆರಂಭಿಸಿರುವ ವಿಚಾರಣಾ ಕ್ರಮವನ್ನು ಪ್ರಶ್ನಿಸಿದ ಮೋಹಪಾತ್ರ ಮತ್ತು ಇತರರು, ʻಬಿಬಿಎಂಪಿ ಅಧಿಕಾರಿಗಳು ಈಗಾಗಲೇ 0.3 ಗುಂಟೆ ಪ್ರದೇಶದಲ್ಲಿ ಅತಿಕ್ರಮಣವನ್ನು ತೆರವುಗೊಳಿಸಿ ಬೇಲಿ ಹಾಕಿದ್ದಾರೆ. ಆದ್ದರಿಂದ ಹೆಚ್ಚಿನ ಸಮೀಕ್ಷೆ ನಡೆಸುವುದು ಏನೂ ಇಲ್ಲʼ ಎಂದು ವಾದಿಸಿದ್ದರು. ಅವರ ಪ್ರಕಾರ, ʻನಾವು ಶಾಂತಿಯುತವಾಗಿ ಮುಷ್ಕರ ನಡೆಸಿದ್ದೇವೆ ಮತ್ತು ಪೊಲೀಸರು ಅಥವಾ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಂದೋಲನ ನಡೆಸಲಿಲ್ಲʼ ಎಂದು ಹೇಳಿಕೊಂಡಿದ್ದಾರೆ.

ʻಪ್ರಕರಣದಲ್ಲಿ ತಿಳಿಸಲಾದ ಅಪಾರ್ಟ್‌ಮೆಂಟ್ ನಿವಾಸಿಗಳು ನಾವಾಗಿರುವ ಕಾರಣ ಇದನ್ನು ಕಾನೂನು ಬಾಹಿರ ಗುಂಪು ಸೇರಿದ್ದು ಎಂದು ಕರೆಯಲಾಗದು ಮತ್ತು ಅಡ್ಡಿಪಡಿಸುವ ಯಾವುದೇ ಕ್ರಮ ಅಲ್ಲಿರಲಿಲ್ಲʼ ಎಂದೂ ಅವರು ವಾದಿಸಿದ್ದರು.

Related News

spot_img

Revenue Alerts

spot_img

News

spot_img