ಬೆಂಗಳೂರು, ಏ. 08 : ಕೊನೆಗಾಲದಲ್ಲಾದರೂ ಸ್ವಂತ ಮನೆಯಲ್ಲಿ ನೆಲೆಸಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ಈಗ ಭಾರತದಲ್ಲಿ ಬಹುತೇಕರು ಸ್ವಂತ ಮನೆಯನ್ನು ಖರೀದಿಸಲು ಹವಣಿಸುತ್ತಿದ್ದಾರೆ. ಹೀಗಾಗಿಯೇ ಭಾರತದ ರಿಯಲ್ ಎಸ್ಟೇಟ್ ಬಹು ವೇಗವಾಗಿ ಬೆಳೆಯುತ್ತಿದೆ. ಬಾಡಿಗೆ ಕಟ್ಟಿ ಕಟ್ಟಿ ಸಾಕಾದವರೆಲ್ಲಾ ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂದು ಆಸೆ ಪಡುವುದು ತಪ್ಪೇನಲ್ಲ. ಆದರೆ, ಸ್ವಂತ ಮನೆಯನ್ನು ಖರೀದಿಸುವುದು ಸುಲಭದ ಮಾತೂ ಅಲ್ಲ. ಸ್ವಂತ ಮನೆಯಲ್ಲಿ ಜೀವನ ನಡೆಸುವುದು ಬಹುತೇಕರಿಗೆ ನೆಮ್ಮದಿಯನ್ನು ತಂದು ಕೊಡುತ್ತದೆ. ಆದರೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆ ಖರೀದಿ ಮಾಡುವುದು ತುಂಬಾನೇ ಕಷ್ಟ.
ಅದರಲ್ಲೂ ಮನೆ ಖರೀದಿ ಅಸಾಧ್ಯ ಎನ್ನುವವರೆಲ್ಲಾ ಈಗ ಹೆಚ್ಚಾಗಿ ಅಪಾರ್ಟ್ ಮೆಂಟ್ ಗಳನ್ನು ಖರೀದಿ ಮಾಡುತ್ತಾರೆ. ಫ್ಲಾಟ್ ಖರೀದಿದಾರರ ಸಂಖ್ಯೆಯೂ ಈಗ ಹೆಚ್ಚಾಗಿದ್ದು, ನಗರದ ತುಂಬೆಲ್ಲಾ ಅಪಾರ್ಟ್ ಮೆಂಟ್ ಗಳೇ ತುಂಬಿ ಹೋಗಿವೆ. ಆದರೆ, ಫ್ಲಾಟ್ ಗಳನ್ನು ಖರೀದಿಸುವಾಗ ಕೆಲ ವಿಚಾರಗಳ ಬಗ್ಗೆ ತೀರಾ ನೆಗಲೆಕ್ಟ್ ಮಾಡಿ ಬಿಡುತ್ತೇವೆ. ಅದರಿಂದ ಮನೆಗೆ ಹೋಗಿ ಸೇರಿಕೊಂಡ ಮೇಲೆ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಫ್ಲಾಟ್ ಅನ್ನು ಖರೀದಿಸುವಾಗ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ..
ಹೆಚ್ಚಿನ ಜನರು ಫ್ಲಾಟ್ ಖರೀದಿಸುವಾಗ ಕೇವಲ ಈಜುಕೊಳ, ಕ್ಲಬ್ ಹೌಸ್, ಇಂಡೋರ್ ಗೇಮ್ಸ್ ಅಥವಾ ಜಿಮ್ ಇದೆಯಾ ಎಂದು ನೋಡಿ ಫ್ಲಾಟ್ ಖರೀದಿಸಲು ಹೋಗಬೇಡಿ. ಇದಕ್ಕಿಂತ ಹೆಚ್ಚಿನ ಅಗತ್ಯತೆಗಳ ಬಗ್ಗೆಯೂ ಗಮನಿಸಬೇಕಾಗುತ್ತದೆ. ಫ್ಲಾಟ್ ಖರೀದಿಸುವ ಮೊದಲು ತಿಳಿದುಕೊಳ್ಳಬೇಕಾದ ವಿಚಾರವೆಂದರೆ, ಮೊದಲಿಗೆ ಕುಡಿಯುವ ನೀರಿನ ಸೌಲಭ್ಯದ ಬಗ್ಗೆ ಪರೀಶಿಲಿಸಿಕೊಳ್ಳಿ. ಸರಿಯಾದ ನೀರಿನ ವ್ಯವಸ್ಥೆ ಫ್ಲಾಟ್ ನಲ್ಲಿ ಸರಿಯಾಗಿ ಇದೆಯಾ ಎಂದು ನೋಡಬೇಕು. ಇಲ್ಲದಿದ್ದರೆ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇದರಿಂದ ನಿಮ್ಮ ನಿರ್ವಹಣೆ ಶುಲ್ಕವೂ ಹೆಚ್ಚಾಗುತ್ತದೆ.
ಪ್ರತಿ ಸೊಸೈಟಿಯು ಕೊಳಚೆ ನೀರು ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ತ್ಯಾಜ್ಯ ನೀರನ್ನು ಸೊಸೈಟಿಯಲ್ಲಿಯೇ ವಿಲೇವಾರಿ ಮಾಡಬೇಕು. ಆದರೆ, ಅನೇಕ ಬಿಲ್ಡರ್‌ಗಳು ಇದನ್ನು ಫಾಲೋ ಮಾಡುವುದಿಲ್ಲ. ಮನೆಯಿಂದ ಹೊರಬರುವ ಕೊಳಕು ನೀರನ್ನು ಟ್ಯಾಂಕರ್‌ಗಳ ಮೂಲಕವೇ ವಿಲೇವಾರಿ ಮಾಡಿಸುತ್ತಾರೆ. ಹಾಗಾಗಿ ಒಳಚರಂಡಿ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಇನ್ನು ನಿರ್ವಹಣೆ ಶುಲ್ಕವನ್ನು ಪರಿಶೀಲಿಸುವುದು ಪ್ರಮುಖ ವಿಚಾರವಾಗಿದೆ. ನಿರ್ವಹಣಾ ಶುಲ್ಕಗಳು ಸಮಾಜ ಮತ್ತು ಸಾಮಾನ್ಯ ಸೌಲಭ್ಯಗಳಿಗೆ ಮಾಸಿಕ ಶುಲ್ಕಗಳನ್ನು ಪಾವತಿಸಬೇಕು. ಸಾಮಾನ್ಯವಾಗಿ ಸರಿಯಾದ ಮಾಹಿತಿ ನೀಡುವುದಿಲ್ಲ.
ಫ್ಲಾಟ್ ಅನ್ನು ಆಯ್ಕೆ ಮಾಡುವಾಗ ಪಾರ್ಕಿಂಗ್ ಸ್ಥಳವನ್ನು ಹೊಂದಿರುವುದು ಅತ್ಯಗತ್ಯ. ಪಾರ್ಕಿಂಗ್ ಸ್ಥಳಕ್ಕಾಗಿ ಹೆಚ್ಚಾಗಿ ಫ್ಲಾಟ್ ಗೆ ಬೆಲೆ ನಿಗದಿ ಪಡಿಸಲಾಗುತ್ತದೆ. ಇದರ ಬಗ್ಗೆ ಮಾಹಿತಿಯನ್ನು ಹೊಂದಿರಿ. ನೀವು ಫ್ಲಾಟ್ ಅನ್ನು ಎಲ್ಲಿ ಖರೀದಿಸುತ್ತಿದ್ದೀರಿ. ಅದು RERA ದಲ್ಲಿ ನೋಂದಾಯಿಸಲ್ಪಟ್ಟಿದೆಯೇ ಎಂದು ತಿಳಿಯಿರಿ. ಮನೆ ಖರೀದಿಸುವ ಮೊದಲು, ನಿರ್ವಹಣಾ ಶುಲ್ಕ, ಪಾರ್ಕಿಂಗ್ ಸ್ಥಳ, ಕೊಳಚೆ ನೀರು ಸಂಸ್ಕರಣಾ ಘಟಕ, ಕುಡಿಯುವ ನೀರಿನ ವ್ಯವಸ್ಥೆಗಳ ಬಗ್ಗೆ ಖಚಿತವಾದ ಮಾಹಿತಿಯನ್ನು ಪಡೆದು ಫ್ಲಾಟ್ ಅನ್ನು ಖರೀದಿ ಮಾಡಿ.