ಬೆಂಗಳೂರು : ರಾಜ್ಯ ರಾಜಧಾನಿ ಸೇರಿದಂತೆ ನಗರ, ಪಟ್ಟಣ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ತಲೆಎತ್ತುತಿರುವ ರೆವಿನ್ಯೂ ಬಡಾವಣೆಗಳಲ್ಲಿ ಸೈಟ್ ಖರೀದಿಗೂ ಮುನ್ನ ಗ್ರಾಹಕರು ಎಚ್ಚರ ವಹಿಸಬೇಕು. ಇಲ್ಲವಾದರೆ, ತಾವೂ ಹೂಡಿಕೆ ಮಾಡಿರುವ ಬಂಡವಾಳ ನಷ್ಟವಾಗಲಿದೆ. ಬಡವ ಮತ್ತು ಮಧ್ಯಮ ವರ್ಗದ ಜನರು ಸ್ವಂತ ಸೈಟು ಮತ್ತು ಮನೆ ನಿರ್ಮಾಣದ ಸಲುವಾಗಿ ಕಡಿಮೆ ಬೆಲೆಯಲ್ಲಿ ಸಿಗಲಿವೆ ಎಂಬ ಕಾರಣಕ್ಕೆ ರೆವಿನ್ಯೂ ಲೇಔಟ್ಗಳು ಸೈಟ್ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಇವರನ್ನೇ ಟಾರ್ಗೆಟ್ ಮಾಡಿ ಸಿಲಿಕಾನ್ ಸಿಟಿಯ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕಂದಾಯ ನಿವೇಶಗಳು ತನ್ನ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿವೆ. ಇದಲ್ಲದೆ, ನಗರ ಸಭೆ, ಪಟ್ಟಣ ಸಭೆ, ಪುರಸಭೆ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಸುತ್ತಲ ಪ್ರದೇಶದಲ್ಲಿಯೂ ರೆವಿನ್ಯೂ ಲೇಔಟ್ಗಳು ನೂರಾರು ನಿರ್ಮಾಣಗೊಂಡಿವೆ. ಇಂತಹ ಲೇಔಟ್ಗಳನ್ನು ಕಂದಾಯ ಇಲಾಖೆ ಅನಧಿಕೃತ ಬಡಾವಣಿಗಳು ಎಂದು ಘೋಷಣೆ ಮಾಡುತ್ತಿದೆ. ಈ ಬಡಾವಣಿಗಳು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದದ ಕಾರಣ ಬೆಲೆ ಕಡಿಮೆ ಇರುತ್ತದೆ. ದಾಖಲೆ, ಪತ್ರಗಳಲ್ಲಿ ಕಾನೂನು ಬದ್ಧವಾಗಿ ಇರುವುದಿಲ್ಲ.
ಭೂಮಿ ವಾಸ್ತವ ತಿಳಿಯುವುದಿಲ್ಲ
ಬಹುತೇಕ ಕೃಷಿ ಭೂಮಿ ಅಥವಾ ಸರ್ಕಾರದಿಂದ ಮಂಜೂರಾಗಿ ಪೋಡಿ ಆಗದೆ ಇರುವ ಭೂಮಿಯಲ್ಲಿ ರೆವಿನ್ಯೂ ಲೇಔಟ್ಗಳು ನಿರ್ಮಾಣ ಮಾಡಲಾಗುತ್ತಿದೆ. ಅನಧಿಕೃತ ನಕ್ಷೆಯನ್ನು ಸಿದ್ದಪಡಿಸಿ ರಸ್ತೆ, ಚರಂಡಿ ತೋರಿಸಿ ಅಡಿ ಲೆಕ್ಕದಲ್ಲಿ ಸೈಟ್ ನಂಬರ್ಗಳ ಮೇಲೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕ್ರಯ ಪತ್ರ ಮಾಡಿಕೊಡುತ್ತಾರೆ. ಈ ಪತ್ರಗಳ ಮೇಲೆ ಖಾತೆಗಳು ಗ್ರಾಹಕರ ಹೆಸರಿಗೆ ಇ-ಖಾತಾದಲ್ಲಿ ವರ್ಗಾವಣೆ ಆಗುವುದಿಲ್ಲ. ಸರ್ಕಾರಿ ಗೋಮಾಳ, ರಾಜಕಾಲುವೆ, ರಸ್ತೆ ಇದ್ದರೂ ಮೇಲ್ನೋಟಕ್ಕೆ ಯಾವುದು ಗೊತ್ತಾಗುವುದಿಲ್ಲ. ಭವಿಷ್ಯದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.
ಪಹಣಿ ಬದಲಾಗುವುದಿಲ್ಲ
ರೆವಿನ್ಯೂ ಲೇಔಟ್ಗಳು ಭೂ ಪರಿವರ್ತನೆ ಮತ್ತು ನಕ್ಷೆ ಮಂಜೂರು ಆಗದ ಪರಿಣಾಮ ಪಹಣಿ ರದ್ದು ಆಗದೆ ಮೂಲ ವಾರಸುದಾರನ ಹೆಸರಿನಲ್ಲಿ ಇರುತ್ತದೆ. ಇತ್ತ ಮಾರಾಟಗಾರರು ಸೈಟ್ ನಂಬರ್ ಮೇಲೆ ಖರೀದಿದಾರನಿಗೆ ಮಾರಾಟ ಮಾಡುತ್ತಾರೆ. ಕಂದಾಯ ಇಲಾಖೆಯಲ್ಲಿ ಎಷ್ಟೇ ವರ್ಷವಾದರೂ ಮೂಲ ವಾರಸುದಾರನ ಹೆಸರಿನಲ್ಲಿ ಪಹಣಿ ತೋರಿಸಲಿದೆ. ಭವಿಷ್ಯದಲ್ಲಿ ಮಕ್ಕಳು ಅಥವಾ ಮೊಮ್ಮಕ್ಕಳು ಪಹಣಿ ಆಧಾರದ ಮೇಲೆ ಕೋರ್ಟ್ನಲ್ಲಿ ಕೇಸ್ ದಾಖಲಿಸಲು ಅವಕಾಶವಿದೆ. ಇಂತಹ ಅನೇಕ ವ್ಯಾಜ್ಯಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ. ಇದಲ್ಲದೆ, ಭೂಗಳ್ಳರು ಸೈಟ್ಗಳನ್ನು ಒತ್ತುವರಿ ಅಥವಾ ಕಾನೂನು ಬಾಹಿರವಾಗಿ ಬೇರೆಯವರಿಗೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕ್ರಯ ಪತ್ರಗಳು ಆದರೂ ಸ್ಥಳೀಯ ಬಿಬಿಎಂಪಿ, ಪಂಚಾಯಿತಿ, ನಗರ ಸಭೆ, ಪುರಸಭೆಗಳಲ್ಲಿ ಕಾನೂನು ಬದ್ಧವಾಗಿ ಇ-ಖಾತಾ ಸಿಗುವುದಿಲ್ಲ. ಪರಿಣಾಮ ವಾರಸುದಾರನಿಗೆ ಸಂಪೂರ್ಣ ಹಕ್ಕು ಪಡೆಯಲು ಸಾಧ್ಯವಾಗುವುದಿಲ್ಲ. ಜತೆಗೆ ಬ್ಯಾಂಕ್ ಮತ್ತು ಫೈನಾನ್ಸ್ ಕಂಪನಿಗಳಿಂದ ಸಾಲ ಸೌಲಭ್ಯ ಸಿಗುವುದಿಲ್ಲ. ಮರು ಮಾರಾಟ ಮಾಡಲು ಹೋದಾಗ ಒಳ್ಳೆಯ ಬೆಲೆ ಸಿಗದೆ ಪರದಾಟ ನಡೆಬೇಕಾಗುತ್ತದೆ.
ಅನುಮೋದಿತ ಬಡಾವಣೆ ಲಾಭಗಳೇನು?
• ಸರ್ಕಾರದಿಂದ ಭೂ ಪರಿವರ್ತನೆ, ನಕ್ಷೆಗೆ ಅನುಮೋದನೆ ಸಿಕ್ಕಿರುತ್ತದೆ
•ಪಹಣಿ ನಂಬರ್ ಬದಲಿಗೆ ಸೈಟ್ ನಂಬರ್ ಬರಲಿವೆ, ಕಬ್ಬ ಮಾಡಲು ಅಸಾಧ್ಯ
• ರೇರಾ(ರಾಜ್ಯ ರಿಯಲ್ ಎಸ್ಟೇಟ್ ಪ್ರಾಧಿಕಾರ) ದಿಂದ ದಾಖಲೆ ಪತ್ರಗಳು ಪರಿಶೀಲನೆ
• ರಸ್ತೆ, ಚರಂಡಿ, ಸಿಎ ನಿವೇಶನ, ಪಾರ್ಕ್, ನೀರು, ವಿದ್ಯುತ್ ಸೌಲಭ್ಯ ಇರಲಿದೆ
• ಸುಲಭವಾಗಿ ಬ್ಯಾಂಕ್ ಸಾಲ ಸೌಲಭ್ಯ,
•ಇ-ಖಾತಾ, ಮರುಮಾರಾಟಕ್ಕೆ ಒಳ್ಳೆಯ ಬೆಲೆ
ಅದಕ್ಕಾಗಿ ಸಾರ್ವಜನಿಕರು ಬಿಡಿಎ ಸೇರಿದಂತೆ ಸಕ್ಷಮ ಪ್ರಾಧಿಕಾರದಿಂದ ಭೂ ಪರಿವರ್ತನೆ ಮಾಡಿ ಬಡಾವಣಿ ನಕ್ಷೆ ಅನುಮತಿ ಮತ್ತು ರೇರಾದಿಂದ ಅಧಿಕೃತ ಮುದ್ರೆ ಪಡೆದಿರುವ ಲೇಔಟ್ಗಳಲ್ಲಿ ಸೈಟ್ ಖರೀದಿಸಿದರೆ ಉತ್ತಮ. ಇದರಿಂದ ವಾರಸುದಾರರನಿಗೆ ಅಧಿಕೃತ ದಾಖಲೆ ಪತ್ರಗಳು ಸಿಗಲಿವೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳಿಂದ ತಮ್ಮ ಹೆಸರಿಗೆ ಖಾತೆ ವರ್ಗಾವಣೆ ಆಗಲಿದ್ದು, ಸಾಲಸೌಲಭ್ಯ ಪಡೆಯಲು ಅನುಕೂಲ ಆಗಲಿದೆ. ಅಲ್ಲದೆ, ಬಡಾವಣಿ ಸಂಪೂರ್ಣ ಅಭಿವೃದ್ಧಿ ಹೊಂದದೆ ಇದ್ದರೆ ಮಾರಾಟಕ್ಕೆ ರೇರಾ ಅನುಮತಿ ನೀಡುವುದಿಲ್ಲ, ಅದಕ್ಕಾಗಿ ಈ ಸೈಟುಗಳ ಬೆಲೆ ಕೊಂಚ ಹೆಚ್ಚಾದರೂ ಬಂಡವಾಳ ಹೂಡಿಕೆ ಮಾಡಿದರೇ ಮೋಸ ಆಗುವುದಿಲ್ಲ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.