ಬೆಂಗಳೂರು, ಡಿಸೆಂಬರ್ 03: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಡಾ. ಶಿವರಾಮ ಕಾರಂತ ಬಡಾವಣೆಗೆ ಜಮೀನು ನೀಡಿರುವ ರೈತರಿಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಕೊನೆಗೂ ನಿವೇಶನ ದೊರೆಯುತ್ತಿದೆ.
ಬಿಡಿಎ ಮತ್ತು ರೈತರು ಸೇರಿ 60:40 ಅನುಪಾತದಡಿ ನಿಗದಿಪಡಿಸಿರುವ ಶೇ. 40ರಷ್ಟು ಅಭಿವೃದ್ಧಿಪಡಿಸಿದ ನಿವೇಶನಗಳ ಭೂಪರಿಹಾರವನ್ನು ಆಯ್ಕೆ ಮಾಡಿಕೊಂಡಿರುವ 21 ಫಲಾನುಭವಿಗಳಿಗೆ ಶನಿವಾರ ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಯಿತು.
ಸುಪ್ರೀಂ ಕೋರ್ಟ್ ನಿರ್ದೇನದಂತೆ ಭೂಮಾಲೀಕರಿಗೆ ಐತೀರ್ಪು ರಚಿಸಿ ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ನೀಡಲು ಕ್ರಮ ವಹಿಸಲಾಗಿದೆ. ಅದರಂತೆ ಬಡಾವಣೆಗಾಗಿ ಭೂಮಿ ನೀಡಿರುವ 113 ರೈತರಿಗೆ ಈವರೆಗೆ ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗಿದೆ. ಬಡಾವಣೆ ವ್ಯಾಪ್ತಿಯಲ್ಲಿ ಬರುವ ಗುಣಿ ಅಗ್ರಹಾರ ಮತ್ತು ಮೇಡಿ ಅಗ್ರಹಾರ ಗ್ರಾಮದ ಒಟ್ಟು 21 ರೈತರಿಗೆ ಇಂದು Entitlement certificate ಗಳನ್ನು ವಿತರಿಸಲಾಗಿದೆ. ಶೀಘ್ರದಲ್ಲಿ ಇನ್ನೂ 27 ರೈತರಿಗೆ ವಿತರಿಸಲಾಗುವುದು.
ಸರ್ವೋಚ್ಚ ನ್ಯಾಯ್ಯಲಯ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್ ನೇತೃತ್ವದ ಸಮಿತಿಯು ಡಾ. ಶಿವರಾಮ ಕಾರಂತ ಬಡಾವಣೆಯ ಅಭಿವೃದ್ಧಿ ಮೇಲುಸ್ತುವಾರಿಯನ್ನು ವಹಿಸಿದ್ದು, ಸಮಿತಿಯ ನಿರ್ದೇಶನದಂತೆ ಬಿಡಿಎ ಆಯುಕ್ತ ಕುಮಾರ ನಾಯ್ಕ ಆಮತ್ತು ಉಪ ಆಯುಕ್ತೆ (ಭೂಸ್ವಾಧೀನ) ಡಾ. ಸೌಜನ್ಯ, ವಿಷೇಶ ಭೂ ಸ್ವಾಧೀನಾಧಿಕಾರಿ ಡಾ. ಬಿ.ಆರ್.ಹರೀಶ ನಾಯ್ಕ ರವರು ಇಂದು ರೈತರ ಸ್ವಗ್ರಾಮದಲ್ಲೆ ಅರ್ಹತಾ ಪ್ರಮಾಣ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ರೈತರು ಮತ್ತು ಭೂಮಾಲಿಕರು ಹಾಜರಿದ್ದರು.
ಸರ್ವೋಚ್ಚ ನ್ಯಾಯ್ಯಲಯದ ನಿರ್ದೇನದಂತೆ ಭೂಮಾಲಿಕರಿಗೆ ಐತೀರ್ಪು ರಚಿಸಿ ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಶೇಕಡ 60-40ರಂತೆ ಅಥವಾ ಹಣವನ್ನು ಪಡೆಯಬುದಾಗಿದ್ದು, ರೈತರು ಅಥವಾ ಭೂ ಮಾಲೀಕರು ತಮ್ಮ ಸ್ವ-ಇಚ್ಚೆಯಂತೆ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಂಡು ಲಿಖಿತ ರೂಪದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪ ಆಯುಕ್ತರು ಭೂಸ್ವಾಧೀನ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.