ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾಡಪ್ರಭು ಕೆಂಪೇಗೌಡ ಹಾಗೂ ಉದ್ದೇಶಿತ ಎಂಎ ಆರ್ ಗೆ ಭೂ ಸ್ವಾಧೀನ ಪಡಿಸಿಕೊಂಡಿರುವ ಪ್ರದೇಶದಲ್ಲಿ ಕಂದಾಯ ನಿವೇಶನದಾರರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಸುಮಾರು 5 ಎಕರೆ ಜಮೀನನ್ನು ತೆರವುಗೊಳಿಸಿ ತನ್ನ ವಶಕ್ಕೆ ಪಡೆದಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಚಲ್ಲಘಟ್ಟ ಗ್ರಾಮದ ಸರ್ವೆ ನಂ. 4 ಮತ್ತು 8 ಅನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಹಾಗೂ ಉದ್ದೇಶಿತ ಆರ್ಟಿರಿಯಲ್ ರಸ್ತೆಗೆ ಭೂಸ್ವಾಧೀನಪಡಿಸಿಕೊಂಡಿದ್ದು, ಇದರಲ್ಲಿ ಅನಧಿಕೃತವಾಗಿ ಕಂದಾಯ ನಿವೇಶನದಾರರು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ಕಾಮಗಾರಿಗೆ ಅಡಚಣೆ ಉಂಟುಮಾಡುತ್ತಿದ್ದರಿಂದ ಸುಮಾರು 5 ಎಕರೆ ಜಮೀನನ್ನು ತೆರವುಗೊಳಿಸಿ ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿದೆ. ಇದರಿಂದ ರಸ್ತೆಯನ್ನು ನಿರ್ಮಿಸಲು ಅನುಕೂಲವಾಗುತ್ತದೆ.ಈ ಕಾರ್ಯಾಚರಣೆಯನ್ನು ಪ್ರಾಧಿಕಾರದ ಆರಕ್ಷಕ ಅಧೀಕ್ಷಕರಾದ ಕೆ. ನಂಜುಂಡೇಗೌಡ ಅವರ ನೇತೃತ್ವದೊಂದಿಗೆ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಅಶೋಕ್, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಿಬ್ಬಂದಿಯವರೊಡನೆ ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್ ಆದ ಶಿವಾರೆಡ್ಡಿರವರ ಸಹಕಾರದೊಂದಿಗೆ ನೆರವೇರಿಸಲಾಯಿತು.