#BDA #Kempegowda Layout #Encrochment
ಬೆಂಗಳೂರು, ಅ. 16: ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎ ಜಾಗದಲ್ಲಿಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಬಿಡಿಎ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಬಿಡಿಎ ಎಸ್ಪಿ ನಂಜುಂಡೇಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಬಿಡಿಎ ಅಧಿಕಾರಿಗಳು,ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ನಿರ್ಮಾಣಗಳನ್ನು ತೆರವುಗೊಳಿಸಿ ಪ್ರಾಧಿಕಾರದ ಆಸ್ತಿಯನ್ನು ಮರುವಶ ಪಡೆದರು.
ಕೊಡಿಗೇಹಳ್ಳಿ ಗ್ರಾಮದ ಸರ್ವೆ ನಂ. 108ರಲ್ಲಿನ 5 ಎಕರೆ ಪ್ರದೇಶವನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಸ್ವಾಧೀನಪಡಿಸಿಕೊಂಡಿದ್ದು, ಈ ಪ್ರದೇಶದ ಪೈಕಿ 3 ಎಕರೆ 35 ಗುಂಟೆಯಲ್ಲಿ ರೆವಿನ್ಯೂ ನಿವೇಶನಗಳನ್ನು ರಚಿಸಲಾಗುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಅನೇಕ ಬಾರಿ ನೋಟೀಸ್ ಗಳನ್ನು ನೀಡಿದ್ದರೂ ಸಹ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಇಂದು ಬೆಳಿಗ್ಗೆ 3 ಎಕರೆ 35 ಗುಂಟೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ 7 ಶೆಡ್ ಹಾಗೂ 3 ಕಾಂಕ್ರೀಟ್ ಕಟ್ಟಡವನ್ನು ತೆರವುಗೊಳಿಸಿ, ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿತು. ಅಲ್ಲದೇ ಇವರ ವಿರುದ್ಧ ಭೂಕಬಳಿಕೆ ಕೇಸನ್ನು ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ನಿರ್ದೇಶನದಂತೆ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರಾದ ಕೆ. ನಂಜುಂಡೇಗೌಡ ಅವರ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಶೋಕ್, ಸಹಾಯಕ ಕಾರ್ಯಪಾಲಕ ಅಭಿಯಂತರರುಗಳನ್ನೊಳಗೊಂಡಂತೆ ತಾವರೆಕೆರೆಯ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಲಾಯಿತು.