ಬೆಂಗಳೂರು, ಏ. 15 : ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿರ್ಮಾಣ ಕಾಮಗಾರಿಗಾಗಿ ಬಿಡಿಎ ಗುತ್ತಿಗೆ ಪಡೆದ ಎರಡು ಕಂಪನಿಗಳಿಗೆ ಹೆಚ್ಚಿನ ಹಣವನ್ನು ಪಾವತಿ ಮಾಡಿದೆ. ಈ ಬಗ್ಗೆ ಬಿಡಿಎ ಆಂತರಿಕ ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ. ಬಿಡಿಎ ಎರಡು ಕಂಪನಿಗಳಿಗೆ ₹ 40 ಕೋಟಿ ರೂ. ಅನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ.
ಕೆಂಪೇಗೌಡ ಬಡಾವಣೆ ನಿವೇಶನಗಳ ರಚನೆ, ರಸ್ತೆಗಳು, ಚರಂಡಿಗಳ ನಿರ್ಮಾಣದಲ್ಲಿ ಗುತ್ತಿಗೆ ಕಂಪನಿಗಳು ಕಳಪೆ ಕಾಮಗಾರಿ ನಡೆದಿವೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಲೇಔಟ್‌ನಲ್ಲಿ ಕೈಗೊಂಡ ಕಾಮಗಾರಿಗಳ ಗುಣಮಟ್ಟ ಹಾಗೂ ಲೆಕ್ಕಪರಿಶೋಧನೆಯನ್ನು ಮಾಡಲಾಗಿತ್ತು. ಇದರ ಜವಾಬ್ದಾರಿಯನ್ನು ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ನೀಡಲಾಗಿತ್ತು. ಅಲ್ಕಾನ್ ಕನ್ಸಲ್ಟಿಂಗ್ ನ ಎಂಜಿನಿಯರ್‌ಗಳನ್ನು ಪರಿಶೀಲನೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು.
ನಿರ್ಮಾಣ ಕಾಮಗಾರಿಗಳ ವೆಚ್ಚ ಹಾಗೂ ಪಾವತಿಗಳು ದೋಷಪೂರಿತವಾಗಿದೆ ಎಂದು ಸಂಸ್ಥೆ ಪತ್ತೆ ಮಾಡಿದೆ.ಇಂತಹ ಲೋಪಗಳಿಂದಾಗಿ ಲೇಔಟ್ ನಿರ್ಮಾಣ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು ಎಂದು ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. 26 ಸಾವಿರ ನಿವೇಶನಗಳನ್ನು ಒಳಗೊಂಡ ಅಂದಾಜು ₹1,300 ಕೋಟಿ ವೆಚ್ಚದ ಬಡಾವಣೆಯನ್ನು ನಿರ್ಮಾಣ ಮಾಡಲು ಗುತ್ತಿಗೆ ನೀಡಲಾಗಿತ್ತು. ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿ ಮತ್ತು ಕೆಎಂಸಿ ಕನ್‌ಸ್ಟ್ರಕ್ಷನ್ ಎಂಬ ಎರಡು ಕಂಪನಿಗಳಿಗೆ 2014ರಲ್ಲಿ ಬಿಡಿಎ ಗುತ್ತಿಗೆ ನೀಡಲಾಗಿತ್ತು.
ಐದು ವರ್ಷಗಳ ಒಳಗೆ ಬಡಾವಣೆ ಕಾಮಗಾರಿ ಪೂರ್ಣಗೊಳಿಸುವ ಷರತ್ತನ್ನು ಕೂಡ ಬಿಡಿಎ ವಿಧಿಸಿತ್ತು. ನಿಗದಿತ ಗಡುವಿನ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಕಂಪನಿಗಳು ಆಸಕ್ತಿ ತೋರಿರಲಿಲ್ಲ. 9 ವರ್ಷಗಳ ಸುದೀರ್ಘ ಅವಧಿಯಲ್ಲಿ ಶೇ 60ರಷ್ಟು ಕಾಮಗಾರಿಗಳು ಮಾತ್ರವೇ ಪೂರ್ಣಗೊಂಡಿವೆ. ಹೀಗಿದ್ದರೂ ಕೂಡ ಬಿಡಿಎ ಇದೇ ಕಂಪನಿಗಳಿಗೆ ಹೆಚ್ಚುವರಿ ಹಣ ಪಾವತಿ ಮಾಡಿದೆ. ನಿರ್ದಿಷ್ಟ ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಹೆಚ್ಚುವರಿ ಹಣವನ್ನು ಸಂಸ್ಥೆಗಳು ಪಡೆದಿವೆ.