ಬೆಂಗಳೂರು, ಜೂ. 20 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆದಾಯ ಕ್ರೋಡೀಕರಣಕ್ಕಾಗಿ ಈಗ ನಾಡಪ್ರಭು ಕೆಂಪೇಗೌಡ ಲೇಔಟ್‌ನ ಮಾಲೀಕರಿಂದ ಶುಲ್ಕ ಪಡೆಯಲು ಮುಂದಾಗಿದೆ. 827 ಎಕರೆ ಜಮೀನಿನ ಭೂಮಾಲೀಕರಿಂದ ಬೆಟರ್‌ಮೆಂಟ್ ಶುಲ್ಕವನ್ನು ಸಂಗ್ರಹಿಸುವ ಸಲುವಾಗಿ ನೋಟೀಸ್ ನೀಡಿದೆ. ಶುಲ್ಕ ಸಂಗ್ರಹ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ನೋಟೀಸ್ ನೀಡಿದ ದಿನಾಂಕದಿಂದ 90 ದಿನಗಳಲ್ಲಿ ಬೆಟರ್ ಮೆಂಟ್ ಶುಲ್ಕವನ್ನು ಪಾವತಿಸುವಂತೆ ಬಿಡಿಎ ತಿಳಿಸಿದೆ.
ಈ ಬೆಟರ್ ಮೆಂಟ್ ಶುಲ್ಕವನ್ನು ಒಂದು ಬಾರಿ ವಿಧಿಸಲಾಗುತ್ತದೆ. ಆರಂಭದಲ್ಲೇ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ಈ ಶುಲ್ಕವನ್ನು ಪಡೆಯಲು ಬಿಡಿಎ ನಿರ್ಧರಿಸಲಾಗಿತ್ತು. ಆದರೆ, ಲೇಔಟ್ ನಿರ್ಮಾಣದ ವೇಳೆ ಕೈಬಿಡಲಾಗಿತ್ತು. ಬಳಿಕ ಈ ಸಂಬಂಧ ಸರ್ಕಾರ 2019 ರಲ್ಲಿ ಪ್ರಸ್ತಾವನೆಯನ್ನು ಅನುಮೋದಿಸಿತ್ತು. ಆದರೆ ತಾಂತ್ರಿಕ ಸಮಸ್ಯೆಗಳು ಹಾಗೂ ಜೊತೆಗೆ ಕೋವಿಡ್ ಸಾಂಕ್ರಾಮಿಕ ಕೂಡ ಇದ್ದಿದ್ದರಿಂದ ಶುಲ್ಕ ಸಂಗ್ರಹ ಪ್ರಕ್ರಿಯೆಯನ್ನು ಶುರು ಮಾಡಿರಲಿಲ್ಲ. ಇನ್ನು ಏಪ್ರಿಲ್ 20, 2023 ರಂದು ಅಧಿಕೃತವಾಗಿ ಬೆಟರ್ ಮೆಂಟ್ ಶುಲ್ಕವನ್ನು ಪಡೆಯಲು ಅಧಿಸೂಚನೆ ಹೊರಡಿಸಲಾಗಿದೆ.
ಕೆಂಪೇಗೌಡ ಲೇಔಟ್‌ನಲ್ಲಿರುವ ಒಂದು ಗುಂಟೆ ಭೂಮಿಗೆ 80,208 ರೂಪಾಯಿ ಬೆಟರ್ ಮೆಂಟ್ ಶುಲ್ಕವನ್ನು ಬಿಡಿಎ ವಿಧಿಸುತ್ತಿದೆ ಅಲ್ಲಿಗೆ ಒಂದು ಎಕರೆ ಜಾಗಕ್ಕೆ 32 ಲಕ್ಷಕ್ಕೂ ಅಧಿಕವಾಗುತ್ತದೆ. ನೋಟಿಸ್ ನೀಡಿದ ದಿನಾಂಕದಿಂದ ಮಾಲೀಕರಿಗೆ ಶುಲ್ಕ ಪಾವತಿಸಲು 90 ದಿನಗಳ ಸಮಯ ನೀಡಲಾಗುತ್ತದೆ. ಈ ಬಗ್ಗೆ ಬಿಡಿಎ ಭೂಸ್ವಾಧೀನ ವಿಭಾಗದ ಡೆಪ್ಯುಟಿ ಕಮಿಷನರ್ ಎ ಸೌಜನ್ಯ ತಿಳಿಸಿದ್ದಾರೆ. ಈ ಲೇಔಟ್ ನಲ್ಲಿ 357 ಪಾಲುದಾರರಿಂದ 265 ಕೋಟಿ ರೂಪಾಯಿ ಸಂಗ್ರಹಿಸಲು ಬಿಡಿಎ ಯೋಜಿಸಿದೆ.