ಬೆಂಗಳೂರು, ಜೂ. 30 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಕೋನದಾಸಪುರ ಗ್ರಾಮದಲ್ಲಿ ವಸತಿ ಯೋಜನೆ ಅಡಿಯಲ್ಲಿ ಅಪಾರ್ಟ್ ಮೆಂಟ್ ಅನ್ನು ನಿರ್ಮಾಣ ಮಾಡಿದೆ. ಬೆಂಗಳೂರಿನಲ್ಲಿ ಸ್ವಂತ ಮನೆಯನ್ನು ಖರೀದಿಸಬೇಕು ಎಂದು ಆಸೆ ಇರುವವರಿಗಾಗಿ ಬಿಡಿಎ ಫ್ಲಾಟ್ ಗಳನ್ನು ನಿರ್ಮಾಣ ಮಾಡಿದ್ದು, ಈಗ ಸಾರ್ವಜನಿಕರಿಗೆ ಲಭ್ಯವಿದೆ. ನಾಳೆ ಒಂದು ದಿನದ ಶಿಬಿರವನ್ನು ಏರ್ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಫ್ಲಾಟ್ ಗಳನ್ನು ಖರೀದಿಸುವವರಿಗೆ ಅನುಕೂಲವಾಗಲಿ ಎಂದು ಇದೇ ಮೊದಲ ಬಾರಿಗೆ ಫ್ಲಾಟ್ ಮಾರಲು ಅಪಾರ್ಟ್ ಮೆಂಟ್ ಬಳಿ ಶಿಬಿರ ಏರ್ಪಡಿಸಲು ಬಿಡಿಎ ಮುಂದಾಗಿದೆ. ಇಲ್ಲಿ ಫ್ಲಾಟ್ ಗಳನ್ನು ನೋಡಲು ಅವಕಾಶವಿದ್ದು, ಖರೀದಿಸಲು ಬಯಸುವವರು ನೋಂದಣಿ ಮಾಡಿಸಬಹುದಾಗಿದೆ. ಇನ್ನು ಲೋನ್ ಮಾಡಿ ಫ್ಲಾಟ್ ಖರೀದಿಸುವವರಿಗೆ ಇಲ್ಲೇ ಬ್ಯಾಂಕ್ ಸಿಬ್ಬಂದಿ ಕೂಡ ಇರಲಿದ್ದಾರೆ. ಈ ಅಪಾರ್ಟ್ ಮೆಂಟ್ ನ ಒಂದೊಂದು ಮಹಡಿಗೂ ಕೂಡ ಒಂದೊಂದು ಬೆಲೆಯನ್ನು ನಿಗದಿ ಮಾಡಲಾಗಿದೆ.
ಬಿದರಹಳ್ಳಿ ಹೋಬಳಿ ಕೋನದಾಸಪುರದಲ್ಲಿ ಸರ್ವೆ ನಂ: 22 ಮತ್ತು 23ರಲ್ಲಿ ಫ್ಲಾಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಒಟ್ಟು 672 ಫ್ಲಾಟ್‌ಗಳಿವೆ. ಇವೆಲ್ಲವೂ 2 ಬಿಎಚ್‌ಕೆ ಫ್ಲಾಟ್ ಗಳಾಗಿದ್ದು, ಸಾರ್ವಜನಿಕರು ಖರೀದಿಸಬಹುದಾಗಿದೆ. ಬಿಡಿಎ ವೆಬ್ ಸೈಟ್ ನಲ್ಲಿ ಪ್ರತೀ ಫ್ಲಾಟ್ ನ ಬೆಲೆಯನ್ನು ನಿಗದಿಪಡಿಸಲಾಗಿದೆ. ಅದರಂತೆಯೇ ಫ್ಲಾಟ್ ಗೆ ನಮೂದಿಸಿರುವ ಬೆಲೆಯನ್ನು ಪಾವತಿ ಮಾಡಬೇಕು. ಒಂದು ಫ್ಲಾಟ್ ಗೆ 48 ಲಕ್ಷದಿಂದ 53 ಲಕ್ಷದವರೆಗೂ ದರವನ್ನು ನಿಗದಿ ಪಡಿಸಲಾಗಿದೆ.
ಇನ್ನು ನೀರು ಹಾಗೂ ವಿದ್ಯುತ್ ವ್ಯವಸ್ಥೆಗಾಗಿ ಪಾವತಿಸಬೇಕಾದ ಮೊತ್ತವು ಬೇರೆಯಿದ್ದು, ಇದನ್ನು ಫ್ಲಾಟ್ ಬೆಲೆಯಲ್ಲಿ ಸೇರಿಸಿಲ್ಲ. ಇನ್ನು ಪಾರ್ಕಿಂಗ್ ಸ್ಥಳಕ್ಕಾಗಿ ಹೆಚ್ಚುವರಿಯಾಗಿ 2.50 ಲಕ್ಷಗಳನ್ನು ಪಾವತಿ ಮಾಡಬೇಕು. ಇನ್ನು ಆದ್ಯತೆಯ ಮೇರೆಗೆ ಫ್ಲಾಟ್ ಗಳನ್ನು ಹಂಚಿಕೆ ಮಾಡಲಾಗುವುದು. ಆದ್ಯತೆಯ ಮೇರೆಗೆ ಪಾರ್ಕಿಂಗ್ ಸ್ಥಳ, ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ. ಇನ್ನು ನಿರ್ಮಾಣ ಆಗುತ್ತಿರುವ ಫ್ಲಾಟ್ ಹಾಗೂ ನೋಂದಣಿಗೆ ಪ್ರತ್ಯೇಕವಾಗಿ ಹಣವನ್ನು ಮೊದಲು ಪಾವತಿಸಬೇಕಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಬಿಡಿಎ ವೆಬ್ ಸೈಟ್ ಗೆ ಲಾಗಿನ್ ಆಗಬಹುದಾಗಿದೆ.