ಬೆಂಗಳೂರು, ಫೆ. 07 : ಬೆಂಗಳೂರಿನಲ್ಲಿ ಹೈ ಟೆನ್ಷನ್ ವೈಯರ್ ಕೆಳಗಿರುವ ಮನೆಗಳಿಗೆ ನೋಟೀಸ್ ನೀಡಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಬಿಬಿಎಂಪಿ ಅದಾಗಲೇ ಸರ್ವೇ ಅನ್ನು ಪ್ರಾರಂಭಿಸಿದೆ. ಈಗಾಗಲೇ ಬೆಂಗಳೂರಿನಲ್ಲಿ 7,722 ಮನೆಗಳನ್ನು ಹೈಟೆನ್ಷನ್ ಲೈನ್ ಕೆಳಗೆ ಅಕ್ರಮವಾಗಿ ನಿರ್ಮಿಸಿರುವುದು ಪತ್ತೆಯಾಗಿದೆ. ಬೆಸ್ಕಾಂ ಪ್ರಕಾರ ಬೆಂಗಳೂರಿನಲ್ಲಿ ಹತ್ತು ಸಾವಿರ ಮನೆಗಳು ಅಕ್ರಮವಾಗಿ ಹೈ ಟೆನ್ಷನ್ ಲೈನ್ ಕೆಳಗೆ ನಿರ್ಮಿಸಲಾಗಿದೆ. ಈ ಬಗ್ಗೆ ಸರ್ವೇ ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ಅಕ್ರಮವಾಗಿ ಹೈ ಟೆನ್ಷನ್ ಲೈನ್ ಕೆಳಗೆ ವಾಸವಿರುವವರಿಗೆ ನೋಟೀಸ್ ನೀಡುವುದಾಗಿ ಬಿಬಿಎಂಪಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಹೈ ಟೆನ್ಷನ್ ಲೈನ್ ಹಾದು ಹೋಗಿರುವ ಜಾಗದಲ್ಲಿ ಯಾರೂ ಮನೆ ಅಥವಾ ಮತ್ಯಾವ ಕಟ್ಟಡವನ್ನೂ ನಿರ್ಮಾಣ ಮಾಡುವ ಹಾಗಿಲ್ಲ. ಇದು ಬಿಬಿಎಂಪಿಯ ನಿಯಮ. ಯಾಕೆಂದರೆ ಹೈ-ಟೆನ್ಷನ್ ಪವರ್ ಲೈನ್ ಹಾದು ಹೋಗಿರುವಲ್ಲಿ ಅತ್ಯಂತ ಎಚ್ಚರ ವಹಿಸಬೇಕು. ಈ ಲೈನ್ನಿಂದ 5 ಮೀಟರ್ ವರಗೆ `ಇಂಡಕ್ಷನ್~ (ಶಾಕ್) ಇರುತ್ತದೆ. ಇದು ಅಪಾಯವನ್ನು ತಂದೊಡ್ಡುತ್ತದೆ. ಹಾಗಾಗಿ, ಅದರಿಂದ ದೂರವೇ ನೆಲೆಸಬೇಕು. ಈ ವಿದ್ಯುತ್ ಅಲೆಗಳು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದರಿಂದ ಅದರ ಕೆಳಗೆ ವಾಸ ಮಾಡುವುದು ಅಪಾಯಕಾರಿಯಾಗಿದೆ.
ಆದ್ದರಿಂದ, ಸಾರ್ವಜನಿಕರು ಇಲಾಖೆಯ ನಿಯಮ ಪಾಲಿಸಬೇಕು. ಕೆಲವೊಮ್ಮೆ ಶಾಕ್ ನಿಂದ ಸಾವು ಕೂಡ ಸಂಭವಿಸುತ್ತದೆ. ಹೀಗಾಗಿ ಬಿಬಿಎಂಪಿ ಪದೇ ಪದೇ ಹೈ ಟೆನ್ಷನ್ ವೈಯರ್ ಕೆಳಗೆ ಮನೆ ನಿರ್ಮಿಸಬೇಡಿ ಎಂದು ಹೇಳುತ್ತಲೇ ಇರುತ್ತದೆ. ಮನೆ ನಿರ್ಮಿಸಲು ಪರ್ಮಿಷನ್ ಕೊಟ್ಟಿಲ್ಲ ಎಂದರೂ ಕೆಲವರು ಕೇಳುವುದೇ ಇಲ್ಲ. ಇನ್ನು ಕಾನೂನು ಉಲ್ಲಂಘಿಸಿ ಕಟ್ಟಡ ಕಟ್ಟಿಕೊಂಡಿರುವವರಿಗೂ ನೋಟಿಸ್ ನೀಡಲು ಬಿಬಿಎಂಪಿ ತೀರ್ಮಾನಿಸಿದೆ. ಜೊತೆಗೆ ಬೆಸ್ಕಾಂನವರು ನೀಡಿರುವ 10 ಸಾವಿರ ಮನೆಗಳ ಸರ್ವೇ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದು, ನಗರದ ಎಲ್ಲಾ ವಲಯ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಇನ್ನು ಕಳೆದ ಶನಿವಾರ 24 ವರ್ಷದ ಯುವಕ ತನ್ನ ಮನೆಯ ಮೇಲೆ ಹಾದು ಹೋಗಿರುವ 220 ಕೆವಿಯ ಹೈ ಟೆನ್ಷನ್ ಲೈನ್ ಅನ್ನು ಮುಟ್ಟಿದ್ದು, ಪರಿಣಾಮವಾಗಿ ಯುವಕ ಶೇ. 90ರಷ್ಟು ಸುಟ್ಟ ಗಾಯಗಳಾಗಿತ್ತು. ಯುವಕನನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ, ಕೊನೆಯುಸಿರೆಳೆದಿರುವ ಘಟನೆ ನಗರದಲ್ಲಿ ನಡೆದಿದೆ. ಇನ್ನು ಇದಲ್ಲದೇ, ಸಂಕ್ರಾಂತಿ ಹಬ್ಬದ ದಿನ ವಿಶ್ವೇಶ್ವರಯ್ಯ ಲೇಔಟ್ ನಲ್ಲಿರುವ ಮನೆ ಮೇಲೆ ಗಾಳಿಪಟ ಹಾರಿಸಲು ಹೋದ 11 ವರ್ಷದ ಬಾಲಕ ಅಬೂಬಕ್ಕರ್ ಹೈ-ಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದ. ಬೆಂಗಳುರಿನಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಅಕ್ರಮವಾಗಿ ಹೈ-ಟೆನ್ಷನ್ ಲೈನ್ ಕೆಳಗೆ ಮನೆ ನಿರ್ಮಿಸಿರುವುದು ಎಂದು ಬಿಬಿಎಂಪಿ ಹೇಳಿದೆ.