ಬೆಂಗಳೂರು, ಮಾ. 01 : ರಾಜ್ಯ ಬಜೆಟ್ ನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಬಿಬಿಎಂಪಿಗೆ ಅನುದಾನವನ್ನು ನೀಡಿದೆ. ರಾಜ್ಯ ಬಜೆಟ್ ನಲ್ಲಿ ನೀಡಿದ ಅನುದಾನವನ್ನು ಆಧಾರಿಸಿ ಇದೀಗ ಬಿಬಿಎಂಪಿ ತನ್ನ ಬಜೆಟ್ ಅನ್ನು ಸಿದ್ಧಗೊಳಿಸಿದೆ. ಮಾರ್ಚ್ 2 ರಂದು ಅಂದರೆ ನಾಳೆ ಬಿಬಿಎಂಪಿ ಬಜೆಟ್ ಮಂಡನೆಯನ್ನು ಮಾಡಲಿದೆ. ಈ ವರ್ಷ ಅಂದಾಜು 10 ಸಾವಿರ ಕೋಟಿ ರೂ.ಗೂ ಅಧಿಕ ಗಾತ್ರದ ಬಜೆಟ್ ಅನ್ನು ಬಿಬಿಎಂಪಿ ಮಂಡಿಸುವ ಸಾಧ್ಯತೆ ಇದೆ.
ಇಂದು ಬಜೆಟ್ ಪುಸ್ತಕ ಮುದ್ರಣಗೊಳ್ಳಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಪುರಭವನದಲ್ಲಿ ಬಜೆಟ್ ಮಂಡನೆ ಆರಂಭವಾಗಲಿದೆ. ಕಳೆದ ವರ್ಷ ಅಂದರೆ 2022-23 ರನೇ ಸಾಲಿನಲ್ಲಿ ಬಿಬಿಎಂಪಿ 10,943.54 ಕೋಟಿ ರೂ. ನ ಬಜೆಟ್ ಅನ್ನು ಮಂಡಿಸಿತ್ತು. ಇದರ ಅನ್ವಯ ಈ ವರ್ಷ 4,200 ಕೋಟಿ ರೂ ಅನ್ನು ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿತ್ತು. ಆದರೆ, ಬಿಬಿಎಂಪಿ ಮಾಡಿರುವ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಇದರಿಂದ ಬಿಬಿಎಂಪಿ ಆದಾಯದಿಂದ ಬೆಂಗಳೂರಿನಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವುದು ಕಷ್ಟಕರವಾಗಿದೆ. ಈಗಾಗಲೇ ಬಿಬಿಎಂಪಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ.
ಇದುವರೆಗೂ 3 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ. ರಾಜ್ಯ ಸರ್ಕಾರ ಬಜೆಟ್ ನಲ್ಲಿ ಬಿಬಿಎಂಪಿಗೆ 6 ಸಾವಿರ ಕೋಟಿ ರೂ. ಅನುದಾನವನ್ನು ನೀಡಿದೆ. ಸರ್ಕಾರ ನೀಡಿರುವ ಅನುದಾನದ ಜೊತೆಗೆ 4 ಸಾವಿರ ಕೋಟಿ ಅನ್ನು ಸೇರಿಸಿ ಒಟ್ಟಾರೆಯಾಗಿ 10ಸಾವಿರ ಕೋಟಿ ರೂ. ನ ಬಜೆಟ್ ಅನ್ನು ಬಿಬಿಎಂಪಿ ಮಂಡಿಸಬಹುದು ಎಂದು ಅಂದಾಜಿಸಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ 11 ಮೇಲ್ಸೇತುವೆ ನಿರ್ಮಾಣ ಸೇರಿದಂತೆ, ರಸ್ತೆ ನಿರ್ಮಾಣ, ಮೂಲಸೌಕರ್ಯ, ಅಭಿವೃದ್ಧಿ ಸೇರಿದಂತೆ ಹಲವು ಕೆಲಸಗಳಿಗೆ ಹಣ ಮೀಸಲಿಡಬೇಕಿದೆ. ಇದರ ಜೊತೆಗೆ ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಂಗಳೂರಿಗರನ್ನು ಸೆಳೆಯಲು ಮತ್ತಷ್ಟು ಯೋಜನೆಗಳನ್ನು ಜಾರಿ ಮಾಡಬೇಕಿದೆ.
ವಸತಿ ಯೋಜನೆ: ಇನ್ನು ರಾಜ್ಯದ ಗ್ರಾಮಗಳಿಂದ ಉದ್ಯೋಗವನ್ನು ಅರಸಿ ಸಾಕಷ್ಟು ಹೆಣ್ಣು ಮಕ್ಕಳು ಬೆಂಗಳೂರಿಗೆ ಆಗಮಿಸುತ್ತಾರೆ. ಇವರಿಗಾಗಿ ವಸತಿ ಯೋಜನೆಯನ್ನು ಘೊಷಿಸುವ ಸಾಧ್ಯತೆ ಇದೆ. ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಮಹಿಳೆಯರು ಮತ್ತು ಯುವತಿಯರಿಗಾಗಿ ಹಾಸ್ಟೆಲ್ ವ್ಯವಸ್ಥೆಯನ್ನು ಬಿಬಿಎಂಪಿ ಕಲ್ಪಿಸುವ ನಿರೀಕ್ಷೆ ಇದೆ. ಇದರೊಂದಿಗೆ ನಿರಾಶ್ರಿತ ವೃದ್ಧರಿಗಾಗಿಯೂ ವಸತಿ ಯೋಜನೆಯನ್ನು ಜಾರಿಗೊಳಿಸಬೇಕಿದೆ. ವೃದ್ಧರಿಗಾಗಿ ಶ್ರವಣ ಕುಮಾರ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಾಧ್ಯತೆ ಇದೆ.
ಇಂದಿರಾ ಕ್ಯಾಂಟೀನ್ ಗೆ ಅನುದಾನ: ಇನ್ನು 2017ರಲ್ಲಿ ಸರ್ಕಾರದ ಅನುದಾನದಲ್ಲಿ ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಮಟೀನ್ ಅನ್ನು ಪ್ರಾರಂಭಿಸಲಾಯ್ತು. ಆದರೆ, ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ. ಹಾಗಾಗಿ ಬಿಬಿಎಂಪಿಯೇ ಈ ಬಾರಿ ಇಂದಿರಾ ಕ್ಯಾಂಟೀನ್ ಗೆ ಅನುದಾನವನ್ನು ಘೊಷಿಸುವ ಸಾಧ್ಯತೆ ಇದೆ. ಇದಕ್ಕಾಗಿ ಬಿಬಿಎಂಪಿ ಸುಮಾರು 50 ಸಾವಿರ ಕೋಟಿ ಅನುದಾನವನ್ನು ಮೀಸಲಿಡುವ ಸಾಧ್ಯತೆ ಇದೆ. ಈ ಮೂಲಕ ಪುನಃ ಇಂದಿರಾ ಕ್ಯಾಂಟೀನ್ ಗಳಿಗೆ ಹೊಸ ಚೈತನ್ಯ ಸಿಗಲಿದೆ.
ಇವನ್ನು ಹೊರತು ಪಡಿಸಿ ಬಿಬಿಎಂಪಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಬೇಕಿದೆ. ಈಗಾಗಲೇ ಇರುವ ಯೋಜನೆಗಳಿಗೆ ಅನುದಾನ ಮೀಸಲಿಡಬೇಕಿದೆ. ಬೆಂಗಳೂರಿನಲ್ಲಿ ಚರಂಡಿ ಅಭಿವೃದ್ಧಿ, ಜಂಕ್ಷನ್ ಅಭಿವೃದ್ಧಿ, ರಸ್ತೆ ನಿರ್ಮಾಣ, ಹೈ ಡೆನ್ಸಿಟಿ ಕಾರಿಡಾರ್, ತ್ಯಾಜ್ಯ ಸಂಸ್ಕರಣಾ ಘಟಕ, ಆರೋಗ್ಯ ವ್ಯವಸ್ಥೆ, ಮೂಲಸೌಕರ್ಯ ಸೇರಿದಂತೆ ಸಾಕಷ್ಟು ಕೆಲಸಗಳಿಗೆ ಬಜೆಟ್ ಮೀಸಲಿಡಲಿದೆ. ಇನ್ನು ಈ ಬಾರಿಯೂ ಬಿಬಿಎಂಪಿ ಅಧಿಕಾರಿಗಳಿಂದಲೇ ಬಜೆಟ್ ಮಂಡನೆಯಾಗಲಿದೆ. ಬಿಬಿಎಂಪಿ ಸದಸ್ಯರ ಅವಧಿ 2020 ರಲ್ಲೇ ಮುಕ್ತಾಯಗೊಂಡಿದೆ. ಆದರೆ ಈ ವರೆಗೂ ಚುನಾವಣೆ ನಡೆದಿಲ್ಲ. ಹೀಗಾಗಿ ಕಳೆದ ಎರಡು ವರ್ಷದಿಂದ ಅಧಿಕಾರಿಗಳೇ ಬಜೆಟ್ ಅನ್ನು ಮಂಡಿಸುತ್ತಿದ್ದು, ಈ ವರ್ಷವೂ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಜಯರಾಮ ರಾಯಪುರ ಅವರೇ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ.