ಬೆಂಗಳೂರು, ಫೆ. 21 : ಕೇಂದ್ರ ಸರ್ಕಾರದ ಬಜೆಟ್ ಮುಗಿದು ಕಳೆದ ವಾರ ರಾಜ್ಯ ಸರ್ಕಾರದ ಬಜೆಟ್ ಅನ್ನು ಕೂಡ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದರು. ರಾಜ್ಯ ಬಜೆಟ್ ನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಬಿಬಿಎಂಪಿಗೆ ಅನುದಾನವನ್ನು ನೀಡಿದೆ. ರಾಜ್ಯ ಬಜೆಟ್ ನಲ್ಲಿ ನೀಡಿದ ಅನುದಾನವನ್ನು ಆಧಾರಿಸಿ ಇದೀಗ ಬಿಬಿಎಂಪಿ ತನ್ನ ಬಜೆಟ್ ಅನ್ನು ಸಿದ್ಧಗೊಳಿಸುತ್ತಿದೆ. ಈಗಾಗಲೇ ಬಜೆಟ್ ಸಿದ್ಧತೆ ಆರಂಭಗೊಂಡಿದೆ. ಇದೇ ತಿಂಗಳೂ ಫೆಬ್ರವರಿ 24 ರೊಳಗೆ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಯ ಅನುಮೋದನೆಗಾಗಿ ಕರಡು ಸಲ್ಲಿಸಲಾಗುತ್ತದೆ. ಮಾರ್ಚ್ 3 ರಂದು ಬಿಬಿಎಂಪಿ ಬಜೆಟ್ ಮಂಡನೆ ಆಗುವ ನಿರೀಕ್ಷೆ ಇದೆ.
ಈ ಬಗ್ಗೆ ಬಿಬಿಎಂಪಿ ಹಣಕಾಸು ಮೂಲಗಳು ಮಾಹಿತಿ ನೀಡಿದ್ದು, ಈ ವರ್ಷ ಅಂದಾಜು 10 ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಬಿಬಿಎಂಪಿ ಮಂಡಿಸಲಿದೆ ಎಂದು ಊಹಿಸಿಲಾಗಿದೆ. ಕಳೆದ ವರ್ಷ ಅಂದರೆ 2022-23 ರನೇ ಸಾಲಿನಲ್ಲಿ ಬಿಬಿಎಂಪಿ 10,943.54 ಕೋಟಿ ರೂ. ನ ಬಜೆಟ್ ಅನ್ನು ಮಂಡಿಸಿತ್ತು. ಇದರ ಅನ್ವಯ ಈ ವರ್ಷ 4,200 ಕೋಟಿ ರೂ ಅನ್ನು ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿತ್ತು. ಆದರೆ, ಇದುವರೆಗೂ 3 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ. ರಾಜ್ಯ ಸರ್ಕಾರ ಬಜೆಟ್ ನಲ್ಲಿ ಬಿಬಿಎಂಪಿಗೆ 6 ಸಾವಿರ ಕೋಟಿ ರೂ. ಅನುದಾನವನ್ನು ನೀಡಿದೆ.
ಸರ್ಕಾರ ನೀಡಿರುವ ಅನುದಾನದ ಜೊತೆಗೆ 4 ಸಾವಿರ ಕೋಟಿ ಅನ್ನು ಸೇರಿಸಿ ಒಟ್ಟಾರೆಯಾಗಿ 10ಸಾವಿರ ಕೋಟಿ ರೂ. ನ ಬಜೆಟ್ ಅನ್ನು ಬಿಬಿಎಂಪಿ ಮಂಡಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಬಿಬಿಎಂಪಿ ಮಾಡಿರುವ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಇದರಿಂದ ಬಿಬಿಎಂಪಿ ಆದಾಯದಿಂದ ಬೆಂಗಳೂರಿನಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವುದು ಕಷ್ಟಕರವಾಗಿದೆ. ಈಗಾಗಲೇ ಬಿಬಿಎಂಪಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಆದರೆ, ಈ ಬಾರಿಯ ಬಜೆಟ್ ನಲ್ಲಿ 11 ಮೇಲ್ಸೇತುವೆ ನಿರ್ಮಾಣ ಸೇರಿದಂತೆ, ರಸ್ತೆ ನಿರ್ಮಾಣ, ಮೂಲಸೌಕರ್ಯ, ಅಭಿವೃದ್ಧಿ ಸೇರಿದಂತೆ ಹಲವು ಕೆಲಸಗಳಿಗೆ ಹಣ ಮೀಸಲಿಡಬೇಕಿದೆ.
ಇನ್ನು ಈ ಬಾರಿಯೂ ಬಿಬಿಎಂಫಿ ಅಧಿಕಾರಿಗಳಿಂದಲೇ ಬಜೆಟ್ ಮಂಡನೆಯಾಗಲಿದೆ. ಬಿಬಿಎಂಪಿ ಸದಸ್ಯರ ಅವಧಿ 2020 ರಲ್ಲೇ ಮುಕ್ತಾಯಗೊಂಡಿದೆ. ಆದರೆ ಈ ವರೆಗೂ ಚುನಾವಣೆ ನಡೆದಿಲ್ಲ. ಹೀಗಅಗಿ ಕಳೆದ ಎರಡು ವರ್ಷದಿಂದ ಅಧಿಕಾರಿಗಳೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಈ ವರ್ಷವೂ ಇದು ಮುಂದುವರಿಯಲಿದೆ. ಕಳೆದ ಎರಡೂ ವರ್ಷ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಬಜೆಟ್ ಅನ್ನು ಮಂಡನೆ ಮಾಡಿದ್ದರು. ಈ ಬಾರಿಯೂ ಅವರೇ ಮಂಡಿಸಬಹುದು ಎಂದು ಊಹಿಸಲಾಗಿದೆ. ಸರ್ಕಾರದಿಂದ ಬಜೆಟ್ ಮಂಡನೆಗೆ ಅವಕಾಶ ಸಿಕ್ಕ ಬಳಿಕ ಮಂಡಿಸಬಹುದು.