ವಿಧಾನ ಪರಿಷತ್ತಿನ ಬಿಜೆಪಿಯ ಹಿರಿಯ ಸದಸ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ನೂತನ ಸಭಾಪತಿಯಾಗಿ ಇಂದು ಅಧಿಕಾರ ವಹಿಸಿಕೊಂಡರು. ನಿನ್ನೆ ಸಭಾಪತಿ ಹುದ್ದೆಗೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾದರು.ಕಳೆದ ನಾಲ್ಕು ದಶಕಗಳಿಂದ ಸತತವಾಗಿ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಹೊರಟ್ಟಿ ಅವರು, ೨೦೧೮ರ ಜೂನ್ ರಿಂದ ಡಿಸೆಂಬರ್‌ವರೆಗೆ ಮೊದಲ ಬಾರಿಗೆ ಸಭಾಪತಿಯಾಗಿದ್ದರು. ನಂತರ ೨೦೨೧ ಫೆಬ್ರವರಿಯಿಂದ ೨೦೨೨ರ ಮೇ ವರೆಗೆ ಎರಡನೇ ಬಾರಿಗೆ ಸಭಾಪತಿಯಾಗಿ, ಇದೀಗ ಮೂರನೇ ಬಾರಿಗೆ ಮೇಲ್ಮನೆ ಸಭಾಪತಿ ಹುದ್ದೆ ಅಲಂಕರಿಸಿ ಹೊರಟ್ಟಿ ದಾಖಲೆ ಬರೆದಿದ್ದಾರೆ.
ಪಕ್ಷೇತರ, ಜನತಾ ಪಕ್ಷ, ಲೋಕಶಕ್ತಿ, ನವ ನಿರ್ಮಾಣ ವೇದಿಕೆಯಿಂದ ತಲಾ ಒಂದು ಬಾರಿ ಪರಿಷತ್ ಸದಸ್ಯರಾಗಿದ್ದ ಹೊರಟ್ಟಿ ನಂತರ ತೆನೆ ಹೊತ್ತು ಜೆಡಿಎಸ್ ನಿಂದ 3 ಬಾರಿ ಆಯ್ಕೆಯಾಗಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಗಳಿಂದ ಜೆಡಿಎಸ್ ತೊರೆದು ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡು ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಗೊಂಡು 3ನೇ ಬಾರಿಗೆ ಸಭಾಪತಿ ಹುದ್ದೆಯ ಅಧಿಕಾರ ಸ್ವೀಕರಿಸುತ್ತಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿತ್ತು. ಮಂಗಳವಾರ ವಿಧಾನ ಪರಿಷತ್ ಕಾರ್ಯದರ್ಶಿಗಳಿಗೆ ಬಸವರಾಜ ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದರು. ಇದೀಗ ವಿಧಾನಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಹುದ್ದೆ ಅಲಂಕರಿಸಿಕೊಂಡಿದ್ದಾರೆ.
ಬಾಗಲಕೋಟೆಯ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಜನಿಸಿದ ಬಸವರಾಜ ಹೊರಟ್ಟಿ ಅವರು, ಪದವಿ ಶಿಕ್ಷಣವನ್ನು ಮುಧೋಳದ ಕಾಡಸಿದ್ಧೇಶ್ವರ ಕಾಲೇಜನಲ್ಲಿ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕ್ಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.ಶಿಕ್ಷಣ ಸಚಿವರಾಗಿ ತಂದಿರುವ ಹತ್ತು ಹಲವು ನಿರ್ಧಾರ ಹಾಗೂ ಬದಲಾವಣೆಗಳಿಂದ ಶಿಕ್ಷಕರಿಗೆ ಗುರಿ ಮತ್ತು ಧ್ಯೇಯ ನೀಡಿದ್ದಾರೆ. ಶಿಕ್ಷಕ ವೃತ್ತಿಯಿಂದ ಆರಂಭಗೊಂಡ ಹೊರಟ್ಟಿ ಅವರ ಹಾದಿ, ಇದೀಗ ಸಭಾಪತಿ ಆಗಿ ತಲುಪಿ ಎಲ್ಲರಿಗೂ ಅವರು ಮಾದರಿಯಾಗಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ನೂತನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ನಮಗೆ ಎಲ್ಲರೂ ಪರಿಚಯಸ್ಥರೇ, ಆದರೆ, ವಿರೋಧ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ಅವರಿಂದ ಹೇಗೆ ಕೆಲಸ ಮಾಡಿಸಬೇಕು ಎನ್ನುವುದು ಗೊತ್ತಿಲ್ಲ. ಆದರೆ, ಇದನ್ನು ಹೊರಟ್ಟಿ ಅವರಿಂದ ಕಲಿತುಕೊಳ್ಳಬೇಕು ಎಂದರು.ಶಿಕ್ಷಣ ಸಚಿವರಾಗಿ ತಂದಿರುವ ಹತ್ತು ಹಲವು ನಿರ್ಧಾರ ಹಾಗೂ ಬದಲಾವಣೆಗಳಿಂದ ಶಿಕ್ಷಕರಿಗೆ ಗುರಿ ಮತ್ತು ಧ್ಯೇಯ ನೀಡಿದ್ದಾರೆ.ಹೊಸ ಪ್ರೌಢ ಶಾಲೆ ನಿರ್ಮಾಣದಲ್ಲಿ ಬಸವರಾಜ ಹೊರಟ್ಟಿ ಅವರ ಕೊಡುಗೆ ಅಪಾರ ಎಂದು ಅವರು ತಿಳಿಸಿದರು.
ಸಭಾಪತಿ ಪೀಠದಲ್ಲಿದ್ದ ರಘುನಾಥ್ ಮಲ್ಕಾಪುರೆ ಅವರು ನೂತನ ಸಭಾಪತಿಯಾಗಿ ಹೊರಟ್ಟಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿ, ಸಭಾ ನಾಯಕರು ಹಾಗೂ ವಿಪಕ್ಷ ನಾಯಕರು ಹೊರಟ್ಟಿ ಅವರನ್ನು ಪೀಠದ ಬಳಿಗೆ ಕರೆ ತರಬೇಕೆಂದು ಕೋರಿದರು