ಬೆಂಗಳೂರು (ಜೂ.22): ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಸ್ಥಳೀಯರ ಮನವೊಲಿಸಲಾಗಿದೆ.
ಸ್ಥಳೀಯರಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ಈ ಹೆದ್ದಾರಿಯಲ್ಲಿ ಕಂಡುಬರುವ ಪ್ರತಿಯೊಂದು ಹಳ್ಳಿಗೂ ಸ್ಕೈವಾಕ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.
118 ಕಿ.ಮೀ ಉದ್ದದ ಈ ಹೆದ್ದಾರಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆ ದಾಟದಂತೆ ಬೇಲಿಗಳನ್ನು ನಿರ್ಮಿಸಲಾಗಿದೆ. ಆದರೆ ಈ ಬೇಲಿಗಳನ್ನು ಮುರಿದು ರಸ್ತೆ ದಾಟುತ್ತಿರುವ ಪ್ರಕರಣಗಳು ವರದಿಯಾಗಿವೆ.
ಒಟ್ಟು 117 ಕಿಮೀ ಉದ್ದದ ಮೇಲ್ಸೇತುವೆ ಮತ್ತು ಒಳಚರಂಡಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಬಹು ನಿರೀಕ್ಷಿತ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡಿದೆ. ಇಡೀ ದೇಶವೇ ಕರ್ನಾಟಕದತ್ತ ನೋಡುವಂತೆ ಮಾಡಿರುವ ಈ ಹತ್ತು ಪಥದ ಹೆದ್ದಾರಿ ಕಳೆದ ಕೆಲವು ತಿಂಗಳಿಂದ ಭಾರೀ ಸುದ್ದಿ ಮಾಡುತ್ತಿದೆ.
ಈ ಹೆದ್ದಾರಿಯು ಸರಾಸರಿ ಪ್ರಯಾಣದ ಸಮಯವನ್ನು ಮೂರು ಗಂಟೆಗಳಿಂದ ಕೇವಲ 90 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಪ್ರಸ್ತುತ ಈ ಹೆದ್ದಾರಿಯಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ವಾಹನಗಳು ಎರಡು ಗಂಟೆ ತೆಗೆದುಕೊಳ್ಳುತ್ತಿವೆ.
ಮಾರ್ಚ್ 2014 ರಲ್ಲಿ, ಕೇಂದ್ರ ಮೇಲ್ಮೈ ಸಾರಿಗೆ ಸಚಿವಾಲಯವು ದೇಶಾದ್ಯಂತ ಕೆಲವು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿತ್ತು. ಇದರಲ್ಲಿ ಬೆಂಗಳೂರು-ಮೈಸೂರು ಮಾರ್ಗವೂ ಒಂದಾಗಿತ್ತು. 2014ರಲ್ಲಿ ಯೋಜನೆಯ ಅಂದಾಜು ವೆಚ್ಚ 4,100 ಕೋಟಿ ಆಗಿದ್ದು, ಈಗ ಅದು ದುಪ್ಪಟ್ಟಾಗಿದೆ.