27.5 C
Bengaluru
Wednesday, June 26, 2024

Health: RTPCR test ರಿಪೋರ್ಟ್ ತಡವಾಗಿ ನೀಡಿದ್ದಕ್ಕೆ ಮಣಿಪಾಲ್ ಆಸ್ಪತ್ರೆ 14.750 ರೂ. ಗೆ ದಂಡ!

#Health #Consumer court #service default #Manipal Hospital

ಬೆಂಗಳೂರು, ನ. 16: ಎಷ್ಟೋ ಆಸ್ಪತ್ರೆಗಳು ಹಣಕ್ಕೆ ಕೊಡುವ ಮಹತ್ವ ರೋಗಿಗೆ ಆಗಲೀ ಅಥವಾ ಸೇವೆಗೆ ನೀಡುವುದಿಲ್ಲ. ಇದರ ಅನುಭವ ವಿದ್ದರೂ ಜನ ಸಾಮಾನ್ಯರು ಹಾಳಾಗಿ ಹೋಗಲಿ ಎಂದು ಸುಮ್ಮನಾಗಿಬಿಡುತ್ತಾರೆ. ಹೇಳಿದಂತೆ ನಡೆದುಕೊಳ್ಳದ ಆಸ್ಪತ್ರೆಗಳು ಆಗಲೀ ಲ್ಯಾಬ್ ಗಳು ನಡೆದುಕೊಳ್ಳದಿದ್ದರೆ ಅಂತವರ ವಿರುದ್ಧ ಗ್ರಾಹಕ ಹಿತ ರಕ್ಷಣಾ ಕಾಯ್ದೆ ಅಡಿ ನ್ಯಾಯ ಪಡೆಯಲು ವಿಫುಲ ಅವಕಾಶಗಳಿವೆ. ಇದಕ್ಕೆ ತಾಜಾ ಉದಾಹರಣೆ ಮಣಿಪಾಲ್‌ ಆಸ್ಪತ್ರೆಯ RTPCR test ಪ್ರಕರಣ.

RTPCR Test report default service: ಕರೋನಾ ಕಾಲದಲ್ಲಿ RTPCR ಟೆಸ್ಟ್‌ ಮಾಡಿ ಹೇಳಿದ ಸಮಯಕ್ಕೆ ವರದಿ ನೀಡದ ಪರಿಣಾಮ ಪ್ರತಿಷ್ಠಿತ ಮಣಿಪಾಲ್‌ ಆಸ್ಪತ್ರೆ 14.750 ರೂ. ದಂಡ ತೆತ್ತಿದೆ. ಮಣಿಪಾಲ್‌ ಆಸ್ಪತ್ರೆಗೆ ಈ ಮೊತ್ತ ಕ್ಷುಲ್ಲಕ ಎಂದೆನಿಸಬಹುದು. ಹೇಳಿದಂತೆ ನಡೆದುಕೊಳ್ಳದೇ ವ್ಯಕ್ತಿಗೆ ಮಾನಸಿಕ ಹಿಂಸೆ ಕೊಟ್ಟ ಪ್ರಕರಣದಲ್ಲಿ ಸಾಮಾನ್ಯ ಪ್ರಜೆ ನಡೆಸಿದ ಕಾನೂನು ಸಮರದಲ್ಲಿ ಮಣಿಪಾಲ್‌ ಆಸ್ಪತ್ರೆ ಸೋತಿರುವುದು ಬಹುಮುಖ್ಯ. ಆರ್‌ಟಿಪಿಸಿಆರ್ ಟೆಸ್ಟ್‌ ಮಾಡಲು ಕೇವಲ 750 ರೂ. ಸ್ವೀಕರಿಸಿದ್ದ ಮಣಿಪಾಲ್‌ ಆಸ್ಪತ್ರೆ ವರದಿಯನ್ನು ಹೇಳಿದ ಸಮಯಕ್ಕೆ ನೀಡದ ಕಾರಣ ಗ್ರಾಹಕ ವ್ಯಾಜ್ಯ ಪರಿಹಾರ ನ್ಯಾಯಾಲಯ ದಂಡವನ್ನು ವಿಧಿಸಿ ಮಹತ್ವದ ತೀರ್ಪು ನೀಡಿದೆ.

Case Study: ಆ ಮಹಿಳೆ ಹೆಸರು ರಾಜಶ್ರೀ. ಬೆಂಗಳೂರಿನ ಉತ್ತರಹಳ್ಳಿ ನಿವಾಸಿ. ಆರ್‌ಟಿಪಿಸಿಆರ್ ಪರೀಕ್ಷೆ ವರದಿಯನ್ನು ಹೇಳಿದ ಸಮಯಕ್ಕೆ ನೀಡದ ಕಾರಣಕ್ಕೆ ತನಗಾದ ನಷ್ಟದ ವಿರುದ್ಧ ಪರಿಹಾರ ಕೋರಿ ಮಣಿಪಾಲ್‌ ಆಸ್ಪತ್ರೆಯ ವಿರುದ್ಧ ಗ್ರಾಹಕ ಹಿತ ರಕ್ಷಣಾ ಕಾಯ್ದೆ ಅಡಿ ದಾವೆ ಸಲ್ಲಿಸಿ ಜಯ ಗಳಿಸಿದ್ದಾರೆ. ನಷ್ಟದ ಜತೆಗೆ ತನಗಾದ ಮಾನಸಿಕ ಹಿಂಸೆಗೂ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಶ್ರೀ ಅವರ ಪುತ್ರ ಗೌತಮ್ ಅಮೆರಿಕಾದಲ್ಲಿ ನೆಲೆಸಿದ್ದರು. 2021 ರಲ್ಲಿ ಬೆಂಗಳೂರಿಗೆ ಬಂದಿದ್ದ ಗೌತಮ್ ವಾಪಸು ಅಮೆರಿಕಾಗೆ ತೆರಳಲು ಕರೋನಾ ಪರೀಕ್ಷೆಗೆ ಒಳಪಡಬೇಕಿತ್ತು. ನೆಗಟೀವ್ ವರದಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನೀಡುವುದು ಕಡ್ಡಾಯವಾಗಿತ್ತು. ಮನೆ ಬಾಗಲಿಗೆ ಬಂದು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ ವರದಿ ನೀಡುವ ಬಗ್ಗೆ ಘೋಷಣೆ ಮಾಡಿದ್ದ ಮಣಿಪಾಲ್‌ ಆಸ್ಪತ್ರೆಯವರಿಗೆ ಕರೆ ಮಾಡಿದ್ದ ರಾಜಶ್ರೀ ಅವರು ತನ್ನ ಮಗನಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ ಅದೇ ದಿನ ಸಂಜೆ 6.30 ರ ಒಳಗೆ ವರದಿ ನೀಡುವಂತೆ ಕೋರಿದ್ದರು. ಮಗ ಅಮೆರಿಕಾಗೆ ತೆರಳುವ ಸಂಗತಿಯನ್ನು ಸಿಬ್ಬಂದಿಗೆ ಹೇಳಿದ್ದರು. ಮಣಿಪಾಲ್‌ ಆಸ್ಪತ್ರೆ ಸಿಬ್ಬಂದಿ ರಾಜಶ್ರೀ ಅವರ ಮನೆಗೆ ಹೋಗಿ ಅವರ ಪುತ್ರನ ಸ್ವಾಬ್ ಕಲೆಕ್ಷನ್‌ ಮಾಡಿದ್ದರು. ಸಂಜೆ ಆರು ಗಂಟೆಯಾದರೂ ಹೇಳಿದಂತೆ ಪರೀಕ್ಷಾ ವರದಿ ನೀಡಲಿಲ್ಲ.

ರಾತ್ರಿ ಹತ್ತು ಗಂಟೆಗೆ ವರದಿ ನೀಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಇದನ್ನು ನಂಬಿ ಗೌತಮ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ರಾತ್ರಿ ಹತ್ತು ಗಂಟೆಯಾದರೂ ಆರ್‌ಟಿಪಿಸಿಅರ್‌ ಪರೀಕ್ಷಾ ವರದಿಯನ್ನು ಮಣಿಪಾಲ್‌ ಆಸ್ಪತ್ರೆಯವರು ಒದಗಿಸಲಿಲ್ಲ. ಹೀಗಾಗಿ ಅನಿವಾರ್ಯವಾಗಿ ವಿಮಾನ ನಿಲ್ದಾಣದಲ್ಲಿ ಗೌತಮ್‌ 3000 ರೂ. ಪಾವತಿಸಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಟ್ಟಿದ್ದರು. ತನ್ನ ಮಗನಿಗೆ ಆದ ಸಮಸ್ಯೆಯ ಬಗ್ಗೆ ರಾಜಲಕ್ಷ್ಮೀ ಅವರು ಇ ಮೇಲ್ ಮೂಲಕ ಮಣಿಪಾಲ್‌ ಆಸ್ಪತ್ರೆಗೆ ಹೇಳಿದ್ದರು. ಹಣ ವಾಪಸು ನೀಡುವಂತೆ ಕೋರಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಈ ಕುರಿತು ರಾಜಶ್ರೀ ಆಸ್ಪತ್ರೆಗೆ ಲೀಗಲ್‌ ನೋಟಿಸ್ ನೀಡಿದರೂ ಅದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ.

Health: RTPCR test ರಿಪೋರ್ಟ್ ತಡವಾಗಿ ನೀಡಿದ್ದಕ್ಕೆ ದಂಡ ಪಾವತಿಸಲು ಮಣಿಪಾಲ್ ಆಸ್ಪತ್ರೆಗೆ ಸೂಚನೆ

ಆಸ್ಪತ್ರೆಯ ನಿರ್ಲಕ್ಷ್ಯತೆಗೆ ಬುದ್ಧಿ ಕಲಿಸಲು ಬೆಂಗಳೂರು ನಗರ ಗ್ರಾಹಕ ವ್ಯಾಜ್ಯ ನ್ಯಾಯಾಲಯದಲ್ಲಿ ಮಣಿಪಾಲ್ ಆಸ್ಪತ್ರೆ ವಿರುದ್ಧ ದಾವೆ ಸಲ್ಲಿಸಿದರು. ತನ್ನ ಮಗನಿಗೆ ಆರ್‌ಟಿಪಿಸಿಆರ್ ಟೆಸ್ಟ್‌ ವರದಿ ಪಡೆಯಲಾಗದೇ ತಾನು ಅನುಭವಿಸಿದ ನರಕ ಯಾಥನೆ ಆಗಿದ ನಷ್ಟದ ಬಗ್ಗೆ ನ್ಯಾಯಾಲಯಕ್ಕೆ ದಾಖಲೆಗಳ ಸಮೇತ ಪರಿಹಾರ ಕೋರಿದ್ದರು. ಎರಡೂವರೆ ಲಕ್ಷ ಪರಿಹಾರ ಕೋರಿದ್ದರು. ಈ ಪ್ರಕರಣದಲ್ಲಿ ಮಣಿಪಾಲ್‌ ಆಸ್ಪತ್ರೆ ತಾನು ನಿರ್ಲಕ್ಷ್ಯ ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿದೆ. ಎರಡೂ ಪಕ್ಷಗಳ ವಾದ ಪ್ರತಿವಾದ ಆಲಿಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ರಾಜಶ್ರೀ ಅವರ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, ಆರ್‌ಟಿಪಿಸಿಆರ್‌ ಪರೀಕ್ಷೆಗೆ ಅರ್ಜಿದಾರರು ಹಣ ಪಾವತಿ ಮಾಡಿದರೂ ಹೇಳಿದ ಸಮಯಕ್ಕೆ ವರದಿ ನೀಡದಿರುವುದು ದೃಢಪಟ್ಟಿದೆ. ಹೀಗಾಗಿ ಆರ್‌ಟಿಪಿಸಿಆರ್‌ ಟೆಸ್ಟ್‌ ಗೆ ಪಾವತಿಸಿದ್ದ 750 ರೂ. ಹಾಗೂ ವಿಮಾನ ನಿಲ್ದಣದಲ್ಲಿ ಆರ್‌ಟಿಪಿಸಿಆರ್ ಟೆಸ್ಟ್‌ ಮಾಡಲು ಅವರ ಪುತ್ರ ಪಾವತಿಸಿದ 3000 ರೂ. ಗೆ 2021 ಡಿಸೆಂಬರ್‌ 12 ರಿಂದ ಅನ್ವಯ ಆಗುವಂತೆ ಶೇ. 8 ರಷ್ಟು ಬಡ್ಡಿ ಸಮೇತ ಪಾವತಿಸಲು ಸೂಚಿಸಲಾಗಿದೆ. ಅಲ್ಲದೇ ಮಾನಸಿಕ ಹಿಂಸೆಗೆ ಪರಿಹಾರವಾಗಿ 6 ಸಾವಿರ ರೂ., ಕಾನೂನು ಹೋರಾಟದ ವೆಚ್ಚ 5 ಸಾವಿರ ರೂ. ಒಟ್ಟು 14 ,750 ಹಾಗೂ ಬಡ್ಡಿ ಹಣವನ್ನು ಆದೇಶ ಬಂದ ಒಂದು ತಿಂಗಳ ಒಳಗಾಗಿ ಪಾವತಿಸಲು ನ್ಯಾಯಾಲಯ ಸೂಚಿಸಿ ಮಹತ್ವದ ತೀರ್ಪು ನೀಡಿದೆ.ಜೂನ್‌ 2023 ರಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳು ತಮಗೆ ಇಷ್ಟ ಬಂದಂತೆ ಸೇವೆ ನೀಡುತ್ತವೆ. ಹೇಳಿದಂತೆ ನಡೆದುಕೊಳ್ಳುವುದೇ ಇಲ್ಲ. ಹಾಗಂತ ಜನ ಸುಮ್ಮನಾಗಿ ಬಿಡುತ್ತಾರೆ. ಆದರೆ, ಆಸ್ಪತ್ರೆಗಳು ಸೇವೆಯಲ್ಲಿ ವ್ಯತ್ಯಾಸ ಮಾಡಿ ತೊಂದರೆ ನೀಡಿದರೆ ದಂಡಾಸ್ತ್ರಕ್ಕೆ ಹೊರತಾಗಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ ಅಲ್ಲವೇ. ಸಾರ್ವಜನಿಕರು ತಮ್ಮ ದೈನಂದಿನ ಜೀವನದಲ್ಲಿ ಇಂತಹ ಅದೆಷ್ಟೋ ಪ್ರಸಂಗಗಳು ನಡೆಯುತ್ತವೆ. ಆದರೆ, ಮನಸು ಮಾಡಿ ನ್ಯಾಯ ಪಡೆಯಲು ನಿರ್ಣಯಿಸಿದರೆ ಈ ರೀತಿಯ ನ್ಯಾಯ ಪಡೆಯಲು ಅವಕಾಶವಿದೆ.ಇಲ್ಲಿ ದಂಡದ ಮೊತ್ತಕ್ಕಿಂತಲೂ ಮಿಗಿಲಾಗಿ ಸಮಾಜದಲ್ಲಿ ವ್ಯವಸ್ಥೆಯ ಬದಲಾವಣೆಗೆ ಇಂತಹ ತೀರ್ಪುಗಳು ದೊಡ್ಡ ಕೊಡುಗೆ ಎಂಬುದರಲ್ಲಿ ಅನುಮಾನವೇ ಬೇಡ!

Related News

spot_img

Revenue Alerts

spot_img

News

spot_img