ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಸರ್ಕಾರ ಜನವರಿ 30 ರಂದು ಸರ್ವಪಕ್ಷ ಸಭೆಯನ್ನು ಕರೆದಿದೆ. ಸಂಸತ್ತಿನ ಅನೆಕ್ಸ್ ಕಟ್ಟಡದಲ್ಲಿ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಉಭಯ ಸದನಗಳನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ.ಈ ಸಭೆಯಲ್ಲಿ ವಿಪಕ್ಷಗಳು ತಮ್ಮ ಅನಿಸಿಕೆ ತೋರ್ಪಡಿಸಲಿದ್ದ ಬಜೆಟ್ ಅಧಿವೇಶನದಲ್ಲಿ ತಾವು ಪ್ರಸ್ತಾಪಿಸುವ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ. ಸರ್ವಪಕ್ಷ ಸಭೆಯ ಬಳಿಕ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ನಾಯಕರು ಕೂಡ ಸಭೆ ಸೇರಿ ಬಜೆಟ್ ಅಧಿವೇಶನದ ಕುರಿತು ಚರ್ಚಿಸಲಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ಭಾಗ
ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್‌ನಲ್ಲಿ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದು, ರಾಷ್ಟ್ರಪತಿಗಳ ಭಾಷಣದ ನಂತರ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. 2023-24ರ ಕೇಂದ್ರ ಬಜೆಟ್ 2024ರ ಲೋಕಸಭೆ ಚುನಾವಣೆಯ ಮೊದಲು ಮಂಡಿಸಲಾಗುವ ಕೊನೆಯ ಪೂರ್ಣ ಬಜೆಟ್ ಆಗಿರಲಿದೆ.ಅಧಿವೇಶನದ ಮೊದಲ ಭಾಗವು ಜನವರಿ 31ರಿಂದ ಆರಂಭಗೊಂಡು, ಫೆಬ್ರವರಿ 13ರವರೆಗೆ ನಡೆಯಲಿದೆ. ರಾಷ್ಟ್ರಪತಿಗಳ ಭಾಷಣಕ್ಕೆ ‘ವಂದನಾ ನಿರ್ಣಯ’ ಮಂಡಿಸುವ ಪ್ರಧಾನಿ ನರೇಂದ್ರ ಮೋದಿಯವರ ಭಾಷದೊಂದಿಗೆ ಮೊದಲ ಭಾಗ ಮುಕ್ತಾಯಗೊಳ್ಳಲಿದೆ. ಆಮೇಲೆ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆ ನಡೆಲಿದೆ.ವಿಶೇಷ ಎಂದರೆ ಹೊಸದಾಗಿ ನಿರ್ಮಿಸಿರುವ ಸಂಸದೀಯ ಭವನದಲ್ಲಿ ಈ ಬಾರಿಯ ಬಜೆಟ್ ಅಧಿವೇಶನ ನಡೆಯಲಿದೆ.ಬಜೆಟ್ ಅಧಿವೇಶನದ ಮೊದಲ ಎರಡು ದಿನಗಳಲ್ಲಿ ಸಂಸತ್ತು ಶೂನ್ಯ ಮತ್ತು ಪ್ರಶ್ನೋತ್ತರ ಅವಧಿ ಇರುವುದಿಲ್ಲ.
ಬಜೆಟ್ ಅಧಿವೇಶನದ ಎರಡನೇ ಭಾಗ
ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 13 ರಂದು ಪುನರಾರಂಭಗೊಳ್ಳುತ್ತದೆ. ಏಪ್ರಿಲ್ 6 ರಂದು ಕೊನೆಗೊಳ್ಳಲಿದೆ. ವಿವಿಧ ಸಚಿವಾಲಯಗಳಿಗೆ ಅನುದಾನದ ಬೇಡಿಕೆ ಮತ್ತು ಕೇಂದ್ರ ಬಜೆಟ್‌ನ ಅಂಗೀಕಾರದ ಮೇಲೆ ಕೇಂದ್ರೀಕರಿಸುತ್ತದೆ. ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಹದಗೆಡುತ್ತಿರುವ ಉದ್ಯೋಗ ಮಾರುಕಟ್ಟೆ ಮಧ್ಯಮ ವರ್ಗದ ಮೇಲೆ ಪರಿಣಾಮ ಬೀರಿರುವುದರಿಂದ ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್‌ನಿಂದ ನಿರೀಕ್ಷೆಗಳು ಹೆಚ್ಚಿವೆ.ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹಲವು ಜನಪರ ಘೋಷಣೆಗಳು ಇರಲಿವೆ ಎಂದೂ ನಿರೀಕ್ಷಿಸಲಾಗಿದೆ.ಈ ಬಾರಿಯ ಕೇಂದ್ರ ಬಜೆಟ್ ಬಿಜೆಪಿ ಪಾಲಿಗೂ ಅತ್ಯಂತ ಮಹತ್ವದ್ದಾಗಿದೆ. 2024ರ ಲೋಕಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇದ್ದು, ಜನಪರ ಹಾಗೂ ಸರ್ವರನ್ನು ಒಳಗೊಳ್ಳುವ ಬಜೆಟ್‌ನ್ನು ಮಂಡಿಸುವ ಮೂಲಕ, ಲೋಕಸಭೆ ಚುನಾವಣೆಗೆ ಸಜ್ಜಾಗುವುದು ಬಿಜೆಪಿಯ ಬಯಕೆಯಾಗಿದೆ.