ನವದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ₹490ಕೋಟಿ ವೆಚ್ಚದಲ್ಲಿ ಸಂಸತ್ತು ಸದಸ್ಯರ ಅನುಕೂಲತೆಗಾಗಿ ನಿರ್ಮಾಣವಾಗಲಿರುವ 184 ಪ್ಲಾಟ್‌ಗಳ ಬಹುಮಹಡಿ ವಸತಿ ಸಂಕೀರ್ಣ ಪ್ರಸ್ತಾವನೆಯು ಹಸಿರು ನಿಶಾನೆಗಾಗಿ ಕಾಯುತ್ತಿದ್ದು, ದೆಹಲಿ ಸ್ಟೇಟ್ ಎಕ್ಸ್‌ಪರ್ಟ್ ಅಪ್ರೈಸಲ್ ಕಮಿಟಿಯು(ಎಸ್‌ಇಎಸಿ) ಎನ್ವಿರಾನ್‌ಮೆಂಟ್ ಕ್ಲಿಯರೆನ್ಸ್‌ಗಾಗಿ ಶಿಫಾರಸು ಮಾಡಿದೆ.
ಕೇಂದ್ರೀಯ ಲೋಕೋಪಯೋಗಿ ಇಲಾಖೆಯ (ಸಿಪಿಡಬ್ಲ್ಯುಡಿ) ಈ ಯೋಜನೆಯಲ್ಲಿ ನಾಲ್ಕು 23 ಮಹಡಿಗಳ ಕಟ್ಟಡಗಳು ಹಾಗೂ ಎಲ್ಲಾ ಸೌಕರ್ಯಗಳನ್ನೊಳಗೊಂಡ 5 ಮಹಡಿಯ ಬ್ಲಾಕ್‌ಗಳಿರುತ್ತವೆ.
ಈ ಸ್ಥಳದಲ್ಲಿ ಈ ಹಿಂದೆ ಇದ್ದ ಹಳೆ ಕಟ್ಟಡಗಳನ್ನು ಉರುಳಿಸಿ ಈಗ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಸೆಪ್ಟೆಂಬರ್ 9ರಂದು ನಡೆದ ಎಸ್‌ಇಎಸಿ ಸಭೆಯಲ್ಲಿ ಆ ಪ್ರದೇಶದಲ್ಲಿದ್ದ 372 ಮರಗಳಲ್ಲಿ 150 ಮರಗಳನ್ನು ಉಳಿಸಿಕೊಂಡು, ಉಳಿದ 222 ಮರಗಳ ಸ್ಥಳಾಂತರಗೊಳಿಸುವ ಸಿಪಿಡಬ್ಲ್ಯುಡಿ ಯೋಜನೆಗೆ ಅನುಮೋದನೆ ನೀಡಲಾಯಿತು.
ದೆಹಲಿ ಕಟ್ಟಡದ ಉಪ ಕಾನೂನುಗಳ ಅನ್ವಯ ಕಾರ್ ಪಾರ್ಕಿಂಗ್ ಸ್ಥಳಗಳಲ್ಲಿ ಕನಿಷ್ಠ ಶೇಕಡ 20ರಷ್ಟು ಇ– ವಾಹನಗಳಿಗೆ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒದಗಿಸುವ ಷರತ್ತು ವಿಧಿಸಲಾಗಿದೆ. ಈ ಯೋಜನೆಗೆ ಎನ್ವಿರಾನ್‌ಮೆಂಟ್ ಕ್ಲಿಯರೆನ್ಸ್ ಗಾಗಿ ಸ್ಟೇಟ್ ಎನ್ವಿರಾನ್‌ಮೆಂಟ್ ಇಂಪಾಕ್ಟ್ ಅಸೆಸ್‌ಮೆಂಟ್ ಆಥಾರಿಟಿಗೆ ಕಳುಹಿಸಲು ಶಿಫಾರಸು ಮಾಡಲಾಗಿದೆ.
ಈ ಯೋಜನೆಗೆ ಎಲ್ಲಾ ಅನುಮತಿಗಳನ್ನು ಪಡೆಯುವ ಪ್ರಕ್ರಿಯೆಯು ಸದ್ಯ ನಡೆಯುತ್ತಿದೆ ಎಂದು ಸಿಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಸ್ಯಾಮ್ ಇಂಡಿಯಾ ಇನ್‌ಫ್ರಾಸ್ಟ್ರಕ್ಚರ್ ಈ ಯೋಜನೆಯ ಹೊಣೆ ಹೊತ್ತಿದೆ. ಮಾರ್ಚ್ ತಿಂಗಳಲ್ಲಿಅ ಯೋಜನೆಗೆ ಬಿಡ್‌ಗಳನ್ನು ಕರೆದಿತ್ತು.
ಸಿಪಿಡಬ್ಲ್ಯುಡಿ ಪ್ರಕಾರ ಈ ಯೋಜನೆಯ ವೆಚ್ಚ 557.88 ಕೋಟಿ ಹಾಗೂ ಪೂರ್ಣಗೊಳ್ಳಲು 30 ತಿಂಗಳುಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಭಾಗವಹಿಸಿದ ಎಂಟು ಬಿಡ್ಡರ್‌ಗಳಲ್ಲಿ ಸ್ಯಾಮ್ ಇಂಡಿಯಾ ಇನ್‌ಫ್ರಾಸ್ಟ್ರಕ್ಚರ್ ಅತಿ ಕಡಿಮೆ ₹490 ಕೋಟಿ ಬಿಡ್ ಮಾಡಿ ಯೋಜೆನಯನ್ನು ಪಡೆದುಕೊಂಡಿತು ಎಂದು ಅಧಿಕಾರಿ ತಿಳಿಸಿದ್ದಾರೆ.