26.7 C
Bengaluru
Wednesday, February 5, 2025

ಅರ್ಕಾವತಿ ಬಡಾವಣೆ 378 ಮಂದಿಗೆ ಬದಲಿ ನಿವೇಶನ: ಬಿಡಿಎ ಅಧ್ಯಕ್ಷ ವಿಶ್ವನಾಥ್

ಬೆಂಗಳೂರು ಮಾ 17 : ರೀಡೂ, ಡಿನೋಟಿಫಿಕೇಶನ್ ಸೇರಿದಂತೆ ಹಲವು ಕಾರಣಗಳಿಂದ ಅರ್ಕಾವತಿ ಬಡಾವಣೆ ಯಲ್ಲಿ ನಿವೇಶನವನ್ನು ಕಳೆದುಕೊಂಡಿದ್ದ 378 ನಾಗರಿಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದಿಂದ ನಾಡಪ್ರಭು ಕೆಂಪೇಗೌಡ ಬಡಾವಣೆ ನಲ್ಲಿ ರಾಂಡಮೈಸೇಶನ್ ಮೂಲಕ ಗುರುವಾರ ಬದಲಿ ನಿವೇಶನವನ್ನು ವಿತರಿಸಲಾಯಿತು.

ಗುರುವಾರ ಬಿಡಿಎ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ಜಿ.ಕುಮಾರ ನಾಯಕ್ ಸಮ್ಮುಖದಲ್ಲಿ ಸಾರ್ವಜನಿಕರಿಂದಲೇ ರಾಂಡಮೈಸ್ ಪ್ರಕ್ರಿಯೆಯನ್ನು ನಡೆಸಲಾಯಿತು.20X30 ಚದರಡಿಯ ಅಳತೆಯ 232 ನಿವೇಶನಗಳು, 30X40 ಅಳತೆಯ 67, 40X60 ಅಳತೆಯ 34 ಹಾಗೂ 50X80 ಅಳತೆಯ 45 ನಿವೇಶನಗಳನ್ನು ರಾಂಡಮೈಸ್ ಮಾಡುವ ಮೂಲಕ ಹಂಚಿಕೆದಾರರಿಗೆ ವಿತರಣೆ ಮಾಡಲಾಯಿತು.

ಎರಡು ದಶಕಗಳ ಹಿಂದೆ ಅರ್ಕಾವತಿ ಬಡಾವಣೆಯಲ್ಲಿ ಸಾವಿರಾರು ನಾಗರಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಬಹುತೇಕ ಎಲ್ಲಾ ಹಂಚಿಕೆದಾರರಿಗೆ ನೋಂದಣಿಯನ್ನೂ ಮಾಡಿಕೊಡಲಾಗಿತ್ತು. ಆದರೆ, ರೀಡೂ, ಡಿನೋಟಿಫಿಕೇಶನ್ ಸೇರಿದಂತೆ ನಾನಾ ಕಾರಣಗಳಿಂದ 2,000 ಕ್ಕೂ ಹೆಚ್ಚು ನಿವೇಶನ ಹಂಚಿಕೆದಾರರು ನಿವೇಶನವನ್ನು ಕಳೆದುಕೊಂಡಿದ್ದರು. ಇದರ ಪರಿಣಾಮ ಹಲವು ವರ್ಷಗಳಿಂದ ಬದಲಿ ನಿವೇಶನಕ್ಕಾಗಿ ಬಿಡಿಎಗೆ ಅಲೆದಾಡುತ್ತಿದ್ದರು. ಆದರೆ, ಅವರಿಗೆ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಅಲಭ್ಯವಾಗಿತ್ತು.ಈ ಬಗ್ಗೆ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರು, ನಿವೇಶನ ಹಂಚಿಕೆದಾರರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿ ಕಳೆದ ವರ್ಷ ಸುಮಾರು 300 ನಿವೇಶನದಾರರಿಗೆ ಅರ್ಕಾವತಿಯಲ್ಲಿಯೇ ರಾಂಡಮೈಸ್ ಮೂಲಕ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೆ, ಉಳಿದ ನಿವೇಶನ ಹಂಚಿಕೆದಾರರಿಗೆ ಅರ್ಕಾವತಿಯಲ್ಲಿ ಬದಲಿ ನಿವೇಶನವನ್ನು ಗುರುತಿಸಿ ಹಂಚಿಕೆ ಮಾಡುವುದು ತಡವಾಗಿತ್ತು ಎಂದರು.ಈ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಪಡೆಯಲು ಆಸಕ್ತಿ ಇರುವ ಹಂಚಿಕೆದಾರರಿಗೆ ಒಂದು ಅವಕಾಶವನ್ನು ನೀಡಲಾಗಿತ್ತು. ಅದರಂತೆ ಅರ್ಜಿ ಸಲ್ಲಿಸಿದ ಬಹುತೇಕ ಹಂಚಿಕೆದಾರರಿಗೆ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.

ಈ ರಾಂಡಮೈಸೇಶನ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆದಿದ್ದು, ಸಾರ್ವಜನಿಕರೇ ಕಂಪ್ಯೂಟರ್ ನಲ್ಲಿ ಕ್ಲಿಕ್ ಮಾಡುವ ಮೂಲಕ ನಿವೇಶನವನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.ಸದ್ಯದ ಪರಿಸ್ಥಿತಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಬದಲಿ ನಿವೇಶನಗಳು ಲಭ್ಯವಾಗುವುದು ತಡವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಸಕ್ತಿ ಇರುವ ನಿವೇಶನ ಹಂಚಿಕೆದಾರರು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಬಯಸಿ ಅರ್ಜಿ ಸಲ್ಲಿಸಿದರೆ ಅವರಿಗೆ ನಿವೇಶನವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಈಗಾಗಲೇ ಹತ್ತಾರು ವರ್ಷಗಳಿಂದ ನಿವೇಶನದಾರರು ಬಿಡಿಎಗೆ ಅಲೆದಾಡಿದ್ದಾರೆ. ಅವರನ್ನು ಮತ್ತಷ್ಟು ಕಾಯಿಸದೇ ಈಗ ಹಂಚಿಕೆಯಾಗಿರುವ ಬದಲಿ ನಿವೇಶನಗಳಿಗೆ ಹಂಚಿಕೆ ಪತ್ರ ವಿತರಣೆ ಮತ್ತು ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.ಆಯುಕ್ತ ಕುಮಾರ ನಾಯಕ್ ಅವರು ಮಾತನಾಡಿ, ನಾನಾ ಕಾರಣಗಳಿಂದ ಅರ್ಕಾವತಿ ನಿವೇಶನ ಹಂಚಿಕೆದಾರರಿಗೆ ನಿವೇಶನವನ್ನು ನೀಡಲು ಸಾಧ್ಯವಾಗಿಲ್ಲ. ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಬಯಸಿ ಅರ್ಜಿ ಸಲ್ಲಿಸಿದವರಿಗೆ ಪಾರದರ್ಶಕವಾಗಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ರಾಂಡಮೈಸೇಶನ್ ನಲ್ಲಿ ಬದಲಿ ನಿವೇಶನ ಪಡೆದ ಆಶಾರಾವ್ ಅವರು ಮಾತನಾಡಿ, ಅರ್ಕಾವತಿ ಬಡಾವಣೆಯಲ್ಲಿ ನಮಗೆ ನಿವೇಶನ ಹಂಚಿಕೆಯಾಗಿದ್ದರೂ ಅದು ನಮ್ಮ ಕೈಗೆ ಬರಲಿಲ್ಲ. ನಿವೇಶನ ಪಡೆಯಲು ಹಲವು ವರ್ಷಗಳಿಂದ ಬಿಡಿಎಗೆ ಅಲೆದಾಡುತ್ತಾ ಬಂದಿದ್ದೇವಾದರೂ ಬದಲಿ ನಿವೇಶನ ಸಿಕ್ಕಿರಲಿಲ್ಲ. ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಮಗೆ ಬದಲಿ ನಿವೇಶನ ಹಂಚಿಕೆ ಮಾಡಿಕೊಟ್ಟಿರುವುದು ಸಂತಸ ತಂದಿದೆ ಎಂದರು.ಮತ್ತೋರ್ವ ಹಂಚಿಕೆದಾರ ನಿತಿನ್ ಅವರು ಮಾತನಾಡಿ, ಹಲವು ವರ್ಷಗಳಿಂದ ಅಲೆದಾಡುತ್ತಿದ್ದ ನಮಗೆ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನವನ್ನು ಹಂಚಿಕೆ ಮಾಡಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಿಡಿಎ ಕಾರ್ಯದರ್ಶಿ ಡಾ.ಶಾಂತರಾಜು, ಅಭಿಯಂತರ ಸದಸ್ಯ ಶಾಂತರಾಜಣ್ಣ ಮತ್ತು ಇತರ ಅಧಿಕಾರಿಗಳು ಇದ್ದರು.

Related News

spot_img

Revenue Alerts

spot_img

News

spot_img