21.1 C
Bengaluru
Monday, July 8, 2024

ರಾಜ್ಯದಲ್ಲಿ 11.5 ಲಕ್ಷ ಸರ್ಕಾರಿ ಭೂಮಿ ಒತ್ತುವರಿ!

ಒತ್ತುವರಿ ಆಗಿರುವ ತನ್ನ ಜಮೀನುಗಳನ್ನು ಮರಳಿ ಪಡೆಯುವ ಸರ್ಕಾರದ ಸತತ ಪ್ರಯತ್ನದ ಹೊರತಾಗಿಯೂ 62.7 ಲಕ್ಷ ಎಕರೆ ಭೂಮಿಯ ಪೈಕಿ 11.5 ಲಕ್ಷ ಎಕರೆಗೂ ಹೆಚ್ಚು ಭೂಮಿ ಇನ್ನೂ ಒತ್ತುವರಿ ಸ್ಥಿತಿಯಲ್ಲಿಯೇ ಇದೆ. ಕಳೆದ ಎಂಟು ವರ್ಷಗಳಲ್ಲಿ ಮರಳಿ ಪಡೆದ 1.6 ಲಕ್ಷ ಎಕರೆಯನ್ನೂ ಸೇರಿಸಿ ಈವರೆಗೆ ಸರ್ಕಾರವು 2.7 ಲಕ್ಷ ಎಕರೆ ಒತ್ತುವರಿ ತೆರವು ಮಾಡಿದೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿದ್ದ ತುಶಾರ್ ಗಿರಿನಾಥ್ ಅವರು ಇತ್ತೀಚೆಗೆ, ʻಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಮರಳಿ ಪಡೆಯಲು ಸಾಧ್ಯವಿರುವ ಎಲ್ಲ ಪ್ರಕರಣಗಳಲ್ಲಿ ಇಲಾಖೆಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ವ್ಯಾಜ್ಯ ಮುಕ್ತವಾಗಿರುವ ಅಥವಾ ರೈತರು ಬಳಸುತ್ತಿರುವ ಬಗರ್ ಹುಕುಂ ಅಲ್ಲದ 4 ಲಕ್ಷ ಎಕರೆಗೂ ಅಧಿಕ ಭೂಮಿಯಲ್ಲಿ 1.3 ಲಕ್ಷ ಎಕರೆ ಭೂಮಿಯನ್ನು ಮಾತ್ರ ವಶಪಡಿಸಿಕೊಳ್ಳಬೇಕಿದೆ. ಉಳಿದ ಪ್ರಕರಣಗಳಲ್ಲೂ ಭೂಮಿಯನ್ನು ಮರಳಿ ಪಡೆಯುವ ಪ್ರಯತ್ನ ನಿರಂತರವಾಗಿದೆʼ ಎಂದು ತಿಳಿಸಿದ್ದಾರೆ. ತುಶಾರ್ ಗಿರಿನಾಥ್ ಅವರು ಈಚೆಗಷ್ಟೇ ಬಿಬಿಎಂಪಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಸಾರ್ವಜನಿಕ ಆಸ್ತಿಪಾಸ್ತಿಗೆ ಸಂಬಂಧಿಸಿದ ನೋಡಲ್ ಏಜೆನ್ಸಿ ಆಗಿರುವ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮವು 2021ರ ಡಿಸೆಂಬರ್ ವರೆಗೆ ನಡೆಸಿದ ಪರಿಶೀಲನೆ ವರದಿ ಪ್ರಕಾರ, ಒತ್ತುವರಿ ಆದ 11.5 ಲಕ್ಷ ಎಕರೆ ಸರ್ಕಾರಿ ಭೂಮಿಯ ಪೈಕಿ 9.9 ಲಕ್ಷ ಎಕರೆಯಲ್ಲಿ ಬಗರ್ ಹುಕುಂ (ಅನುಮತಿ ರಹಿತವಾಗಿ) ಆಗಿ ರೈತರು ಕೃಷಿ ನಡೆಸುತ್ತಿದ್ದಾರೆ. 9,700 ಎಕರೆಗೂ ಅಧಿಕ ಭೂಮಿ ವ್ಯಾಜ್ಯಕ್ಕೆ ಸಿಲುಕಿವೆ. ಜೊತೆಗೆ 14,000 ಎಕರೆಗೂ ಹೆಚ್ಚು ಭೂಮಿಯು ರಸ್ತೆ, ಸೇತುವೆ, ಅಂಗನವಾಡಿ ಕೇಂದ್ರ ಮುಂತಾದ ಸಾರ್ವಜನಿಕ ಸೌಕರ್ಯಗಳಿಗಾಗಿ ಒತ್ತುವರಿ ಆಗಿವೆ.

ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚು ಒತ್ತುವರಿ
ವರದಿಯ ದತ್ತಾಂಶ ವಿಶ್ಲೇಷಣೆ ಪ್ರಕಾರ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿಯೇ ಶೇ 45ಕ್ಕೂ ಹೆಚ್ಚು ಭೂಮಿ ಒತ್ತುವರಿ ಆಗಿದೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಬಗರ್ ಹುಕುಂ ಜಾಗ ಇರುವುದೇ ಇದಕ್ಕೆ ಕಾರಣ ಎಂದು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ತಿಳಿಸಿದೆ.

ವ್ಯಾಜ್ಯಗಳಲ್ಲಿ ಸಿಲುಕಿರುವ ಭೂಮಿ (9,738 ಎಕರೆ) ಮತ್ತು ಸಾರ್ವಜನಿಕ ಯೋಜನೆಗಳಿಗಾಗಿ ಒತ್ತುವರಿ ಆಗಿರುವ ಭೂಮಿಯ (14,047 ಎಕರೆ) ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ವ್ಯಾಜ್ಯದಲ್ಲಿರುವ ಭೂಮಿಗಳಲ್ಲಿ ಶೇ 22ರಷ್ಟು ಬೆಂಗಳೂರು ಮತ್ತು ಶೇ 20ರಷ್ಟು ಮೈಸೂರಿನವು. ಸಾರ್ವಜನಿಕ ಸೌಕರ್ಯಕ್ಕಾಗಿ ಒತ್ತುವರಿ ಆಗಿರುವುದರಲ್ಲೂ ಶೇ 92ರಷ್ಟು ಭೂಮಿ ಬೆಂಗಳೂರು (7,881 ಎಕರೆ) ಮತ್ತು ಶಿವಮೊಗ್ಗ (5,005 ಎಕರೆ) ಜಿಲ್ಲೆಗಳಲ್ಲಿವೆ.

ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ಅಧಿಕಾರಿಗಳು ಹೇಳುವಂತೆ, ಸರ್ಕಾರವು ಪ್ರಕರಣಗಳ ಅನುಸಾರ ಬಗರ್ ಹುಕುಂ ಭೂಮಿ ಕುರಿತು ಪರಿಶೀಲಿಸುತ್ತಿದೆ ಮತ್ತು ಅವುಗಳನ್ನು ರೈತರಿಗೆ ಬಿಟ್ಟುಕೊಡಲು ನಿರ್ಧಾರ ತೆಗೆದುಕೊಳ್ಳಲಿದೆ. ʻಸರ್ಕಾರ ರೈತರಿಗೆ ನೀಡಲು ನಿರ್ಧರಿಸಿದ ಭೂಮಿಯನ್ನು ಪಟ್ಟಿಯಿಂದ ಕೈಬಿಡಲಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಭೂಮಿಯನ್ನು ರೈತರಿಗೆ ಭೋಗ್ಯಕ್ಕೆ ನೀಡಲು ಚಿಂತನೆ ನಡೆಸಿದೆʼ ಎಂದರು ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img