ಬೆಂಗಳೂರು;ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸಲು ಸರಕಾರ ಖಜಾನೆಯಲ್ಲಿ ಅನುದಾನವಿದೆ. ಆದರೆ, ರೈತರಿಗೆ ಸೂಕ್ತ ಸಮಯಕ್ಕೆ ಪರಿಹಾರ ಹಣ ಸಿಗದಿದ್ದರೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದ್ದಾರೆ.ಕೃಷಿ ನಡೆಸದೆಯು ಅಕ್ರಮ ಸಕ್ರಮದಡಿಯಲ್ಲಿ ಸರಕಾರಿ ಜಮೀನನ್ನು ಸಕ್ರಮ ಮಾಡಿಕೊಳ್ಳುವುದಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಸರಕಾರ ಇದಕ್ಕಾಗಿ ಹೊಸ ಆಪ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಇದು ಈ ರೀತಿಯ ಚಟುವಟಿಕೆಗಳನ್ನು ತಡೆದು ಆರ್ಹ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿ ಮಾಡುವ ಉದ್ದೇಶ ಹೊಂದಿದೆ.ಬರ ಪರಿಹಾರ ಹಣವನ್ನು ನೀಡಲು ರಾಜ್ಯ ಸರಕಾರದ ಸಿದ್ದವಾಗಿದೆ. ಖಜಾನೆಯಲ್ಲಿ ಹಣವಿದೆ. ಆದರೆ, ಪರಿಹಾರ ಫ್ರಟ್ಸ್ ದತ್ತಾಂಶವನ್ನು ಆಧರಿಸಿರುವ ಕಾರಣ ಜಿಲ್ಲಾಧಿಕಾರಿಗಳು ಮಾಡುವ ಸಣ್ಣ ತಪ್ಪು ರೈತರ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಇನ್ನಾದರೂ ಆಂದೋಲನ ಮಾದರಿಯಲ್ಲಿ ಕೆಲಸ ಮಾಡಬೇಕಾಗಿದೆ. ಶೀಘ್ರದಲ್ಲಿ ತಾಲೂಕು, ಹೋಬಳಿ ಸಭೆ ನಡೆಸಿ ಎಲ್ಲ ಅಧಿಕಾರಿಗಳನ್ನು ಸ್ಥಳ ವೀಕ್ಷಣೆಗೆ ಕಳುಹಿಸಿ. ಡಿ.22ರೊಳಗಾಗಿ ರೈತರ ಜಮೀನಿನ ಸಂಪೂರ್ಣ ಮಾಹಿತಿಯನ್ನು ಫೂಟ್ಸ್ ದತ್ತಾಂಶದಲ್ಲಿ ನಮೂದಿಸಿ
ಸಭೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಬಗರ್ ಹುಕುಂ ಆ್ಯಪ್ ಅನ್ನು ಸಚಿವ ಕೃಷ್ಣಬೈರೇಗೌಡ ಬಿಡುಗಡೆಗೊಳಿಸಿದರು. ನಮೂನೆ 50, 53, 57ರ ಅಕ್ರಮ-ಸಕ್ರಮ ಯೋಜನೆಯಲ್ಲಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಅಲ್ಲದೆ, ಸಾವಿರಾರು ಎಕರೆ ಸರಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ. ನೂತನವಾಗಿ ಅಭಿವೃದ್ಧಿ ಪಡಿಸಲಾಗಿರುವ ಬಗರ್ ಹುಕುಂ ಆಪ್ ಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದಕ್ಕೆ ಸರ್ಕಾರದ ಅಧಿಕಾರಿಗಳಿಗೆ ಸಹಾಯ ಮಾಡಲಿದೆ.ಇಮೇಜ್ ಪಡೆದು ನಿಜಕ್ಕೂ ಅಲ್ಲಿ ಕೃಷಿ ನಡೆಸುತ್ತಿದ್ದಾರೆಯೆ? ಎಂಬ ಮಾಹಿತಿ ಕಲೆಹಾಕುತ್ತಾರೆ. ಅಲ್ಲದೆ, ಆ ಇಮೇಜ್ ಜತೆಗೆ ಎಲ್ಲ ಮಾಹಿತಿಯನ್ನು ಬಗರ್‌ಹುಕುಂ ಕಮಿಟಿ ಮುಂದೆ ಸಲ್ಲಿಸಿ ಒಟಿಪಿ ಮೂಲಕ ಕೆವೈಸಿ ಮಾಡುವ ಮೂಲಕ ಋಜುವಾತು ಮಾಡುತ್ತಾರೆ. ನಂತರ ಫಲಾನುಭವಿಗಳಿಗೆ ಪೇಮೆಂಟ್ ನೋಟಿಸ್ ನೀಡಿ ಹಣ ಪಾವತಿಯಾಗುತ್ತಿದ್ದಂತೆ ಅವರಿಗೆ ಹೊಸ ಸರ್ವೇ ನಂಬರ್ ಹಾಗೂ ಡಿಜಿಟಲ್ ಇ-ಸಾಗುವಳಿ ಚೀಟಿ ನೀಡಲಾಗುತ್ತದೆ.