# America, #New york # Indian Student, # Conulate # Us Police # Death
ನ್ಯೂಯಾರ್ಕ್: ಅಮೆರಿಕದಲ್ಲಿ ಉದ್ಯೋಗ ಮಾಡಬೇಕು… ಕೈ ತುಂಬಾ ಹಣ ಸಂಪಾದನೆ ಮಾಡಬೇಕು ಅಂತ ಯೋಚಿಸೋ ಭಾರತೀಯ ಯುವಜನರಿಗೆ ಮತ್ತು ಪೋಷಕರಿಗೆ ಇದು ಶಾಕಿಂಗ್ ನ್ಯೂಸ್. ಇದನ್ನ ಕೇಳಿದ್ರೆ ಅಮೆರಿಕದಲ್ಲಿ ನಮ್ಮ ದೇಶದವರಿಗೆ ರಕ್ಷಣೆ ಇಲ್ವಾ ಅನ್ನೋ ಪ್ರಶ್ನೆ ಮೂಡಲು ಪ್ರಾರಂಭವಾಗುತ್ತೆ. ಯಾಕೆಂದ್ರೆ ಅಲ್ಲಿ ಕಳೆದ ಒಂದು ವಾರದಿಂದ ಭಾರತೀಯ ವಿದ್ಯಾರ್ಥಿಗಳ ಸರಣಿ ಸಾವುಗಳು ಸಂಭವಿಸುತ್ತಿವೆ.
ಗುರುವಾರ ಯುನೈಟೆಡ್ ಸ್ಟೇಟ್ಸ್ ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಶ್ರೇಯಸ್ ರೆಡ್ಡಿ ಎಂಬ ವಿದ್ಯಾರ್ಥಿಯೇ ಸಾವಿನ ಮನೆ ಸೇರಿರುವುದು. ಈತ ಓಹಿಯೋದ ಸಿನ್ಸಿವಾಟಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಸದ್ಯಕ್ಕೆ ದೊರೆತಿರುವ ಮಾಹಿತಿಯ ಪ್ರಕಾರ ಶ್ರೇಯಸ್ ರೆಡ್ಡಿ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ ಓದುತ್ತಿದ್ದ. ಆದರೆ ಈತನ ಸಾವಿಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. ಅಲ್ಲಿನ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನ್ಯೂಯಾರ್ಕ್ ನಲ್ಲಿರೋ ಭಾರತೀಯ ಕಾನ್ಸುಲೇಟ್ ಶ್ರೇಯಸ್ ಸಾವಿನ ಕುರಿತು ವಿಷಾದ ವ್ಯಕ್ತ ಪಡಿಸಿದೆ. ಅಲ್ಲದೇ ಮೃತ ಶ್ರೇಯಸ್ ರೆಡ್ಡಿಯ ಪೋಷಕರ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲಾ ನೆರವನ್ನು ನೀಡುತ್ತಿದೆ ಎಂದು ತಿಳಿದು ಬಂದಿದೆ.
ಶ್ರೇಯಸ್ ರೆಡ್ಡಿ ಸಾವಿಗೆ ಭಾರತೀಯ ದೂತವಾಸ ಕಚೇರಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಈ ವಿದ್ಯಾರ್ಥಿಯ ಅಕಾಲಿಕ ಮರಣ ಆಘಾತ ತರಿಸಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದೆ. ಇನ್ನು ಶ್ರೇಯಸ್ ಸಾವಿನ ಕುರಿತಂತೆ ಹೆಚ್ಚಿನ ಮಾಹಿತಿಯನ್ನ ನಿರೀಕ್ಷೆ ಮಾಡಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿವೇಕ್ ಸೈನಿ ಹಾಗೂ ನೀಲ್ ಆಚಾರ್ಯ ಎಂಬ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ರು. ಇದಾಗಿ ವಾರ ಕಳೆಯುವುದರಲ್ಲೇ ಶ್ರೇಯಸ್ ರೆಡ್ಡಿ ಕೂಡಾ ಮೃತನಾಗಿದ್ದಾನೆ.