26.3 C
Bengaluru
Friday, October 4, 2024

ಬಡಜನರಿಗೂ ಅನ್ನ ನೀಡುವ ಸಾರ್ಥಕ ಉದ್ದೇಶದಿಂದ ರೂಪಿಸಿದ ಯೋಜನೆ ಅನ್ನಭಾಗ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸೈದ್ಧಾಂತಿಕ ಸ್ಪಷ್ಟತೆ-ಸೈದ್ಧಾಂತಿಕ ಬದ್ಧತೆ ಇದ್ದರೆ ಸೋಲು-ಗೆಲುವು ನಮ್ಮನ್ನು ಬಾಧಿಸುವುದಿಲ್ಲ

ಬೆಂಗಳೂರು, ಜೂನ್ 26 :ಬಡಜನರು ತುತ್ತು ಅನ್ನವನ್ನು ಇನ್ನೊಬ್ಬರ ಮನೆಯಿಂದ ಕೇಳಿ ಪಡೆಯುತ್ತಿದ್ದ ಕಷ್ಟ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ್ದ ಕಾರಣ, ತುತ್ತು ಅನ್ನಕ್ಕಾಗಿ ಬಡಜನರು ಇನ್ನೊಬ್ಬರ ಮನೆ ಬಾಗಿಲಿಗೆ ಹೋಗದಂತೆ ಮಾಡಬೇಕೇಂದು ಪಣತೊಟ್ಟೆ. ಬಡಜನರಿಗೂ ಅನ್ನ ನೀಡುವ ಸಾರ್ಥಕ ಉದ್ದೇಶದಿಂದಲೇ ರೂಪಿಸಿದ ಯೋಜನೆ ಅನ್ನಭಾಗ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಹಿಂದಿನ ತಮ್ಮ ಅನುಭವವನ್ನು ಹಂಚಿಕೊಂಡರು.

16ನೇ ವಿಧಾನಸಭಾ ಅಧಿವೇಶನಕ್ಕೆ ಆಯ್ಕೆ ಆಗಿರುವ ನೂತನ ಶಾಸಕರಿಗೆ ಇಂದು ಹಮ್ಮಿಕೊಳ್ಳಲಾಗಿದ್ದ ತರಬೇತಿ ಶಿಬಿರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಳ್ಳಿಗಳಲ್ಲಿ ಕೇವಲ ಶೇ. 25 ರಷ್ಟು ಮಾತ್ರ ಅನ್ನ ಬಳಸುತ್ತಿದ್ದು, ಇನ್ನುಳಿದ ಶೇ.75 ರಷ್ಟು ಮನೆಗಳಲ್ಲಿ ರಾಗಿ ಅಥವಾ ಜೋಳ ಬಳಸುತ್ತಿದ್ದರು. ಹಬ್ಬಹರಿದಿನಗಳಲ್ಲಿ ಮಾತ್ರ ಅನ್ನ ಬಳಸುತ್ತಿದ್ದರು. ಬಡವರು ಮತ್ತು ಜಮೀನುರಹಿತ ಜನರು ಆರೋಗ್ಯ ಹಾಳಾದರೆ ಅನ್ನ ಬಳಸುತ್ತಿದ್ದ ಮನೆಗಳಿಗೆ ಹೋಗಿ ಅನ್ನ ನೀಡುವಂತೆ ಕೋರುತ್ತಿದ್ದರು. ಪ್ರಣಾಳಿಕೆ ರಚನಾ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದು, ನನ್ನ ಅನುಭವದ ಆಧಾರದಲ್ಲಿ ಅನ್ನಭಾಗ್ಯ ಕಾರ್ಯಕ್ರಮವನ್ನು ರೂಪಿಸಿದೆ.

*ಜನಪರ ಯೋಜನೆಗಳು *
ಬಡವರು, ದೀನದಲಿತರು, ಆಟೋಚಾಲಕರು, ಕೂಲಿಕಾರರು, ಹೀಗೆ ಬಡಜನರಿಗೆ ಅನುಕೂಲವಾಗಲೆಂದೇ ಇಂದಿರಾ ಕ್ಯಾಂಟೀನ್ ನ್ನು ಸ್ಥಾಪಿಸಲಾಯಿತು. ಕಲಿಕೆಯ ಸಮಯದಲ್ಲಿ ಹಾಸ್ಟೆಲ್ ವ್ಯವಸ್ಥೆ ದೊರೆಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾಸಿರಿ ಕಾರ್ಯಕ್ರಮ ರೂಪಿಸಿ 1,500 ರೂ. ನೀಡಲಾಯಿತು. ಮಳೆಯನ್ನು ಆಶ್ರಯಸಿ ಬದುಕುವ ರೈತರ ಅನುಕೂಲಕ್ಕಾಗಿ ಕೃಷಿಭಾಗ್ಯ ಕಾರ್ಯಕ್ರಮ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಎಲ್ಲ ಮಕ್ಕಳಿಗೂ ಸಮವಸ್ತ್ರ ಹಾಗೂ ಶೂಗಳನ್ನು ನೀಡುವ ಶೂ ಭಾಗ್ಯ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು ಎಂದು ರೂಪಿಸಿದ ಯೋಜನೆಗಳ ಹಿಂದಿನ ಉದ್ದೇಶವನ್ನು ತಿಳಿಸಿದರು.

ಜನರ ಜೊತೆ ಹಿಂದೆಯೂ ಇದ್ದೇನೆ, ಮುಂದೆಯೂ ಇರಲಿದ್ದೇನೆ :

7 ಕೋಟಿ ಜನರಿಗೂ ನಾನು ಮುಖ್ಯಮಂತ್ರಿ , ಯಾವುದೇ ತಾರತಮ್ಯವಿಲ್ಲದೇ ಎಲ್ಲ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜಾತ್ಯತೀತವಾದ, ಧರ್ಮಾತೀತವಾದ ಸಂವಿಧಾನವನ್ನು ಡಾ.ಅಂಬೇಡ್ಕರ್ ಅವರು ನೀಡಿದ್ದು,ಸಹಿಷ್ಣುತೆ, ಸಹಬಾಳ್ವೆ ಅದರ ಪ್ರಮುಖ ಅಂಶವಾಗಿದೆ. ಜನರ ನಡುವೆ ಇದ್ದು, ಅವರ ಕಷ್ಟಸುಖಗಳಿಗೆ ಸ್ಪಂದಿಸಿ, ಜನರ ಧ್ವನಿಯಾಗಿ ದುಡಿದರೆ ಜನ ನಮ್ಮನ್ನು ಕೈಹಿಡಿಯುತ್ತಾರೆ. ಜನರ ಜೊತೆ ಹಿಂದೆಯೂ ಇದ್ದೇನೆ, ಮುಂದೆಯೂ ಇರಲಿದ್ದೇನೆ. ಇದು ನನ್ನ ಕಡೆಯ ಚುನಾವಣೆಯಾಗಿದ್ದರೂ, ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಸೇವೆಗೆ ಸದಾ ಇರುತ್ತೇನೆ ಎಂದು ನುಡಿದರು.

ಅಸಮಾನತೆಯನ್ನು ನಿವಾರಿಸಲು ರಾಜಕೀಯ ಪ್ರವೇಶ
ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಪ್ರೇರಣೆ. ನಾನು ಕಾನೂನು ವಿದ್ಯಾರ್ಥಿಯಾಗಿದ್ದಾಗ, ರೈತ ಸಂಘದ ಅಧ್ಯಕ್ಷರಾಗಿದ್ದ ನಂಜುಂಡಸ್ವಾಮಿಯವರ ಸಂಪರ್ಕ ಒದಗಿಬಂದಿತು. ಅವರಿಂದ ದೇಶ, ಜಗತ್ತಿನ ರಾಜಕಾರಣದ ಬಗ್ಗೆ ಅರಿವು ಮೂಡಿತು. ರಾಜಕೀಯ ಹಿನ್ನಲೆಯಿರದ ಕುಟುಂಬದಿಂದ ಬಂದ ನನ್ನ ರಾಜಕೀಯ ಜೀವನಕ್ಕೆ ಬರಲು ಪ್ರೊ.ನಂಜುಂಡಸ್ವಾಮಿಯವರೇ ಪ್ರೇರಣೆ. ರೈತ ಸಂಘದ ಕಾರ್ಯದರ್ಶಿಯಾಗಿ, ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು. ಸಮಾಜದಲ್ಲಿನ ಅಸಮಾನತೆಯನ್ನು ನಿವಾರಿಸುವ ಗುರಿಯೇ ರಾಜಕೀಯ ಜೀವನದ ಪ್ರವೇಶಕ್ಕೆ ನಾಂದಿಯಾಯಿತು ಎಂದು ತಿಳಿಸಿದರು.

ಲಕ್ಷ್ಮೀಪತಿ, ಹಿರಿಯ ವರದಿಗಾರರು

Related News

spot_img

Revenue Alerts

spot_img

News

spot_img