26.7 C
Bengaluru
Sunday, December 22, 2024

ಕರ್ನಾಟಕದ ಮೇಲೆ ಕಣ್ಣಿಟ್ಟ ಬಿಜೆಪಿ: ಬೆಂಗಳೂರಿಗೆ ಅಮಿತ್‌ ಶಾ ಭೇಟಿ

ಬೆಂಗಳೂರು, ಜ. 21 : ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದತ್ತ ಬಿಜೆಪಿ ನಾಯಕರು ಪದೇ ಪದೇ ಪ್ರವಾಸ ಕೈಗೊಳ್ಳುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ಭರ್ಜರಿ ತಂತ್ರಗಾರಿಕೆಯನ್ನು ರೂಪಿಸಲಾಗುತ್ತಿದೆ. ಕರ್ನಾಟಕ ರಾಜ್ಯವನ್ನು ಗೆಲ್ಲುವುದು ಪ್ರತಿಷ್ಠೆಯ ಕಣವಾಗಿದೆ. ಹಳೆ ಮೈಸೂರು ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬಿಜೆಪಿ ಗೆಲ್ಲುವುದು ದೊಡ್ಡ ಸವಾಲಾಗಿದೆ. ಈ ಎರಡೂ ಕ್ಷೇತ್ರಗಳನ್ನು ಟಾರ್ಗೆಟ್‌ ಮಾಡಿ ಪಕ್ಕಾ ಪ್ಲಾನ್‌ ಮಾಡಿಕೊಂಡಿದೆ. ಹೀಗಾಗಿಯೇ ಬಿಜೆಪಿ ನಾಯಕರು ಪದೇ ಪದೇ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಈಗ ಹೆಚ್ಚೆಚ್ಚು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಅದಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯಕ್ಕೆ ನಾಲ್ಕು ಬಾರಿ ಆಗಮಿಸಿದ್ದಾರೆ. ಮಂಗಳೂರು, ಬೆಂಗಳುರು, ಹುಬ್ಬಳ್ಳಿ, ಕಲಬುರಗಿ ಹಾಗೂ ಯಾದಗಿರಿಗೆ ಭೇಟಿ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ರೋಡ್ ಶೋ ನಡೆಸಿದ ಮೋದಿ ಅವರು ಎಲ್ಲರ ಗಮನ ಸೆಳೆದರು. ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಭೇಟಿ ಕೊಟ್ಟ ಮೋದಿ ಅವರು ನವೆಂಬರ್ 11 ರಂದು ಬೆಂಗಳುರಿಗೆ ಆಗಮಿಸಿದ್ದರು. ಬಳಿಕ ಜನವರಿ 12 ರಂದು ಹುಬ್ಬಳ್ಳಿಯಲ್ಲಿ ಹಾಗೂ ಜನವರಿ 19 ರಂದು ಕಲಬುರಗಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ್ದರು.

ಇನ್ನು ಗೃಹ ಸಚಿವ ಅಮಿತ್‌ ಶಾ ಅವರು ಕೂಡ ಕರ್ನಾಟಕ ಪ್ರವಾಸವನ್ನು ಮಾಡುತ್ತಿದ್ದಾರೆ. ವಿಧಾಸಭೆ ಚುನಾವಣೆಗೆ ವೋಟ್‌ ಬ್ಯಾಂಕ್‌ ತುಂಬಿಸಿಕೊಳ್ಳಲು ಮಾಸ್ಟರ್‌ ಪ್ಲಾನ್‌ ಮಾಡಿಕೊಂಡಿದ್ದಾರೆ. ಡಿಸೆಂಬರ್‌ 29 ರಂದು ರಾಜ್ಯಕ್ಕೆ ಆಗಮಿಸಿದ್ದರು. ಮೂರು ದಿನಗಳ ಕಾಲ ಪ್ರವಾಸ ನಡೆಸಿದರು. ಈ ವೇಳೆ ರಾಜ್ಯ ನಾಯಕರ ಜೊತೆಗೆ ಸಭೆಯನ್ನು ನಡೆಸಿದ್ದರು. ಇದೀಗ ಮತ್ತೆ ಜನವರಿ 27 ಹಾಗೂ 28 ರಂದು ರಾಜ್‌ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಬಾರಿ ಬೆಂಗಳೂರು ಮತ್ತು ಹುಬ್ಬಳ್ಳಿಗೆ ಅಮಿತ್‌ ಶಾ ಭೇಟಿ ಕೊಡಲಿದ್ದಾರೆ.

ಹುಬ್ಬಳ್ಳಿಯ ವಿದ್ಯಾನಗರದ ಕೆಎಲ್ಇ ಸಂಸ್ಥೆಯ ಬಿ.ಬಿ. ಭೂಮರಡ್ಡಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಅಮೃತ ಮಹೋತ್ಸವ ನಡೆಯುತ್ತಿದೆ. ಇದರ ಜೊತೆಗೆ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ಜನವರಿ 27ರಿಂದ 29ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಮಿತ್ ಶಾ ಅವರು 27ರಂದು ಆಗಮಿಸಿ ಖಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಅಮೃತ ಮಹೋತ್ಸವದ ಅಂಗವಾಗಿ ಕಾಲೇಜಿನ ಆವರಣದಲ್ಲಿ ₹25 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗವನ್ನು ಅಮಿತ್ ಶಾ ಅವರು ಉದ್ಘಾಟಿಸಲಿದ್ದಾರೆ. ಬಳಿಕ 28ರಂದು ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನವರಿ 28ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜನವರಿ 5, 6 ರಂದು ರಾಜ್ಯ ಪ್ರವಾಸ ಕೈಗೊಂಡಿದ್ದರು. ಈ ವೇಳೆ ತುಮಕೂರು ಮತ್ತು ಮಧುಗಿರಿಯಲ್ಲಿ ಸಭೆ ನಡೆಸಿದ್ದರು. ಇದೀಗ ಇಂದು ಮತ್ತೆ ಜೆಪಿ ನಡ್ಡಾ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ವಿಜಯಪುರಕ್ಕೆ ಭೇಟಿ ಕೊಟ್ಟಿದ್ದು, ಬರುತ್ತಲೇ ಜ್ಞಾನ ಯೋಗಾಶ್ರಮಕ್ಕೆ ಪಾದಾರ್ಪಣೆ ಮಾಡಿದರು. ಇಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳ ಭಾವ ಚಿತ್ರಕ್ಕೆ ನಮನ ಸಲ್ಲಿಸಿದರು. ಇದೆಲ್ಲವೂ ಪಕ್ಕಾ ವಿಧಾಸಭೆ ಚುನಾವಣೆಗಾಗಿ ಮಾಡಿರುವ ಪ್ಲಾನ್.

Related News

spot_img

Revenue Alerts

spot_img

News

spot_img