21.1 C
Bengaluru
Monday, July 8, 2024

ಅಮೆರಿಕ: ತುಟ್ಟಿಯಾದ ಅಡಮಾನ ಸಾಲ- ರಿಯಲ್ ಎಸ್ಟೇಟ್ ಮೇಲೆ ಅಡ್ಡ ಪರಿಣಾಮ

ಅಮೆರಿಕದಲ್ಲಿ ಅಡಮಾನ ಸಾಲಗಳ ಬಡ್ಡಿ ದರವು ಈ ವಾರ ಶೇ 6ಕ್ಕೆ ಏರಿಕೆ ಕಂಡಿದ್ದು, ನವೆಂಬರ್ 2008ರ ವಸತಿ ವಲಯದ ಕುಸಿತದ ನಂತರ ಈ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದು ಇದೇ ಮೊದಲು. ಇದು, ಮನೆ ಖರೀದಿಸುವ ಜನರ ಉತ್ಸಾಹವನ್ನು ಕುಗ್ಗಿಸುವ ಆತಂಕವನ್ನು ಎದುರುಮಾಡಿದೆ.

ಕಳೆದ ವಾರ ಶೇ 5.89ರಷ್ಟಿದ್ದ ದರವು 30 ವರ್ಷಗಳ ನಂತರ ಶೇ 6.02ಕ್ಕೆ ಏರಿಕೆ ಕಂಡಿದೆ ಎಂದು ಅಡಮಾನ ಖರೀದಿದಾರ ಕಂಪನಿ ಫ್ರೆಡ್ಡೀ ಮ್ಯಾಕ್ ವರದಿ ಹೇಳಿದೆ.
ದೀರ್ಘಾವಧಿ ಸರಾಸರಿ ದರವು ಒಂದು ವರ್ಷದ ಹಿಂದೆ ಇದ್ದ ಶೇ 2.86ಕ್ಕೆ ಹೋಲಿಸಿದರೆ ಈಗಿನ ದರ ದುಪ್ಪಟ್ಟಾಗಿದೆ.

ಹಣದುಬ್ಬರವನ್ನು ತಗ್ಗಿಸುವ ಫೆಡರಲ್ ರಿಸರ್ವ್ ಬ್ಯಾಂಕಿನ ಆಕ್ರಮಣಶೀಲ ನೀತಿಯ ಪರಿಣಾಮವಾಗಿ ಬಡ್ಡಿದರಗಳು ಹೆಚ್ಚುತ್ತಿವೆ ಮತ್ತು ವರ್ಷಾನುಗಟ್ಟಲೆ ವೇಗದ ಬೆಳವಣಿಗೆ ಕಂಡಿದ್ದ ವಸತಿ ಕ್ಷೇತ್ರವನ್ನು ಒಮ್ಮೆಲೇ ತಣ್ಣಗಾಗಿಸಿದೆ.

ಅಡಮಾನ ಸಾಲಕ್ಕೆ ಪ್ರತಿತಿಂಗಳು ನೂರಾರು ಡಾಲರ್ ಹಣ ವ್ಯಯವಾಗುತ್ತಿರುವ ಕಾರಣ ಹಲವಾರು ಸಂಭವನೀಯ ಗೃಹ ಖರೀದಿದಾರರು ಮಾರುಕಟ್ಟೆಯಿಂದಲೇ ಹೊರಹೋಗುವ ವಾತಾವರಣ ನಿರ್ಮಾಣವಾಗಿದೆ.

ನ್ಯಾಷನಲ್ ಅಸೋಸಿಯೇಷನ್ ಆಫ್ ರಿಯಾಲ್ಟರ್ಗಳ ಪ್ರಕಾರ, ಅಮೆರಿಕದಲ್ಲಿ ಸದ್ಯ ಸಿದ್ಧವಿರುವ ಮನೆಗಳ ಮಾರಾಟವು ಆರು ತಿಂಗಳ ಅವಧಿಗೆ ಕುಸಿದಿದೆ.
ತಮ್ಮ ಮನೆಗಳಿಗೆ ಮರು ಹಣಕಾಸು ಹೊಂದಿಸುವವರಲ್ಲಿ ಜನಪ್ರಿಯವಾಗಿರುವ, ಅಡಮಾನಗಳ ಮೇಲಿನ ನಿಗದಿತ ಬಡ್ಡಿದರವು ಕಳೆದ ವಾರದ ಶೇ 5.16ರಿಂದ ಶೇ 5.21ಕ್ಕೆ ಹೆಚ್ಚಳ ಕಂಡಿದೆ. ಕಳೆದ ವರ್ಷ ಇದೇ ಅವಧಿಗೆ ಈ ದರವು ಶೇ 2.19ರಷ್ಟಿತ್ತು.

ಈ ವರ್ಷ ಫೆಡರಲ್ ಬ್ಯಾಂಕ್ ತನ್ನ ಅಲ್ಪಾವಧಿಯ ಬಡ್ಡಿದರದ ಮಾನದಂಡವನ್ನು ನಾಲ್ಕುಬಾರಿ ಹೆಚ್ಚಿಸಿದೆ ಮತ್ತು ಅದರ ಅಧ್ಯಕ್ಷ ಜೆರೊಮ್ ಪೊವೆಲ್, ʻ40 ವರ್ಷಗಳಲ್ಲಿನ ಅತಿ ಕಠಿಣ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಕೆಲವು ಕಾಲದವರೆಗೆ ಆರ್ಥಿಕತೆ ವೇಗಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಬಡ್ಡಿದರವನ್ನು ಹೆಚ್ಚಿನ ಮಟ್ಟದಲ್ಲಿ ಇಡಲು ಕೇಂದ್ರೀಯ ಬ್ಯಾಂಕ್ ಬಯಸುತ್ತದೆʼ ಎಂದಿದ್ದಾರೆ.

ಬೇಸಿಗೆ ಆರಂಭದಿಂದಲೂ ಅನಿಲ ಬೆಲೆ ಗಮನಾರ್ಹವಾಗಿ ಹಿಮ್ಮುಖವಾಗಿದ್ದರೂ, ಈ ವಾರದ ಹಣದುಬ್ಬರದ ದತ್ತಾಂಶವು ಹೇಳುವಂತೆ, ವಾಸ್ತವದಲ್ಲಿ ಇತರ ಅಗತ್ಯ ವಸ್ತುಗಳ ಬೆಲೆಯು ಹೆಚ್ಚಳ ಕಂಡಿದೆ. ಫೆಡರಲ್ ಬ್ಯಾಂಕ್ ಬಡ್ಡಿದರಗಳನ್ನು ಇನ್ನಷ್ಟು ಹೆಚ್ಚಿಸಿದರೆ ಉಂಟಾಗಬಹುದಾದ ಆರ್ಥಿಕ ಹಿಂಜರಿತದ ಕಾರಣಕ್ಕೆ ಹೂಡಿಕೆದಾರರು ಭೀತಗೊಂಡಿದ್ದಾರೆ.

ಮುಂದಿನ ವಾರ ಸೆಂಟ್ರಲ್ ಬ್ಯಾಂಕ್ನ ಪ್ರಮುಖರ ಸಭೆ ನಡೆಯಲಿದ್ದು, ಪ್ರಾಥಮಿಕ ಸಾಲದ ದರವನ್ನು ಮುಕ್ಕಾಲು ಭಾಗದಷ್ಟು ಹೆಚ್ಚಿಸಲಿದ್ದಾರೆ ಎಂದು ಹೆಚ್ಚಿನ ಅರ್ಥಶಾಸ್ತ್ರಜ್ಞರು ಮುನ್ಸೂಚನೆ ನೀಡಿದ್ದಾರೆ.

ಏಪ್ರಿಲ್ನಿಂದ ಜೂನ್ ವರೆಗಿನ ತ್ರೈಮಾಸಿಕದಲ್ಲಿ ಅಮೆರಿಕದ ಆರ್ಥಿಕತೆಯು ವಾರ್ಷಿಕ ಸರಾಸರಿಯ ಶೇ 0.6ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರದ ವರದಿ ಹೇಳಿದೆ. ಇದು ಆರ್ಥಿಕ ಹಿಂಜರಿತದ ಒಂದು ಮುನ್ಸೂಚನೆ ಎನ್ನಲಾಗಿದೆ.

ಇನ್ನೊಂದು ಕಡೆ, ಆರ್ಥಿಕತೆಯು ಹಿಂಜರಿತದ ಅಂಚಿಗೆ ಬಂದು ನಿಂತಿದ್ದರೂ ಅಮೆರಿಕದ ಉದ್ಯೋಗ ಮಾರುಕಟ್ಟೆಯು ದೃಢವಾಗಿಯೇ ಇದೆ ಎಂದು ಅನೇಕ ಆರ್ಥಿಕ ತಜ್ಞರು ಊಹೆ ಮಾಡಿದ್ದಾರೆ.

ಹಣದುಬ್ಬರ ನಿಯಂತ್ರಣಕ್ಕೆ ಕೇಂದ್ರೀಯ ಬ್ಯಾಂಕ್ ಕೈಗೊಂಡ ಕಠಿಣ ಕ್ರಮಗಳ ಹೊರತಾಗಿಯೂ, ನಿರುದ್ಯೋಗ ಭತ್ಯೆಗಾಗಿ ಅರ್ಜಿ ಸಲ್ಲಿಕೆ ಪ್ರಮಾಣವು ಕಳೆದ ವಾರ ಮತ್ತೆ ತಗ್ಗಿದ್ದು, ಮೇ ತಿಂಗಳಿಗಿಂತಲೂ ಕಡಿಮೆ ಮಟ್ಟದಲ್ಲಿ ಇದೆ.

Related News

spot_img

Revenue Alerts

spot_img

News

spot_img