ದಾವಣಗೆರೆ ;ಜಿಲ್ಲೆಯ ರೈತ ಸಾಗುವಳಿದಾರರಿಗೆ ಬಗರ್‌ಹುಕುಂ ಹಕ್ಕುಪತ್ರ ವಿತರಿಸಬೇಕು,ಫಾರಂ ನಂ. 53 ರಲ್ಲಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿ ಅ ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆ (AIKKMS)ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ಜಿಲ್ಲೆಯಲ್ಲಿ 70-80 ವರ್ಷದಿಂದ ಭೂಹೀನ ಬಡ ರೈತರು, ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯದ ಕುರುಚಲುಗಿಡ, ಕಲ್ಲು ಭೂಮಿ ಇರುವ ಪ್ರದೇಶದಲ್ಲಿ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದು, ಕೈಗಾರಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗದಿದ್ದರಿಂದ ಅನಿವಾರ್ಯವಾಗಿ ಜೀವನ ನಿರ್ವಹಣೆಗೆ ಸಾಗುವಳಿ ಮಾಡುತ್ತಿರುವುದು ಸರ್ಕಾರದ ಗಮನದಲ್ಲಿದ್ದು, ಉಳುಮೆಗೆ ಅವಕಾಶ ಕೊಟ್ಟಿರುವ ಸರ್ಕಾರಗಳು, ಹಕ್ಕುಪತ್ರ ನೀಡುತ್ತಿಲ್ಲ.ರೈತರಿಗೆ ಇದರಿಂದ ಬರುವ ಅಲ್ಪಸ್ವಲ್ಪ ವರಮಾನವೇ ಜೀವನಾಧಾರವಾಗಿದೆ.
ಹಕ್ಕುಪತ್ರ ನೀಡುವವರೆಗೆ ಅಂತಹ ರೈತರ ಜಮೀನುಗಳಿಗೆ ರಕ್ಷಣೆ ಕೊಡಬೇಕು.ಲಕ್ಷಾಂತರ ಭೂ ಹೀನ ಹಾಗೂ ಬಡರೈತ ಕೃಷಿಕಾರ್ಮಿಕರು ಹಕ್ಕುಪತ್ರ ಪಡೆಯಲು ಅರ್ಜಿ ಹಾಕಬೇಕೆಂದು ಕಾಯುತ್ತಿದ್ದರೂ ಸರ್ಕಾರ ಸೂಕ್ತ ತೀರ್ಮಾನತೆಗೆದು ಕೊಳ್ಳದ ಪರಿಣಾಮವಾಗಿ, ಬಗರ್ ಸಾಗುವಳಿದಾರರು ಮತ್ತಷ್ಟು ಆತಂಕದಿಂದಜೀವನ ಸಾಗಿಸುವಂತಾಗಿದೆ.ಫಾರಂ ನಂ. 53ರಡಿ ಸಲ್ಲಿಸಲಾದ ಅರ್ಜಿಗಳಲ್ಲಿ ಬಹುತೇಕವು ತಿರಸ್ಕೃತಗೊಂಡಿದ್ದು ಅವನ್ನು ಮರು ಪರಿಶೀಲಿಸಬೇಕು ಎಂದು ಸಂಘಟನಾಕಾರರು ಹೇಳಿದರು.
ಶಾಸನಬದ್ಧವಾಗಿ ಭೂಮಿಯ ಹಕ್ಕು ದೊರೆಯದ್ದರಿಂದಾಗಿ ಕೃಷಿ ಬೆಳೆ ಸಾಲ, ಕೃಷಿ ಪರಿಕರಗಳ ಮೇಲಿನ ಸಾಲ, ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಲ್ಪಾವಧಿ ಸಾಲವೂ ದೊರೆಯದಂತಾಗಿದೆ, ಇನ್ನೂ ಲಕ್ಷಾಂತರ ಜನ ಹಕ್ಕುಪತ್ರ ಸಿಗದೆ ಜಾತಕ ಪಕ್ಷಿಗಳ ಹಾಗೆ ಕಾಯುತ್ತಾ ಕುಳಿತ್ತಿದ್ದಾರೆ. ಸರ್ಕಾರಗಳು ಇಲ್ಲಿಯವರೆವಿಗೂ ಉಳುಮೆಗೆ ಅವಕಾಶ ಕೊಟ್ಟಿದ್ದರು ಸಾಗುವಳಿದಾರರಿಗೆ ಹಕ್ಕುಪತ್ರವನ್ನು ನೀಡಲು ಅವಶ್ಯಕ ಕ್ರಮಕೈಗೊಂಡಿಲ್ಲ.ಇದುವರೆಗೆ ಬಗರ್‌ಹುಕುಂ ಸಾಗುವಳಿದಾರರ 12 ಲಕ್ಷ ಅರ್ಜಿಗಳು ಸರ್ಕಾರದ ಮುಂದಿದ್ದರೂ ಹಕ್ಕುಪತ್ರ ನೀಡಲಾಗಿಲ್ಲ. ಇದರಿಂದ ಲಕ್ಷಾಂತರ ಭೂಹೀನರು, ಬಡ ರೈತರು ಅರ್ಜಿ ಹಾಕಲು ಕಾಯುತ್ತಿದ್ದರೂ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ ಎಂದು ಸಂಘಟನಾಕಾರರು ದೂರಿದರು.