ಚಂಡೀಗಡ: ಕಡಿಮೆ ಮಧ್ಯಮ ಆದಾಯ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಕೈಗೆಟುಕುವ ವಸತಿ ಒದಗಿಸಲು ಮತ್ತು ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಪಂಜಾಬ್ ಹೊಸ ವಸತಿ ಯೋಜನೆ ಜಾರಿಗೆ ಚಿಂತನೆ ನಡೆಸಿದೆ. ಈ ಬಗ್ಗೆ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಅಮನ್ ಅರೋರಾ ಮಾಹಿತಿ ನೀಡಿದ್ದು, ಪಂಜಾಬ್ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯು ಶೀಘ್ರದಲ್ಲೇ ಹೊಸ ಕೈಗೆಟುಕುವ ವಸತಿ ನೀತಿಯನ್ನು ತರಲಿದೆ ಎಂದು ಹೇಳಿದ್ದಾರೆ.
ಹೊಸ ನೀತಿಯ ಕರಡನ್ನು ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
“ಇಲಾಖೆಯು ‘ಪಂಜಾಬ್ ಕೈಗೆಟುಕುವ ವಸತಿ ನೀತಿ-202’ ಅನ್ನು ರೂಪಿಸಿದೆ. ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ಕರಡನ್ನು ಈಗಾಗಲೇ ಅಧಿಕೃತ ವೆಬ್‌ಸೈಟ್ – www.puda.gov.in – ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆಸಕ್ತಿಯಿರುವವರು ಅಕ್ಟೋಬರ್ 29 ರವರೆಗೆ ತಮ್ಮ ಸಲಹೆಗಳನ್ನು ಲಿಖಿತವಾಗಿ ಸಲ್ಲಿಸಬಹುದು” ಸಚಿವರು ಹೇಳಿದ್ದಾರೆ.
ಈ ಹೊಸ ನೀತಿಯಲ್ಲಿ, ಪ್ಲಾಟ್ ಮಾಡಿದ ಕಾಲೋನಿಗೆ ಕನಿಷ್ಠ ಪ್ರದೇಶವನ್ನು ಐದು ಎಕರೆಗಳಿಗೆ ನಿಗದಿಪಡಿಸಲಾಗಿದೆ. ಗುಂಪು ವಸತಿಗೆ ಅಗತ್ಯವಿರುವ ಕನಿಷ್ಠ ಪ್ರದೇಶ ಎರಡು ಎಕರೆ ಎಂದು ಅರೋರಾ ಹೇಳಿದ್ದಾರೆ. ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಒದಗಿಸಲು ಸಾಮಾನ್ಯ ಕಾಲೋನಿಗಳಲ್ಲಿ ಮಾರಾಟ ಮಾಡಬಹುದಾದ ಪ್ರದೇಶವನ್ನು ಶೇ.55ರಿಂದ ಶೇ.65ಕ್ಕೆ ಹೆಚ್ಚಿಸಲಾಗಿದೆ.
ವೈಯಕ್ತಿಕ ಪ್ಲಾಟ್ ಹೊಂದಿರುವವರ ಮೇಲಿನ ಹೊರೆಯನ್ನು ಕಡಿಮೆ ಮಾಡಲು, ಶಾಲೆಗಳು, ಔಷಧಾಲಯಗಳು ಮತ್ತು ಇತರ ಸಾಮಾನ್ಯ ಸೌಲಭ್ಯಗಳನ್ನು ಒದಗಿಸುವ ಕಡ್ಡಾಯ ನಿಬಂಧನೆಗಳನ್ನು ತಡೆಹಿಡಿಯಲಾಗಿದೆ ಎಂದು ಅರೋರಾ ಹೇಳಿದ್ದಾರೆ. ಸಾಮಾನ್ಯ ಕಾಲೋನಿಗೆ ಅನ್ವಯವಾಗುವ CLU, EDC ಮತ್ತು ಇತರ ಶುಲ್ಕಗಳು ಸಹ ಶೇಕಡಾ 50 ರಷ್ಟು ಕಡಿಮೆ ಮಾಡಲಾಗಿದೆ. ಆದರೆ GMADA ಪ್ರದೇಶದಲ್ಲಿ ಶುಲ್ಕ ಕಡಿತವಿಲ್ಲ.
ಗರಿಷ್ಠ ಪ್ಲಾಟ್ ಗಾತ್ರವನ್ನು 150 ಚದರ ಮೀಟರ್ ಮತ್ತು ಗರಿಷ್ಠ ಫ್ಲಾಟ್ ಗಾತ್ರ 90 ಚದರ ಮೀ ಎಂದು ನಿಗದಿಪಡಿಸಲಾಗಿದೆ. ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಲು ಪಾರ್ಕಿಂಗ್ ನಿಯಮಗಳಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.
ಚಂಡೀಗಢದಲ್ಲಿ ಈ ಹೊಸ ನೀತಿ ಅನ್ವಯವಾಗುವುದಿಲ್ಲ ಮತ್ತು ಎಸ್‌ಎಎಸ್ ನಗರದಲ್ಲಿ (ಮೊಹಾಲಿ) ಹೊಸ ಕಾಲೋನಿಗೆ ಅಗತ್ಯವಿರುವ ಪ್ರದೇಶವು ಮಾಸ್ಟರ್ ಪ್ಲಾನ್ ಪ್ರಕಾರ 25 ಎಕರೆ ಎಂದು ಸಚಿವ ಅಮನ್ ಅರೋರಾ ಸ್ಪಷ್ಟಪಡಿಸಿದ್ದಾರೆ.