ನಾಗಮಂಗಲ;ಜಮೀನು ಖಾತೆ ಮಾಡಿಕೊಡಲು ಫೋನ್ ಪೇ ಮತ್ತು ನಗದು ರೂಪದಲ್ಲಿ ಸುಮಾರು 66 ಸಾವಿರ ಹಣವನ್ನು ಹಲವು ಕಂತುಗಳಲ್ಲಿ ಪಡೆದ ಆರೋಪದಡಿ ಗ್ರಾಮ ಲೆಕ್ಕಿಗನ ವಿರುದ್ಧ ಮಹಿಳೆಯೊಬ್ಬರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.ತಾಲೂಕಿನ ಬಿಂಡಿಗನವಿಲೆ ನಾಡಕಛೇರಿ ಲಾಳನಕೆರೆ ವೃತ್ತದ ಗ್ರಾಮ ಲೆಕ್ಕಿಗ ನಿಂಗಪ್ಪ ಸುರಪುರ ಎಂಬುವವರು ಲಾಳನಕೆರೆ ಗ್ರಾಮದ ಮಹಿಳೆ ಮೀನಾಕ್ಷಿ ಎಂಬುವವರ ಬಳಿ ಜಂಟಿ ಖಾತೆ ಮಾಡಿಕೊಡಲು 66 ಸಾವಿರ ರೂಗಳನ್ನ 5 ಕಂತುಗಳಲ್ಲಿ, ಫೋನ್ ಪೇ ಹಾಗೂ ನೇರವಾಗಿ ಪಡೆದ ಆರೋಪ ಕೇಳಿಬಂದಿದೆ.
ಈ ಸಂಬಂಧ ನೊಂದ ಮಹಿಳೆ ಮೀನಾಕ್ಷಿ ನಾಗಮಂಗಲ ತಹಶೀಲ್ದಾರ ಹಾಗೂ ಮಂಡ್ಯ ಜಿಲ್ಲಾಧಿಕಾರಿ ದೂರು ನೀಡಿದ್ದು, ಗ್ರಾಮಲೆಕ್ಕಿಗ ನಿಂಗಪ್ಪ ಸುರಪುರ ಗೆ ಜಿಲ್ಲಾಧಿಕಾರಿ ಡಾ. ಕುಮಾರ್ ತುರ್ತು ನೋಟಿಸ್ ಜಾರಿ ಮಾಡಿದ್ದಾರೆ.ಗ್ರಾಮ ಲೆಕ್ಕಿಗ ನಿಂಗಪ್ಪ ಸುರಪುರ ವಿರುದ್ಧ ನೇರ ಆರೋಪ ಮಾಡಿರುವ ಮೀನಾಕ್ಷಿ, ನಾನು ಮೈಸೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ನನ್ನ ಮಾವ ಚುಂಚೇಗೌಡರ ಜಮೀನನ್ನು ನನ್ನ ಗಂಡ ನಿಂಗಪ್ಪ ಮತ್ತು ಅವರ ಸಹೋದರ ಹೆಸರಿಗೆ ಜಂಟಿ ಖಾತೆ ಮಾಡಿಕೊಡಲು ಸೂಕ್ತ ದಾಖಲಾತಿಗಳೊಂದಿಗೆ ತೆರಳಿದಾಗ ಖಾತೆ ಮಾಡಿಕೊಳ್ಳಲು 66ಸಾವಿರ ಹಣ ಕೇಳಿ, ಮರಣ- ಜನನ ಪತ್ರಕ್ಕೆoದು ನನ್ನ ಬಳಿ ಮೊದಲ ಬಾರಿಗೆ 26 ಸಾವಿರ ರೂ.ಗಳನ್ನ ಪಡೆದರು. ಗ್ರಾಮ ಲೆಕ್ಕಿಗ ನಿಂಗಪ್ಪ ಸುರಪುರ ಅವರು ಖಾತೆ ಮಾಡಿಕೊಡಲು ಫೋನ್ ಪೇ, ನಗದು ರೂಪದಲ್ಲಿ ಕಂತುಗಳಲ್ಲಿ ಲಂಚವನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.ಈ ವಿಚಾರವಾಗಿ ಕಾರಣ ಕೇಳಿ ನಿಂಗಪ್ಪ ಅವರಿಗೆ ನೋಟಿಸ್ ನೀಡಿದ್ದು, ಸುಮಾರು ಮೂರ್ನಾಲ್ಕು ದಿನಗಳಿಂದ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.ಪ್ರಕರಣದ ಕುರಿತು ಅಗತ್ಯ ತನಿಖೆಯನ್ನು ಮಾಡಲಾಗುತ್ತದೆ ಎಂದು ತಹಸೀಲ್ದಾರ್ ನಯೀಂ ಉನ್ನೀಸಾ ತಿಳಿಸಿದ್ದಾರೆ.