ಬೆಂಗಳೂರು, ಮಾ. 29 : ನಾಳೆ ಶ್ರೀರಾಮ ನವಮಿ ಹಬ್ಬವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಕರ್ನಾಟಕದ ಪ್ರಮುಖ ತಿಂಡಿ ಗೊಜ್ಜವಲಕ್ಕಿ. ಶ್ರೀರಾಮ ನವಮಿಗೆ ಕರ್ನಾಟಕದ ಬಹುತೇಕರ ಮನೆಯಲ್ಲಿ ಈ ತಿನಿಸನ್ನು ತಯಾರಿಸಿ ರಾಮನಿಗೆ ನೈವೇದ್ಯ ಮಾಡಲಾಗುತ್ತದೆ. ಹಾಗಾದರೆ, ಅವಲಕ್ಕಿಯಿಂದ ತಯಾರಿಸುವ ಈ ಗೊಜ್ಜವಲಕ್ಕಿಯನ್ನು ತಯಾರಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ..
ಬೇಕಾಗುವ ಪದಾರ್ಥಗಳು: 2 ಕಪ್ ಗಟ್ಟಿ ಅವಲಕ್ಕಿ, 1/4 ಕಪ್ ತೆಂಗಿನ ತುರಿ, 1 ನೆಲ್ಲಿಕಾಯಿ ಗಾತ್ರದ ಬೆಲ್ಲ, 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು, 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/4 ಟೀಸ್ಪೂನ್ ಅರಿಶಿನ, ಉಪ್ಪು ರುಚಿಗೆ ತಕ್ಕಷ್ಟು.
ಮಸಾಲೆಗೆ ಬೇಕಾಗುವ ಪದಾರ್ಥಗಳು: 2 – 4 ಕೆಂಪು ಮೆಣಸಿನಕಾಯಿ, 1.5 ಟೀಸ್ಪೂನ್ ಕೊತ್ತಂಬರಿ ಬೀಜ, 1/2 ಟೀಸ್ಪೂನ್ ಜೀರಿಗೆ, 7 – 8 ಮೆಂತ್ಯೆ, ಚಿಟಿಕೆ ಸಾಸಿವೆ, ದೊಡ್ಡ ಚಿಟಿಕೆ ಇಂಗು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: 1 ಒಣ ಮೆಣಸಿನಕಾಯಿ (ಬೇಕಾದಲ್ಲಿ), 1/2 ಟೀಸ್ಪೂನ್ ಸಾಸಿವೆ, 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ, 1 ಟೀಸ್ಪೂನ್ ಉದ್ದಿನ ಬೇಳೆ, 1 ಟೀಸ್ಪೂನ್ ಕಡಲೆಬೇಳೆ, 7 – 8 ಗೋಡಂಬಿ, 4 – 6 ಕರಿಬೇವಿನ ಎಲೆ, 4 ಟೇಬಲ್ ಚಮಚ ಅಡುಗೆ ಎಣ್ಣೆ
ಗೊಜ್ಜವಲಕ್ಕಿ ಮಾಡುವ ವಿಧಾನ: ಒಂದು ಬಟ್ಟಲಿನಲ್ಲಿ ಹುಣಿಸೆಹಣ್ಣನ್ನು ಅರ್ಧ ಕಪ್ ನೀರಿನಲ್ಲಿ ನೆನೆಸಿಡಿ. ಒಂದು ಬಾಣಲೆಯಲ್ಲಿ ಒಣ ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ, ಮೆಂತೆ ಮತ್ತು ಇಂಗನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಬದಲಾಗಿ ರಸಂ ಪೌಡರ್ ಬಳಸಬಹುದು. ದಪ್ಪ ಅಥವಾ ಗಟ್ಟಿ ಅವಲಕ್ಕಿಯನ್ನು ಮಿಕ್ಸಿ ಜಾರಿನಲ್ಲಿ ದೊಡ್ಡದಾಗಿ ಪುಡಿ ಮಾಡಿ. ಪುಡಿ ಮಡಿದ ಅವಲಕ್ಕಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.
ಅದಕ್ಕೆ ಉಪ್ಪು, ಅರಿಶಿನ ಮತ್ತು ಸಿದ್ಧ ಪಡಿಸಿದ ಮಸಾಲೆ ಪುಡಿಯನ್ನು (ಅಥವಾ ರಸಂ ಪೌಡರ್) ಹಾಕಿ. ನಂತ್ರ ಬೆಲ್ಲ ಮತ್ತು ಹುಣಸೆ ರಸ ಸೇರಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಕಲಸಿ. ನೀರಿನ ಪ್ರಮಾಣ ಅವಲಕ್ಕಿಯ ದಪ್ಪದ ಮೇಲೆ ಬದಲಾಗುತ್ತದೆ. ನಾನು ಸುಮಾರು ಒಂದೂವರೆ ಕಪ್ ನಷ್ಟು ಹಾಕಿದೆ. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ , ಉದ್ದಿನ ಬೇಳೆ, ಕಡಲೆಬೇಳೆ, ಗೋಡಂಬಿ ಮತ್ತು ಕಡಲೆಕಾಯಿ (ಶೇಂಗಾ) ಬಳಸಿಕೊಂಡು ಒಗ್ಗರಣೆ ಮಾಡಿ. ನಂತರ ಕರಿಬೇವು ಸೇರಿಸಿ.
ಸಿದ್ದಪಡಿಸಿದ ಅವಲಕ್ಕಿ ಮಿಶ್ರಣವನ್ನು ಹಾಕಿ, ಚೆನ್ನಾಗಿ ಕಲಸಿ. 5 ನಿಮಿಷ ಕಡಿಮೆ ಜ್ವಾಲೆಯಲ್ಲಿ ಬೇಯಿಸಿ. ತುಂಬ ಪುಡಿ ಪುಡಿ ಅಥವಾ ಒಣ ಒಣ ಎನಿಸಿದರೆ ಸ್ವಲ್ಪ ನೀರು ಚಿಮುಕಿಸಿ. ಕೊನೆಯಲ್ಲಿ ತೆಂಗಿನ ತುರಿ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ. ರುಚಿಕರ ಗೊಜ್ಜವಲಕ್ಕಿಯನ್ನು ತಿಂದು ಆನಂದಿಸಿ.