19.8 C
Bengaluru
Monday, December 23, 2024

2023 ಮಾರ್ಚ್‌ 31 ರ ಒಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡಿಸದಿದ್ದರೆ ನಿಜವಾಗಿಯೂ 10 ಸಾವಿರ ರೂ. ದಂಡ ಕಟ್ಟಬೇಕ?

Aadhaar-PAN# link# March 31st # fine#  10,000#Rupees
ಆಧಾರ್-ಪ್ಯಾನ್‌ ಲಿಂಕ್‌ ಬಗ್ಗೆ ಜನರಿಗೆ ಒಂದಷ್ಟು ಗೊಂದಲ ಸೃಷ್ಟಿ ಮಾಡಲಾಗುತ್ತಿದೆ.
ನಿನ್ನೆಯಿಂದ ಸುಮಾರು ಜನರು ಇದರ ಬಗ್ಗೆ ಒಂದೊಂದು ರೀತಿ ಜನರು ಮಾತನಾಡುತ್ತಿದ್ದಾರೆ.

ವಾಸ್ತವ ಏನೆಂದರೆ…

ಈ ಆಧಾರ್-ಪ್ಯಾನ್‌ ಲಿಂಕ್‌ ಮಾಡುವ ಸುತ್ತೋಲೆ ಹೊರಡಿಸಿದ್ದು 2017 ರಲ್ಲಿ! ಅಂದರೆ 5-6 ವರ್ಷವಾಗಿದೆ. 2017 ರಲ್ಲಿ ಸುತ್ತೋಲೆ ಹೊರಡಿಸುವಾಗಲೇ 2022 ಮಾರ್ಚ್‌ 31 ರ ಒಳಗೆ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ಉಲ್ಲೇಖಿಸಲಾಗಿತ್ತು. ಅದರ ನಂತರ ಅಂದರೆ ಜೂನ್‌ 2022 ರ ವರೆಗೆ ಅದನ್ನು ವಿಸ್ತರಿಸಿದರು. ಅದಕ್ಕೆ 500 ರೂ. ದಂಡ ಕಟ್ಟುಬೇಕಿತ್ತು. ಜೂನ್‌ 2022 ರ ನಂತರ ಮತ್ತೆ ಅವಧಿ ವಿಸ್ತರಿಸಿದರಾದರೂ, ದಂಡವನ್ನು ದುಪ್ಪಟ್ಟು ಮಾಡಿದರು. ಅಂದರೆ ಮಾರ್ಚ್‌ 31 ರ ಒಳಗೆ 1000 ರೂ. ಕೊಡಬೇಕಿದೆ.

ಆದರೆ, ಈ 10 ಸಾವಿರದ ಸುದ್ದಿ ಅರ್ಧ ಸತ್ಯ!

2023 ಮಾರ್ಚ್‌ 31 ರ ನಂತರ ಲಿಂಕ್‌ ಮಾಡಿಸಲು ಹೋದರೆ 10 ಸಾವಿರ ದಂಡ ತುಂಬಬೇಕಾಗುತ್ತದೆ ಎಂಬುದು ಶುದ್ಧ ಸುಳ್ಳು. ಆದರೆ, ಲಿಂಕ್‌ ಮಾಡಿಸದೇ ಅನೂರ್ಜಿತವಾಗುವ ಪ್ಯಾನ್ ಕಾರ್ಡ್‌ ಬಳಸಿ, ಆಫ್‌ಲೈನ್‌ನಲ್ಲಿ ನೀವು ವಹಿವಾಟು ಮಾಡಿದಾಗ, ಅದು ಆದಾಯ ತೆರಿಗೆ ಇಲಾಖೆಯ ಅಸೆಸಿಂಗ್ ಆಫೀಸರ್ ಕೈಗೆ ಸಿಕ್ಕರೆ ಆಗ ಆತ 10 ಸಾವಿರದ ವರೆಗೆ ದಂಡ ವಿಧಿಸಬಹುದು. ಆದರೆ, ಅದು ಲಿಂಕ್ ಮಾಡಿಸಿಲ್ಲದ್ದಕ್ಕೆ ವಿಧಿಸುವ ದಂಡವಲ್ಲ. ಬದಲಿಗೆ ಅನಧಿಕೃತ ಹಣಕಾಸು ವಹಿವಾಟು ನಡೆಸಿದ ಆಧಾರದಲ್ಲಿ ವಿಧಿಸುವ ದಂಡ ಎಂಬುದು ನೆನಪಿರಲಿ. ಅಲ್ಲದೆ, ಅದು ಗರಿಷ್ಠ ಮೊತ್ತ. ಅಸೆಸಿಂಗ್ ‌ ಆಫೀಸರ್ 100 ರೂ. ಅನ್ನೂ ದಂಡವಾಗಿ ವಿಧಿಸಬಹುದು!

ಆದರೆ, 2017 ರ ನಂತರ ಪ್ಯಾನ್ ಮಾಡಿಸಿಕೊಂಡವರ್ಯಾರೂ ಪ್ಯಾನ್‌-ಆಧಾರ್ ಲಿಂಕ್‌ ಮಾಡಿಸಬೇಕಿಲ್ಲ. ಯಾಕೆಂದರೆ, ಅವರಿಗೆ ಪ್ಯಾನ್‌ ಅರ್ಜಿ ಹಾಕುವಾಗಲೇ ಆಧಾರ್ ಕೊಡುವುದು ಕಡ್ಡಾಯವಾಗಿತ್ತು. ಆಮೇಲೆ, 80 ವರ್ಷವಾದವರೂ ಈ ಲಿಂಕ್‌ ಮಾಡಬೇಕಿಲ್ಲ. ಅವರಿಗೆ ವಿನಾಯಿತಿ ಇದೆ.

ಒಂದು ವೇಳೆ ಲಿಂಕ್‌ ಮಾಡದಿದ್ದರೆ ಏನಾಗುತ್ತದೆ?

ನೀವು ಪ್ಯಾನ್‌ ಲಿಂಕ್‌ ಮಾಡದಿದ್ದರೆ ಪ್ಯಾನ್‌ ನಿಷ್ಕ್ರಿಯವಾಗುತ್ತದೆ. ಅಂದರೆ, ಸರ್ಕಾರದಿಂದ ಸಬ್ಸಿಡಿ ಪಡೆಯುವ ಬ್ಯಾಂಕ್‌ ಖಾತೆಗೆ ನೀವು ಈ ಪ್ಯಾನ್ ಕೊಟ್ಟಿದ್ದರೆ, ಆ ಬ್ಯಾಂಕ್‌ ಖಾತೆ ಕೆವೈಸಿ ನಾನ್‌ ಕಂಪ್ಲೈಂಟ್‌ ಆಗುತ್ತದೆ. ಆಗ ನಿಮ್ಮ ಬ್ಯಾಂಕ್‌ನವರು ನಿಮ್ಮನ್ನು ಕರೆದು ಹೇಳುತ್ತಾರೆ. ಬೇರೆ ಪ್ಯಾನ್ ಕಾರ್ಡ್‌ ಲಿಂಕ್ ಮಾಡಿಸಿ ಎಂದು.
ಆಗ ನೀವು ಬ್ಯಾಂಕ್‌ಗೆ ಹೊಸ ಪ್ಯಾನ್‌ ಕಾರ್ಡ್‌ ಕೊಡಬೇಕು ಅಥವಾ 20% ತೆರಿಗೆ ಕಟ್ಟಬೇಕಾಗುತ್ತದೆ. ಅದೇ ರೀತಿ, ಪ್ಯಾನ್‌ ಕಾರ್ಡ್‌ ಕೊಟ್ಟ ಎಲ್ಲ ವಹಿವಾಟಿನಲ್ಲೂ ಸಮಸ್ಯೆಯಾಗುತ್ತದೆ. ಹೊಸದಾಗಿ ಆ ಪ್ಯಾನ್‌ ಕಾರ್ಡ್‌ ಕೊಡಲು ಆಗುವುದಿಲ್ಲ. ಯಾಕೆಂದರೆ, ಅದು ಅನೂರ್ಜಿತವಾಗಿರುತ್ತದೆ.

ಆದರೆ….

ಒಂದೋ, ಈ ಐದು ವರ್ಷದಲ್ಲಿ ಬಹುತೇಕರು ಪ್ಯಾನ್‌ ಕಾರ್ಡ್ ಲಿಂಕ್‌ ಮಾಡಿಸಿಕೊಂಡಿದ್ದಾರೆ. ಅಥವಾ 2017 ರ ನಂತರ ಪ್ಯಾನ್ ಕಾರ್ಡ್‌ ಖರೀದಿ ಮಾಡಿರುತ್ತಾರೆ (ಹಾಗಾಗಿ ಪ್ರತ್ಯೇಕ ಲಿಂಕ್‌ ಮಾಡಿಸುವ ಅಗತ್ಯ ಇರುವುದಿಲ್ಲ).

ಕಳೆದ 2022ರ ಮಾರ್ಚ್‌ವರೆಗೂ ಈ ಲಿಂಕ್‌ ಮಾಡುವ ಪ್ರಕ್ರಿಯೆ ಅತ್ಯಂತ ಸರಳವಾಗಿತ್ತು. ಬರಿ ಇನ್‌ಕಮ್‌ ಟ್ಯಾಕ್ಸ್ ‌ ವೆಬ್‌ಸೈಟ್‌ಗೆ ಹೋಗಿ ಹೋಮ್‌ ಬಟನ್ ಒತ್ತಿದರೆ ಅಲ್ಲಿ ‘ಲಿಂಕ್‌ ಆಧಾರ್’ ಮೇಲೆ ಕ್ಲಿಕ್ ಮಾಡಿದರೆ ಸಾಕು. ಎರಡು ಕಾಲಂ ಪೈಕಿ ಒಂದರಲ್ಲಿ ಪ್ಯಾನ್‌ ಕಾರ್ಡ್‌ ನಂಬರ್‌, ಮತ್ತೊಂದರಲ್ಲಿ ಆಧಾರ್ ಕಾರ್ಡ್‌ ನಂಬರ್‌ ಹಾಕಿ ವ್ಯಾಲಿಡೇಟ್‌ ಅಂತ ಒತ್ತಿದರೆ ಅವೆರಡೂ ಲಿಂಕ್ ಆಗಿರುತ್ತಿತ್ತು. ಈಗ ಅದಕ್ಕೆ ಇನ್ನೊಂದು ಸೇರ್ಪಡೆಯಾಗಿದೆ. ದುಡ್ಡನ್ನೂ ಪಾವತಿ ಮಾಡಬೇಕಿದೆ.

ನೋಡಿಕೊಳ್ಳೋದು ಹೇಗೆ?
ನಿಮ್ಮ ಪ್ಯಾನ್‌ ಲಿಂಕ್‌ ಆಗಿದೆಯೋ ಇಲ್ಲವೋ ಎಂಬುದನ್ನು ಇನ್‌ಕಮ್‌ ಟ್ಯಾಕ್ಸ್ ‌ ವೆಬ್‌ಸೈಟ್‌ಗೆ ಹೋಗಿ (https://eportal.incometax.gov.in/iec/foservices/#/pre-login/link-aadhaar-status) ನೋಡಿಕೊಳ್ಳಬಹುದು. ಲಿಂಕ್‌ ಆಗಿದೆಯೋ ಇಲ್ಲವೋ ಎಂಬುದನ್ನು ಅದು ತೋರಿಸುತ್ತದೆ.

ಲಿಂಕ್‌ ಆಗದ ಪ್ಯಾನ್‌ ಕಾರ್ಡ್‌ ಇಟ್ಟುಕೊಂಡು ಏಪ್ರಿಲ್‌ 1 ರಿಂದ ಏನು ಮಾಡುವುದು?

ತುಂಬಾ ಸರಳ. ಪ್ಯಾನ್‌ ಕಾರ್ಡ್‌ ಲಿಂಕ್ ಮಾಡಿಲ್ಲದಿದ್ದರೆ ತುಂಬಾ ತಲೆ ಕೆಡಿಸಿಕೊಳ್ಳಬೇಡಿ. ಅದು ನಿಷ್ಕ್ರಿಯವಾಗಿದೆ ಎಂದರ್ಥ. ನಿಮ್ಮ ಆಧಾರ್ ಕಾರ್ಡ್‌ ಬಳಸಿ ಹೊಸ ಪ್ಯಾನ್‌ಗೆ ಅರ್ಜಿ ಹಾಕಿ. 100 ರೂ. ಶುಲ್ಕ ತುಂಬಿ, ಅರ್ಜಿ ಹಾಕಿದರೆ 15-20 ದಿನಗಳಲ್ಲಿ ಪ್ಯಾನ್‌ ಕಾರ್ಡ್‌ ಬರುತ್ತದೆ.

ಯಾಕೆ ಈ ಲಿಂಕು?
ಈ ಲಿಂಕ್‌ ಮಾಡುವ ವ್ಯವಸ್ಥೆಗೂ ಮೊದಲು ಒಬ್ಬನೇ ವ್ಯಕ್ತಿ 2-3 ಪ್ಯಾನ್ ಮಾಡಿಸಿಕೊಂಡು, ಒಂದೊಂದು ಬ್ಯಾಂಕ್‌ ಖಾತೆಗೆ ಒಂದೊಂದನ್ನು ಕೊಟ್ಟು, ಆದಾಯ ತೆರಿಗೆ ಇಲಾಖೆಯ ಕಣ್ಣು ತಪ್ಪಿಸುವ ಕೆಲಸ ಮಾಡುತ್ತಿದ್ದದ್ದು ಅವ್ಯಾಹತವಾಗಿತ್ತು. ಹಾಗಾಗಿ, ಅದನ್ನು ತಪ್ಪಿಸುವುದಕ್ಕೆ ಎಂದು ಈ ವ್ಯವಸ್ಥೆ ಜಾರಿಗೆ ಬಂದಿದೆ. ಹಾಗಂತ ಇದೇನೂ ಫೂಲ್‌ ಪ್ರೂಫ್ ‌ ಅಲ್ಲ. ಆಧಾರ್ ಅನ್ನೂ 2-3 ಇಟ್ಟುಕೊಂಡವರಿದ್ದಾರೆ. ಬಾಂಗ್ಲಾದೇಶದಿಂದ ನುಸುಳಿ ಬಂದವರೂ ಆಧಾರ್ ಮಾಡಿಸಿಕೊಂಡವರಿದ್ದಾರೆ. ಆದರೆ, ವ್ಯವಸ್ಥೆಯನ್ನು ಸರಿ ಮಾಡುವ ನಿಟ್ಟಿನಲ್ಲಿ ಇದೊಂದು ಹೆಜ್ಜೆ.

ಆಧಾರ್-ಪ್ಯಾನ್‌ ಲಿಂಕ್‌ ಆಗದ್ದಕ್ಕೆ ತುಂಬಾ ತಲೆ ಕೆಡಿಸಿಕೊಂಡು, ಏಪ್ರಿಲ್‌ 1 ರ ನಂತರ ಲಿಂಕ್‌ ಮಾಡದವರನ್ನೆಲ್ಲ ಹುಡುಕಿಕೊಂಡು ಬಂದು 10 ಸಾವಿರ ದಂಡದ ಚೀಟಿ ಹರಿದು ಬಿಡುತ್ತಾರೆ ಎಂದು ಗಾಬರಿ ಬೀಳುವ ಅಗತ್ಯವಿಲ್ಲ.

Related News

spot_img

Revenue Alerts

spot_img

News

spot_img