ಹುಬ್ಬಳ್ಳಿ: ಮಾ, 06 : ಉದ್ಯಮಿ ಮನೆ ಮೇಲೆ ದಾಳಿ ನಡೆಸಿದ ಹುಬ್ಬಳ್ಳಿ ಸಿಸಿಬಿ ಪೊಲೀಸರು ಲೆಕ್ಕ ವಿಲ್ಲದ 3 ಕೋಟಿ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಿದ್ದಾರೆ.
ಹುಬ್ಬಳ್ಳಿಯ ಭವಾನಿನಗರದಲ್ಲಿರುವ ಉದ್ಯಮಿ ರಮೇಶ್ ಬೋನಗೇರಿ ಎಂಬುವರ ಮನೆಯಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಸಿಸಿಬಿ ಪೊಲೀಸರು ಈ ಪ್ರಕರಣವನ್ನು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಮೂರು ಕೋಟಿ ಹಣವನ್ನು ಸಿಸಿಬಿ ಪೊಲೀಸರು ವಶ ಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಉದ್ಯಮಿ ರಮೇಶ್ ಅವರ ಮನೆಗೆ ದಾಳಿ ಮಾಡಿದ ಪೊಲೀಸರಿಗೆ ದೊಡ್ಡ ಶಾಕ್ ಕಾದಿತ್ತು. ಇಷ್ಟು ದೊಡ್ಡ ಮೊತ್ತಕ್ಕೆ ಲೆಕ್ಕ ನೀಡದ ಹಿನ್ನೆಲೆ ಹಣವನ್ನು ವಶಕ್ಕೆ ತೆಗೆದುಕೊಂಡರು. ಪ್ರಕರಣದಲ್ಲಿ ತೆರಿಗೆ ವಂಚನೆ ನಡೆದಿರಬಹುದು ಎನ್ನಲಾಗಿದೆ. ಹಾಗೇನಾದರೂ ವಂಚನೆ ನಡೆದಿದ್ದರೆ, ತನಿಖೆ ನಡೆಸಲು ತೆರಿಗೆ ಇಲಾಖೆಯ ನೆರವು ಪಡೆಯುವ ಅವಶ್ಯಕತೆ ಇದೆ. ತನಿಖಾಧಿಕಾರಿ ಎಸ್.ಕೆ.ಪಟ್ಟಣಕುಡಿ ಅವರು ವಿಚಾರಣೆ ನಡೆಸಲಿದ್ದು, ಎಸಿಪಿ ನಾರಾಯಣ ಬರ್ಮಾನಿ ನೇತೃತ್ವದ ಸಿಸಿಬಿ ದಳ ದಾಳಿ ನಡೆಸಿತ್ತು.
ಉದ್ಯಮಿ ರಮೇಶ್ ಅವರ ಮನೆ ಮೇಲೆ ದಾಳಿ ನಡೆಸಿದಾಗ 500 ರೂಪಾಯಿ ಮುಖಬೆಲೆಯ ನಗದು ಪತ್ತೆಯಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೆ 25ಸಾವಿರ ರೂಪಾಯಿ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ. ದಾಳಿ ವೇಳೆ ಅಪರಾಧಗಳ ವಿಶೇಷ ತನಿಖಾ ತಂಡ ಭಾಗಿಯಾಗಿತ್ತು. ಎಎಸ್‌ಐ ಬಿ.ಎನ್. ಲಂಗೋಟಿ, ಹಾಗೂ ಸಿಬ್ಬಂದಿಗಳಾದ ಬಸವರಾಜ ಬೆಳಗಾವಿ, ಎಫ್.ಬಿ. ಕುರಿ, ರಾಜೀವ್ ಬಿಷ್ಟಂಡೇರ್, ಸಂತೋಷ ಇಚ್ಚಂಗಿ, ವಿದ್ಯಾ ದಳವಾಯಿ ಇದ್ದರು. ಇವರಿಗೆಲ್ಲಾ ಕಮಿಷನರ್ ಗುಪ್ತಾ ನಗದು ಬಹುಮಾನ ಘೋಷಿಸಿದ್ದಾರೆ. ಇದೀಗ ತನಿಖಾಧಿಕಾರಿ ಎಸ್.ಕೆ.ಪಟ್ಟಣಕುಡಿ ಮುಂದುವರಿಸಿದ್ದು, ಹಣದ ಮೂಲ ಪತ್ತೆಗೆ ವಿಚಾರಣೆ ನಡೆಸುತ್ತಿದ್ದಾರೆ.
Karnataka Police, ccb police, raid, Revenuefacts, news, tips, ಕರ್ನಾಟಕ ಪೊಲೀಸ್, ಸಿಸಿಬಿ ಪೊಲೀಸ್, ದಾಳಿ, ರೆವಿನ್ಯೂಫ್ಯಾಕ್ಟ್ಸ್, ಸುದ್ದಿಗಳು, ಸಲಹೆಗಳು