ಮಂಡ್ಯ: ಫೆ 20;ಅಂಡರ್ ಪಾಸ್ ಗಾಗಿ ಒತ್ತಾಯಿಸಿ ಗ್ರಾಮಸ್ಥರು ನಡೆಸಿದ ರಸ್ತೆ ತಡೆಯಿಂದಾಗಿ ಸೋಮವಾರ (ಫೆಬ್ರವರಿ 20) ರಂದು ಮಂಡ್ಯ ಜಿಲ್ಲೆಯ ಹನಕೆರೆಯ ಬಳಿ ಸುಮಾರು ಎರಡು ಗಂಟೆಗಳ ಕಾಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ದಟ್ಟನೆ ಉಂಟಾದ ಘಟನೆ ನಡೆದಿದೆ.
ಸ್ಥಳೀಯ ಗ್ರಾಮಸ್ಥರ ಓಡಾಟಕ್ಕೆ ಅನುಕೂಲವಾಗುವಂತೆ ಅಂಡರ್ ಪಾಸ್ ನಿರ್ಮಾಣವನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಜನರು ಹನಕೆರೆ ಹೆದ್ದಾರಿಯಲ್ಲಿ ಎತ್ತಿನ ಗಾಡಿಗಳನ್ನು ನಿಲ್ಲಿಸಿ ಅಂಡರ್ ಪಾಸ್ ನಿರ್ಮಾಣ ಆರಂಭಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಬೆದರಿಕೆ ಹಾಕಿದರು. ಮುಖ್ಯ ಹೆದ್ದಾರಿ ತಡೆದು ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸುತ್ತೇವೆ. ಸರ್ವಿಸ್ ರಸ್ತೆಯಲ್ಲಿ ಸಂಚಾರ ನಡೆಸಲಿ’ ಎಂದು ಗ್ರಾಮಸ್ಥರೊಬ್ಬರು ಹೇಳಿದರು. ಹೆದ್ದಾರಿಯ ಇಕ್ಕೆಲಗಳಲ್ಲಿ ವಾಹನಗಳು ಜಮಾವಣೆಗೊಂಡಿದ್ದು, ವಾಹನಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿರುವ ಕಾರಣ ರಸ್ತೆಯನ್ನು ತೆರವುಗೊಳಿಸುವಂತೆ ಪೊಲೀಸರು ಗ್ರಾಮಸ್ಥರಿಗೆ ಮನವಿ ಮಾಡಿದರು.