ಶಿವಪುರಾಣದ ರುದ್ರಸಂಹಿತೆಯ ಪ್ರಕಾರ, ಮಹಾಶಿವರಾತ್ರಿ, ಶ್ರಾವಣ ಸೋಮವಾರ, ಶಿವರಾತ್ರಿಯಂದು ರುದ್ರಾಭಿಷೇಕವನ್ನು ಮಾಡಿದರೆ, ಅದು ವಿಶೇಷವಾಗಿ ಫಲಪ್ರದವಾಗಿದೆ ಎಂದು ಹೇಳಲಾಗಿದೆ. ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಅದು ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿಯೇ ಬರುತ್ತದೆ. ಶಿವರಾತ್ರಿಯನ್ನು ಯಾಕೆ ಆಚರಿಸಲಾಗುತ್ತದೆ ಅಥವಾ ಯಾವ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ ಎಂಬಿತ್ಯಾದಿಗಳ ಬಗ್ಗೆ ಸಾಕಷ್ಟು ಪುರಾಣ ನಂಬಿಕೆಗಳಿವೆ. ರುದ್ರಾಭಿಷೇಕದ ಸಮಯದಲ್ಲಿ ಶಿವಲಿಂಗಕ್ಕೆ ಪವಿತ್ರ ಅಭಿಷೇಕವನ್ನು ಮಾಡಲಾಗುತ್ತದೆ ಮತ್ತು ಇದನ್ನು ಸನಾತನ ಧರ್ಮದ ಅತ್ಯಂತ ಪ್ರಭಾವಶಾಲಿ ಪೂಜೆ ಎಂದು ಪರಿಗಣಿಸಲಾಗಿದೆ.ಶಿವ ಮೊಟ್ಟಮೊದಲ ಬಾರಿಗೆ ತಾಂಡವ ನೃತ್ಯವನ್ನು ಮಾಡಿದ ದಿನವನ್ನೇ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎನ್ನಲಾಗಿದೆ. ಇನ್ನು ಒಂದು ಕಥೆಯು ಹೇಳುವಂತೆ, ಮಹಾಶಿವನು ಮೊದಲ ಬಾರಿಗೆ ಲಿಂಗಾವತಾರದಲ್ಲಿ ಕುಳಿತ ದಿನವನ್ನೇ ಮಹಾಶಿವರಾತ್ರಿಯಾಗಿ ಆಚರಿಸಿ ಆ ದಿನ ಶಿವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ರುದ್ರಾಭಿಷೇಕವನ್ನು ನೀವು ಮನೆಯಲ್ಲಿಯೇ ಮಾಡಬಹುದು, ರುದ್ರಾಭಿಷೇಕಕ್ಕೆ ಬೇಕಾದ ಅವಶ್ಯಕ ಸಾಮಗ್ರಿಗಳೇನು .
ಮರದಿಂದ ಮಾಡಿದ ಪುಟ್ಟ ಚೌಕಿ, ಚೌಕಿಯ ಮೇಲೆ ಹಾಸಲು ಹೊಸ ಶಾಲು, ಶಿವ ಲಿಂಗ, ಎಕ್ಕೆ ಹೂವು, ಕರವೀರ, ಕೋಟೆ ಹೂವು, ಬಿಳಿ ಬಣ್ಣದ ಹೂಗಳು, ಗುಲಾಬಿ ಹೂವು, ಬಿಲ್ವ ಪತ್ರೆ, ವೀಳ್ಯದೆಲೆ, ಅಡಿಕೆ, ಏಲಕ್ಕಿ ಹಾಗೂ ಲವಂಗ, ದೂಪ/ ಅಗರಬತ್ತಿ, ದೂರ್ವೆ, ಬೆಂಕಿಪೊಟ್ಟಣ, ಎಣ್ಣೆ ಇಲ್ಲವೇ ತುಪ್ಪದ ದೀಪ, ಶುಭ್ರ ಹತ್ತಿ ಬಟ್ಟೆ, ಆರತಿ, ವಿಭೂತಿ, ಚಂದನ / ಗಂಧ, ಜನಿವಾರ, ಅಕ್ಷತೆ, ನೈವೇದ್ಯಕ್ಕೆ ಡ್ರೈ ಫ್ರೂಟ್ ಇಲ್ಲವೇ ಹಣ್ಣುಗಳು, ಹಾಲು, ಬಾಳೆಹಣ್ಣು, ಪಂಚಾಮೃತ, ಜಲಾಧರ ಪಾತ್ರೆ, ತೆಂಗಿನಕಾಯಿ, ಬಿಳಿ ಬಣ್ಣದ ಬಟ್ಟೆ, ತೀರ್ಥದ ಗಿಂಡಿ, ನೀರು, ಗಂಗಾಜಲ, ಕಂಚಿನ ತಟ್ಟೆ, ಗಂಟೆ.
ರುದ್ರಾಭಿಷೇಕ ಪೂಜಾ ವಿಧಿಗಳೇನು?
* ರುದ್ರಾಭಿಷೇಕ ಪೂಜೆಯಲ್ಲಿ ಶಿವ, ಪಾರ್ವತಿ ಹಾಗೂ ಇತರೆ ದೇವತೆಗಳು, ನವಗ್ರಹಗಳಿಗೆ ಆಸನವನ್ನು ಸಿದ್ಧಪಡಿಸಬೇಕು.
* ಗಣೇಶನ ಪೂಜೆಯೊಂದಿಗೆ ಪೂಜೆಯನ್ನು ಪ್ರಾರಂಭಿಸಬೇಕು.
* ನಂತರ ಸಂಕಲ್ಪ ಕೈಗೊಳ್ಳಿ
* ಶಿವಲಿಂಗವನ್ನು ಬಲಿಪೀಠದ ಮೇಲೆ ಇರಿಸಬೇಕು.
* ಅಭಿಷೇಕ ಮಾಡಿದ ನೀರು, ಹಾಲು ಮುಂತಾದ ಸಾಮಗ್ರಿ ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು.
* ಅಭಿಷೇಕದ ಬಳಿಕ ಶಿವಲಿಂಗಕ್ಕೆ ಅಲಂಕಾರ ಮಾಡಿ, ಪೂಜೆಯನ್ನು ಮಾಡಿ ಆರತಿ ಮಾಡಬೇಕು.
* ಶಿವಲಿಂಗ ಅಭಿಷೇಕಕ್ಕೆ ಬಳಸಿದ ನೀರನ್ನು ಮನೆಯ ಮೇಲೆ, ಮನೆಯವರ ಮೇಲೆ ಸಿಂಪಡಿಸಿ
* ಈ ಪೂಜೆ ಮಾಡುವಾಗ ಓಂ ನಮಃ ಶಿವಾಯ ಎಂದು ಜಪಿಸುತ್ತಲೇ ಇರಿ.
ರುದ್ರಾಭಿಷೇಕ ಪೂಜೆಯ ವಿಧಗಳು.
* ಜೇನು ತುಪ್ಪದ ಅಭಿಷೇಕ: ಜೀವನದಲ್ಲಿ ನೆಮ್ಮದಿ, ಸಂತೋಷ ಸಿಗಲಿದೆ
* ಪಂಚಾಮೃತದ ಅಭಿಷೇಕ: ಸಂಪತ್ತು, ಸಮೃದ್ಧಿ ಹೆಚ್ಚುವುದು
* ಜಲ ಅಭಿಷೇಕ: ಜಲಾಭಿಷೇಕ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು.
* ಹಾಲಿನ ಅಭಿಷೇಕ: ದೀರ್ಘಾಯುಷ್ಯ ಸಿಗುವುದು
* ಮೊಸರಿನ ಅಭಿಷೇಕ: ಸಂತಾನಭಾಗ್ಯ ದೊರೆಯುವುದು
* ತುಪ್ಪದ ಅಭಿಷೇಕ: ಒಳ್ಳೆಯ ಆರೋಗ್ಯ ಸಿಗುವುದು