ಬೆಂಗಳೂರು, ಫೆ. 16 : ಗುತ್ತಿಗೆದಾರನಿಂದ 25 ಸಾವಿರ ಲಂಚ ಪಡೆಯುವಾಗ ಗ್ರಾಮ ಪಂಚಾಯಿತಿ ಪಿಡಿಒ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಪಿಡಿಒ ಉಷಾ ಲಂಚ ಸ್ವೀಕರಿಸಿದ ಅಧಿಕಾರಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ಡ್ರೈನ್ ಕಾಮಗಾರಿಗೆ ಬಿಲ್ ಮಂಜೂರು ಮಾಡಲು ಲಂಚ ಉಷಾ ಲಂಕ ಸ್ವೀಕರಿಸಿದ್ದಾರೆ. ಉಷಾ ಜೊತೆಗೆ ಬಿಲ್ ಕಲೆಕ್ಟರ್ ಪುಟ್ಟಸ್ವಾಮಿ ಕೂಡ ಭಾಗಿಯಾಗಿದ್ದು ಲೋಕಾಯುಕ್ತ ಅಧಿಕಾರಿಗಳು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಗುತ್ತಿಗೆದಾರರಾದ ಗಿರೀಶ್ ಕೃಷ್ಣಪ್ಪರವರು ಟಿ- ಬೇಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಿ.ಸಿ. ಡ್ರೈನ್ ಕಾಮಗಾರಿಯನ್ನು ನಿರ್ವಹಿಸಿದ್ದಾರೆ. ಕಾಮಗಾರಿಯ ಬಿಲ್ ಮಂಜೂರು ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕಿನ ಬಿ-ಬೇಗೂರು ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಷಾ ಹಾಗೂ ಟಿ-ಬೇಗೂರು ಗ್ರಾಮ ಪಂಚಾಯತಿಯಲ್ಲಿ ಆಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪುಟ್ಟಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಆಗ ಇವರಿಬ್ಬರೂ ಗುತ್ತಿಗೆದಾರನಿಂದ ರೂ.25,000/-ಗಳ ಲಂಚದ ಹಣಕ್ಕೆ ಒತ್ತಾಯಿಸಿದ್ದಾರೆ.
ಲಂಚ ಸ್ವೀಕರಿಸುವಾಗ ಇಬ್ಬರನ್ನೂ ಟ್ರ್ಯಾಪ್ ಮಾಡಲಾಗಿದ್ದು, ದಸ್ತಗಿರಿ ಮಾಡಿ ತನಿಖೆ ಮುಂದುವರೆಸಲಾಗಿದೆ. ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ. ಪಾಟೀಲ್ ಅವರ ಸೂಚನೆಯಂತೆ ಶ್ರೀಯುತ, ಪ್ರಶಾಂತ್ ಕುಮಾರ್ ಠಾಕೂರ್, ಐಪಿಎಸ್. ಅಪರ ಪೊಲೀಸ್ ಮಹಾನಿರ್ದೇಶಕರು ಹಾಗೂ ಶ್ರೀ. ಜೋಷಿ ಶ್ರೀನಾಥ್ ಮಹದೇವ್, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆರವರ ಮಾರ್ಗದರ್ಶನದಲ್ಲಿ, ಶ್ರೀ. ಎಂ. ಶ್ರೀನಿವಾಸ್, ಪೊಲೀಸ್ ನಿರೀಕ್ಷಕರವರ ನೇತೃತ್ವದ ತಂಡ ಟ್ರ್ಯಾಪ್ ಪ್ರಕ್ರಿಯೆಯನ್ನು ಜರುಗಿಸಿ, ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.