ಬೆಂಗಳೂರು, ಫೆ. 01 : 2023-24ನೇ ಸಾಲಿನ ಕೇಂದ್ರ ಆಯವ್ಯವವನ್ನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಸಪ್ತ ಸೂತ್ರವನ್ನು ಅಳವಡಿಸಲಾಗಿದೆ. ಸಮಗ್ರ ಅಭಿವೃದ್ಧಿ, ಹಸಿರು ಕ್ರಾಂತಿ, ಮೂಲ ಸೌಕರ್ಯ, ಯುವ ಸಬಲೀಕರಣ, ಮಹಿಳಾ ಸಬಲೀಕರಣ, ಕೃಷಿಯಲ್ಲಿ ಸಾರ್ಟ್ ಅಪ್, ದೇಶದ ಸಾಮರ್ಥ್ಯ ಅನಾವರಣ. ವಿತ್ತ ಸಚಿವೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಗೆ ಮತ್ತೊಮ್ಮೆ ಒತ್ತು ನೀಡಿದ್ದಾರೆ. ದೇಶದ ಪ್ರಗತಿಯ ಹಣ್ಣುಗಳು ದೇಶದ ಎಲ್ಲಾ ವರ್ಗದವರಿಗೂ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ. ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಮಹಿಳೆಯರು, ವಿದ್ಯಾರ್ಥಿಗಳು, ಕೃಷಿ, ಓಬಿಸಿ, ಎಸ್ ಸಿ-ಎಸ್ಟಿ ಕಮ್ಯೂನಿಟಿ ಹಾಗೂ ದಿವ್ಯಾಂಗರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಅನ್ನು ತಯಾರಿಸಲಾಗಿದೆ. ಇದು ಅಮೃತಕಾಲದ ಮೊದಲ ಬಜೆಟ್ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. 7 ಆದ್ಯತಾ ಪಟ್ಟಿಯನ್ನು ವಿವರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೃಷಿಗೆ ಮೊದಲ ಆದ್ಯತೆಯನ್ನು ನೀಡಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಎಲ್ಲರನ್ನು ಒಳಗೊಂಡ ಸಮಗ್ರ ಬೆಳವಣಿಗೆಗೆ ಒತ್ತು ನೀಡಲಾಗಿದೆ. ರೈತರು, ಮಹಿಳೆಯರು, ಎಸ್ಸಿ/ ಎಸ್ಟಿ, ದಿವ್ಯಾಂಗರು, ಹಿಂದುಳಿದವರು ಸೇರಿ ವಂಚಿತರಿಗೆ ಮೊದಲ ಆದ್ಯತೆ ನೀಡಲಾಗಿದೆ.
ಕೃಷಿ ಕ್ಷೇತ್ರದಲ್ಲೂ ಡಿಜಿಟಲ್ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ರೈತರಿಗೆ ಬೆಳೆ ಯೋಜನೆಗೆ ಸೂಕ್ತ ಮಾಹಿತಿಯನ್ನು ನೀಡಲು ಮುಂದಾಗಿದೆ. ಸಾಲ ಸೌಲಭ್ಯವನ್ನು ಕೂಡ ಡಿಜಿಟಲೀಕರಣ ಮಾಡಲಿದೆ. ಕೃಷಿ ಆಧಾರಿತ ತಂತ್ರಜ್ಞಾನ ಸಂಸ್ಥೆಗಳಿಗೆ ವಿಶೇಷ ಸಹಕಾರಕ್ಕೆ ಸರ್ಕಾರ ಮುಂದಾಗಿದೆ. ಕೃಷಿ ಆಧಾರಿತ ಸಾರ್ಟ್ ಅಪ್ ಗಳಿಗೆ ಪ್ರತ್ಯೇಕ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ರೈತರಿಗೆ ಸಮಸ್ಯೆ ಪರಿಹರಿಸಲು ಕೆಲಸ ಮಾಡುವ ಸಾರ್ಟ್ ಅಪ್ ಗಳಿಗೆ ನೆರವು ಸಿಗಲಿದೆ. ಹಸಿರು ಅಭಿವೃದ್ಧಿಗೆ ಅತಿಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ.
ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉದ್ಯೋಗಾವಕಾಶವನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ. ಜೊತೆಗೆ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕುಶಲಕರ್ಮಿಗಳಿಗೆ ಬಜೆಟ್ ನಲ್ಲಿ ಮಣೆ ಹಾಕಿದ್ದು, ದೊಡ್ಡ ಗಾತ್ರದ ಉತ್ಪಾದನಾ ಸಂಸ್ಥೆಗಳನ್ನು ಹುಟ್ಟುಹಾಕಲಾಗುತ್ತಿದೆ. ಕುಶಲ ಕರ್ಮಿಗಳಿಗಾಗಿ ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಯೋಜನೆ ಜಾರಿಗೊಳಿಸಲಾಗಿದೆ. ಕುಶಲಕರ್ಮಿಗಳಿಗಾಗಿ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಲಾಯ್ತು.
ಮೂಲಸೌಕರ್ಯ ಕ್ಷೇತ್ರದಲ್ಲಿ ದಾಖಲೆಯ ಹೂಡಿಕೆ ಮಾಡಲಾಗಿದೆ. ಭಾರತದ ಇತಿಹಾಸದಲ್ಲಿಯೇ ಅತೀದೊಡ್ಡ ಹೂಡಿಕೆ ಇದಾಗಿದ್ದು, 10 ಲಕ್ಷ ಕೋಟಿ ಮೂಲ ಬಂಡವಾಳ ಹೂಡಿಕೆ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ ಸಾಲ ಸೌಲಭ್ಯ ಇನ್ನೊಂದು ವರ್ಷ ಮುಂದುವರಿಸಲಾಗಿದೆ. ಖಾಸಗಿ ಹೂಡಿಕೆಗೆ ನೆರವು ನೀಡಲು ಅಗತ್ಯ ಅನುದಾನವನ್ನು ನೀಡಲಾಗಿದೆ. ಇದು ಕಳೆದ 20 ವರ್ಷಗಳಲ್ಲಿಯೆ ಅತ್ಯಧಿಕ ಆರ್ಥಿಕ ನೆರವನ್ನು ಘೋಷಿಸಲಾಗಿದೆ.