Investment : ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಹಣವನ್ನು ಉಳಿಸಲು ಬಯಸುತ್ತಾರೆ. ಹಣವನ್ನು ಉಳಿಸಲು ಸಾಕಷ್ಟು ಯೋಜನೆಗಳಿವೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಮರುಕಳಿಸುವ ಠೇವಣಿ ಅಂದರೆ ಆರ್‌ಡಿ ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಆರ್‌ಡಿಯಲ್ಲಿ ಉತ್ತಮ ಬಡ್ಡಿ ಲಭ್ಯವಿರುವುದರ ಜೊತೆಗೆ ನಮ್ಮ ಹಣಕ್ಕೂ ಗ್ಯಾರಂಟಿ ಇರುತ್ತದೆ. ನಾವು ಹೂಡಿಕೆ ಮಾಡುವ ವಿಚಾರಕ್ಕೆ ಬಂದಾಗ ಯಾವಾಗಲೂ ಕೂಡಾ ಸುರಕ್ಷತೆಯನ್ನು ನೋಡಿಕೊಳ್ಳುತ್ತೇವೆ. ಹೆಚ್ಚಾಗಿ ನಾವು ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಹಾಗೂ ರಿಕ್ಯೂರಿಂಗ್ ಡೆಪಾಸಿಟ್ (ಆರ್‌ಡಿ) ಅಲ್ಲಿ ಹೂಡಿಕೆ ಮಾಡುವುದು ಸೂಕ್ತ ಹಾಗೂ ಸುರಕ್ಷಿತ ಎಂದು ನಂಬಿದ್ದೇವೆ.
ಆರ್‌ಡಿಯಲ್ಲಿ ಖಾತೆದಾರರು ನಿಶ್ಚಿತ ಕಂತುಗಳಲ್ಲಿ ಹಣವನ್ನು ಠೇವಣಿ ಮಾಡಬೇಕು ಮತ್ತು ಮುಕ್ತಾಯದ ನಂತರ ನಿಮ್ಮ ಹಣದ ಜೊತೆಗೆ ಬಡ್ಡಿಯ ಲಾಭವನ್ನು ಪಡೆಯಬಹುದು. ಆದರೆ, ಆರ್‌ಡಿ ಖಾತೆಯಲ್ಲಿ ಒಮ್ಮೆ ನಿಗದಿಪಡಿಸಿದ ಕಂತು ಮೊತ್ತವನ್ನು ಬದಲಾಯಿಸಲಾಗುವುದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ಮರುಕಳಿಸುವ ಠೇವಣಿ ಮೇಲೆ ವಿವಿಧ ಬ್ಯಾಂಕ್‌ಗಳು ಶೇ.2.50ರಿಂದ ಶೇ.8.50ರವರೆಗಿನ ಬಯನ್ನು ಒದಗಿಸುತ್ತವೆ.
ಅಂಚೆ ಕಚೇರಿ ಆರ್‌ಡಿ ಎಂದರೇನು?
ಅಂಚೆ ಕಚೇರಿಯು ಒಟ್ಟು 9 ಸರ್ಕಾರದ ಯೋಜನೆಯನ್ನು ಹೊಂದಿದೆ. ಅದರಲ್ಲಿ ಅಂಚೆ ಕಚೇರಿ ಉಳಿತಾಯ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯೇ ಅಂಚೆ ಕಚೇರಿಯ ಆರ್‌ಡಿ ಯೋಜನೆಯಾಗಿದೆ. ಈ ಯೋಜನೆಯು ಮಧ್ಯಮ ಅವಧಿಯ ಉಳಿತಾಯ ಯೋಜನೆಯಾಗಿದೆ. ಹೂಡಿಕೆದಾರರು ಈ ಯೋಜನೆಯಲ್ಲಿ ತಮ್ಮ ಹೂಡಿಕೆಯನ್ನು ಕನಿಷ್ಠ 5 ವರ್ಷಗಳ ಇರಿಸಬೇಕಾಗುತ್ತದೆ. ಅಂದರೆ ಹೂಡಿಕೆ ಅವಧಿ ಕನಿಷ್ಠ 5 ವರ್ಷವಾಗಿದೆ.
ಅಂಚೆ ಕಚೇರಿ ಆರ್‌ಡಿಯ ಪ್ರಮುಖ ಮಾಹಿತಿ
* ಅಂಚೆ ಕಚೇರಿ ಆರ್‌ಡಿಯಲ್ಲಿ ಮಾಸಿಕವಾಗಿ ನಿರ್ದಿಷ್ಟ ಮೊತ್ತವನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಬೇಕು.
* ನೀವು ಮಾಸಿಕವಾಗಿ ಆರ್‌ಡಿಯನ್ನು ಜಮೆ ಮಾಡದಿದ್ದರೆ ಪ್ರತಿ 100 ರೂಪಾಯಿಯ ಶೇಕಡ 1ರಷ್ಟು ಮೊತ್ತವನ್ನು ದಂಡವಾಗಿ ಪಾವತಿ ಮಾಡಬೇಕಾಗುತ್ತದೆ.
* ಸಣ್ಣ ಮೊತ್ತದ ಹೂಡಿಕೆ ಮಾಡಲು ಬಯಸುವವರಿಗೂ ಕೂಡಾ ಅಂಚೆ ಕಚೇರಿ ಯೋಜನೆ ಸಹಾಯಕ. 100 ರೂಪಾಯಿ ಕೂಡಾ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಯ ಮಿತಿ ಇಲ್ಲ.
*ಅಪ್ರಾಪ್ತರ ಹೆಸರಲ್ಲಿ ಕೂಡಾ ಆರ್‌ಡಿಯನ್ನು ತೆರೆಯಬಹುದು. ಒಂದಕ್ಕಿಂತ ಅಧಿಕ ಆರ್‌ಡಿ ಖಾತೆಯನ್ನು ಕೂಡಾ ತೆರೆಯಬಹುದು.
ಬ್ಯಾಂಕ್ ಆರ್‌ಡಿ ಎಂದರೇನು?
ರಿಕ್ಯೂರಿಂಗ್ ಡೆಪಾಸಿಟ್ ಅನ್ನು ಆರ್‌ಡಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿರುವ ಬ್ಯಾಂಕ್‌ಗಳು ಹೊಂದಿರುವ ವಿಶಿಷ್ಠ ಟರ್ಮ್ ಡೆಪಾಸಿಟ್ ಇದಾಗಿದೆ. ಜನರು ಮಾಸಿಕವಾಗಿ ಹೂಡಿಕೆ ಮಾಡಿ ಉಳಿತಾಯ ಮಾಡಲು ಇದು ಸಹಾಯಕವಾಗಿದೆ.
*ಕನಿಷ್ಠ ಡೆಪಾಸಿಟ್ ಅವಧಿ ಆರು ತಿಂಗಳುಗಳು ಆಗಿದೆ. ಹಾಗೆಯೇ ಗರಿಷ್ಠ ಡೆಪಾಸಿಟ್ ಅವಧಿ 10 ವರ್ಷಗಳು ಆಗಿದೆ.
* ಫಿಕ್ಸಿಡ್ ಡೆಪಾಸಿಟ್‌ಗೆ ಎಷ್ಟು ಬಡ್ಡಿದರ ನೀಡಲಾಗುತ್ತದೆಯೋ ಅಷ್ಟೇ ಬಡ್ಡಿದರ ಆರ್‌ಡಿಗೂ ಇರುತ್ತದೆ. ಬೇರೆ ಎಲ್ಲ ಉಳಿತಾಯ ಯೋಜನೆಗಿಂತ ಅಧಿಕ ಬಡ್ಡಿದರ ಇದಕ್ಕೆ ಇರುತ್ತದೆ.
* ಡೆಪಾಸಿಟ್ ಮೇಲೆ ಸಾಲವನ್ನು ಪಡೆಯುವ ಆಯ್ಕೆಯೂ ಕೂಡಾ ಇದೆ.
* ಅಂಚೆ ಕಚೇರಿ ಆರ್‌ಡಿ ಅವಧಿ 5 ವರ್ಷಗಳು ಆಗಿದೆ. ಆದರೆ ಬ್ಯಾಂಕ್‌ನಲ್ಲಿ ಒಂದು ವರ್ಷದಿಂದ 10 ವರ್ಷದವರೆಗೆ ಅವಧಿ ಇದೆ.
* ಅಂಚೆ ಕಚೇರಿ ಆರ್‌ಡಿ ಮೇಲಿನ ಬಡ್ಡಿದರವನ್ನು ತ್ರೈಮಾಸಿಕವಾಗಿ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ ಬ್ಯಾಂಕುಗಳು ಪದೇ ಪದೇ ಆರ್‌ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡುವುದಿಲ್ಲ.
* ಬ್ಯಾಂಕಿನಲ್ಲಿ ನೀವು ಆರ್‌ಡಿ ಅವಧಿಯನ್ನು ನಿಮಗೆ ಬೇಕಾದಂತೆ ವಿಸ್ತರಣೆ ಮಾಡಿಕೊಳ್ಳಬಹುದು. ಆದರೆ ಅಂಚೆ ಕಚೇರಿ ಆರ್‌ಡಿ ಅವಧಿ ನಿರ್ದಿಷ್ಟ 5 ವರ್ಷಗಳು ಮಾತ್ರವಾಗಿದೆ. ವಿಸ್ತರಣೆಯ ಅವಕಾಶವಿಲ್ಲ.