ಬೆಂಗಳೂರು, ಜ. 03 : ಅಂಚೆ ಕಚೇರಿಯಲ್ಲಿ ಲಕ್ಷಾಂತರ ಜನರು ಉಳಿತಾಯ ಖಾತೆಗಳನ್ನು ಹೊಂದಿದ್ದಾರೆ. ಅಂಛೇರಿಯಲ್ಲಿ ವಿವಿಧ ಯೋಜನೆಗಳ ಪ್ರಯೋಜನವನ್ನು ಗ್ರಾಹಕರು ಪಡೆಯುತ್ತಿದ್ದಾರೆ. ಅಂಚೆ ಕಚೇರಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಹೊಸ ವರ್ಷದ ಗಿಫ್ಟ್ ನೀಡಿದೆ. ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹಣ ಉಳಿತಾಯ ಮಾಡಲು ಇದು ಸಹಾಯಕಾರಿಯಾಗಿದೆ. ಕೇಂದ್ರ ಸರ್ಕಾರದ ಗಿಫ್ಟ್ ಯಾವ ಯಾವ ಯೋಜನೆಗಳಿಗೆ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಅದು ಯಾವ ಯಾವ ಯೋಜನೆಗಳು, ಎಷ್ಟು ಬಡ್ಡಿದರ ಹೆಚ್ಚಳವಾಗಿದೆ ಎಂದು ತಿಳಿಯೋಣ ಬನ್ನಿ.
ಟರ್ಮ್ ಡೆಪಾಸಿಟ್ ಗೆ ಕೇಂದ್ರ ಸರ್ಕಾರ ಬಡ್ಡಿದರವನ್ನು ಹೆಚ್ಚಿಗೆ ಮಾಡಿದೆ. ಈ ಹಿಂದೆ ಒಂದು ವರ್ಷ ಅವಧಿಯ ಟರ್ಮ್ ಡೆಪಾಸಿಟ್ ಮೇಲೆ ಶೇ.5.50 ರಷ್ಟಿತ್ತು. ಇದೀಗ ಇದನ್ನು ಶೇ.6.6 ರಷ್ಟು ಹೆಚ್ಚಳ ಮಾಡಿದೆ. ಇದರೊಂದಿಗೆ ಎರಡು ವರ್ಷ ಅವಧಿಯ ಟರ್ಮ್ ಡೆಪಾಸಿಟ್ ಗೆ ಶೇ.5.70 ರಷ್ಟು ಬಡ್ಡಿದರವಿತ್ತು. ಇದೀಗ ಇದು ಶೇ.6.8ಕ್ಕೆ ಹೆಚ್ಚಳವಾಗಿದೆ. ಇನ್ನು ಮೂರು ವರ್ಷ ಅವಧಿಗೆ ಶೇ.5.80ರಿಂದ ಶೇ.6.9ಕ್ಕೆ ಹೆಚ್ಚಳವಾಗಿದ್ದು, ಐದು ವರ್ಷ ಅವಧಿಯ ಟರ್ಮ್ ಡೆಪಾಸಿಟ್ ಗೆ ಶೇ.6.70ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದೆ.
ರಾಷ್ಟ್ರೀಯ ಉಳಿತಾಯ ಯೋಜನೆಗೂ ಕೇಂದ್ರ ಸರ್ಕಾರ ಬಡ್ಡಿದರವನ್ನು ಹೆಚ್ಚಳ ಮಾಡಿದೆ. NSC ಯೋಜನೆಯ ಬಡ್ಡಿದರ ಶೇ.6.80 ರಷ್ಟು ಇತ್ತು. ಇದನ್ನು ಶೇ.7ಕ್ಕೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ನೀಡಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರವನ್ನು ಹೆಚ್ಚಿಸಿದ್ದು ಶೇ.7.6 ಇದ್ದದ್ದನ್ನು ಶೇ.8 ರಷ್ಟು ಹೆಚ್ಚಳ ಮಾಡಿದೆ. ಇನ್ನು ತಿಂಗಳ ಆದಾಯ ಯೋಜನೆ ಬಡ್ಡಿದರವೂ ಏರಿಕೆಯಾಗಿದೆ. ಈ ಹಿಂದೆ 6.70 ರಷ್ಟಿತ್ತು. ಇದೀಗ ಜನವರಿ 1ರಿಂದ ಶೇ.7.1ರಷ್ಟು ಏರಿಕೆಯಾಗಿದೆ. ಈನ್ನು 123 ತಿಂಗಳ ಅವಧಿಯ ಕಿಸಾನ್ ವಿಕಾಸ್ ಪತ್ರದ ಬಡ್ಡಿದರ ಹೆಚ್ಚಳವಾಗಿದೆ. ಶೇ.7ರಿಂದ ಶೇ.7.2ಕ್ಕೆ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ.
ಇನ್ನು ಕೆಲ ಯೋಜನೆಗಳ ಬಡ್ಡಿದರವನ್ನು ಹಳೆಯದನ್ನೇ ಮುಂದುವರಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಶೇ.7.6ರಷ್ಟಿದ್ದು, ಇದನ್ನೇ ಮುಂದುವರಿಸಲಾಗಿದೆ. ಅಂಚೆ ಕಚೇರಿ ಉಳಿತಾಯ ಖಾತೆ ಬಡ್ಡಿದರವೂ ಶೇ.4ರಷ್ಟಿದ್ದು, ಮುಂದುವರಿದಿದೆ. ಅಂಚೆ ಕಚೇರಿ ರಿಕರಿಂಗ್ ಡೆಫಾಸಿಟ್ ಬಡ್ಡಿದರದಲ್ಲೂ ಯಾವುದೇ ವ್ಯತ್ಯಾಸವಿಲ್ಲ. ಶೇ.5.8ರಷ್ಟು ಬಡ್ಡಿದರವಿದ್ದು, ಅದನ್ನೇ ಮುಂದುವರಿಸಲಾಗಿದೆ. ಕಳೆದ ಎರಡು ವರ್ಷದಿಂದ ಕೇಂದ್ರ ಸರ್ಕಾರ ಬಡ್ಡಿದರವನ್ನು ಹೆಚ್ಚಳ ಮಾಡಿರಲಿಲ್ಲ. ಅದನ್ನೇ ಮುಂದುವರಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಕೆಲ ಯೋಜನೆಗಳ ಬಡ್ಡಿದರವನ್ನು ಹೊಸ ವರ್ಷಕ್ಕೆ ಹೆಚ್ಚಳ ಮಾಡಿದೆ.
ಇದರೊಂದಿಗೆ ಪಿಪಿಎಫ್ ಯೋಜನೆಯ ಬಡ್ಡಿದರವನ್ನು ಕೂಡ ಹಳೆಯದನ್ನೇ ಮುಂದುವರಿಸಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಳಿತಾಯ ಮಾಡಲಿ ಎಂದು ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈ ಬಡ್ಡಿದರ ಜನವರಿ 1ರಿಂದ ಜಾರಿಗೆ ಬಂದಿದ್ದು, ಮಾರ್ಚ್ 31ರ ವರೆಗೂ ಮುಂದುವರೆಯಲಿದೆ. ಗ್ರಾಹಕರು ಕೇಂದ್ರ ಸರ್ಕಾರ ನೀಡಿರುವ ಉಡುಗೊರೆಯನ್ನು ಪಡೆದು ಎಂಜಾಯ್ ಮಾಡಬಹುದಾಗಿದೆ.
ಸಣ್ಣ ಉಳಿತಾಯ ಯೋಜನೆಗಳು vs ಬ್ಯಾಂಕ್ ಎಫ್ ಡಿ
ಭಾರತೀಯ ರಿಸರ್ವ್ ಬ್ಯಾಂಕ್ (RBI) 2022ನೇ ಸಾಲಿನಲ್ಲಿ ಒಟ್ಟು ಐದು ಬಾರಿ ರೆಪೋ ದರ ಹೆಚ್ಚಳ ಮಾಡಿದೆ. ಇದ್ರಿಂದ ಈ ವರ್ಷ ರೆಪೋ ದರ ಒಟ್ಟು 225 ಬೇಸಿಸ್ ಪಾಯಿಂಟ್ಸ್ ಹೆಚ್ಚಳಗೊಂಡು ಶೇ.4.40 ರಿಂದ ಶೇ. 6.25ಕ್ಕೆ ಏರಿಕೆಯಾಗಿದೆ. ಹೀಗಾಗಿ ಬಹುತೇಕ ಬ್ಯಾಂಕ್ ಗಳು ಸಾಲ ಹಾಗೂ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಕೆಲವು ಸಣ್ಣ ಹಣಕಾಸು ಬ್ಯಾಂಕ್ ಗಳು ಠೇವಣಿಗಳ ಮೇಲೆ ವಾರ್ಷಿಕ ಶೇ.8.25-8.5 ಬಡ್ಡಿ ನೀಡುತ್ತಿವೆ. ಇನ್ನು ಪ್ರಮುಖ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳು 10 ದಿನಗಳಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ.3ರಿಂದ ಹಿಡಿದು ಶೇ.7.5 ಬಡ್ಡಿ ನೀಡುತ್ತಿವೆ. ಇನ್ನು ಹಿರಿಯ ನಾಗರಿಕರ ಠೇವಣಿಗಳ ಮೇಲೆ ಶೇ.8ರ ತನಕ ಬಡ್ಡಿ ನೀಡುತ್ತಿವೆ.