22 C
Bengaluru
Monday, December 23, 2024

ರಾಜ್ಯ ಸರ್ಕಾರಿ ನೌಕರರ ಸೇವಾ ನಿಯಮಗಳಿಗೆ ತಿದ್ದುಪಡಿ: ಅಮಾನತು ಅವಧಿ ಅರು ತಿಂಗಳ ಬಳಿಕ ಇನ್ಮುಂದೆ ತಾನಾಗಿ ತೆರವು ಆಗುತ್ತೆ!

ಬೆಂಗಳೂರು,ಡಿ. 08: ಸರ್ಕಾರಿ ನೌಕರರ ಅಮಾನತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಪ್ರಕಟಿಸಿದೆ. ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರರನ್ನು ಅನಗತ್ಯವಾಗಿ ದೀರ್ಘಾವಧಿ ವರೆಗೆ ಅಮಾನತಿನಲ್ಲಿಟ್ಟು ಕಿರುಕುಳ ನೀಡುವುದನ್ನು ತಪ್ಪಿಸಲು ನಾಗರಿಕ ಸೇವಾ ನಿಯಮಗಳಿಗೆ ಸರ್ಕಾರ ತಿದ್ದುಪಡಿ ಮಾಡಿದೆ. ಇನ್ಮುಂದೆ ಅರು ತಿಂಗಳಿಗೆ ಮೀರದಂತೆ ಸರ್ಕಾರಿ ನೌಕರನ ಅಮಾನತು ತಾನಾಗಿ ತೆರವಾಗಲಿದೆ.

ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರರನ್ನು ಅನಗತ್ಯವಾಗಿ ದೀರ್ಘಾವಧಿ ವರೆಗೆ ಅಮಾನತಿನಲ್ಲಿ ಇಡುವ ಕಾರಣದಿಂದ ಸರ್ಕಾರಕ್ಕೆ ಅರ್ಥಿಕ ಹೊರೆ ಉಂಟಾಗುತ್ತದೆ. ಅಂದರೆ ಕೆಲಸ ಮಾಡಿದ್ದರೂ ನೌಕರರಿಗೆ ಅರ್ಧ ವೇತನವನ್ನು ಸರ್ಕಾರ ಪಾವತಿಸಬೇಕು. ಜತೆಗೆ ಸರ್ಕಾರಿ ನೌಕರರುಕೂಡ ಮಾನಸಿಕವಾಗಿ ಕಿರುಕುಳ ಅನಭವಿಸುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಕರ್ನಾಟಕ ನಾಗರಿಕ ಸೇವಾ ನಿಯಮ ( ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10 ಕ್ಕೆ ಕೆಲವು ತಿದ್ದುಪಡಿ ಮಾಡಿ ಸಿಬ್ಬಂದಿ ಆಡಳಿತ ಮತ್ತು ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಅದರಂತೆ ಈ ಹಿಂದೆ ಅಸ್ತಿತ್ವದಲ್ಲಿದ್ದ ಅಮಾನತು ನಿಯಮಗಳು ಬದಲಾಗಿವೆ. ಅದರ ಪ್ರಕಾರ ಯಾವುದೇ ಸರ್ಕಾರಿ ನೌಕರ, ಅಧಿಕಾರಿ ಅಮಾನತುಗೊಂಡ ಆರು ತಿಂಗಳ ಅವಧಿಯೊಳಗೆ ಅಪಾದಿತ ನೌಕರನ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸದಿದ್ದರೆ ಅಥವಾ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸದಿದ್ದರೆ, ಅಂತಹ ನೌಕರನ ಅಮಾನತನ್ನು ಸಕ್ಷಮ ಪ್ರಾಧಿಕಾರ ವಿಳಂಬ ವಿಲ್ಲದೇ ತೀರ್ಮಾನಿಸಿ ಅಮಾನತು ಅದೇಶ ರದ್ದುಪಡಿಸಬೇಕು. ಸಕ್ಷಮ ಪ್ರಾಧಿಕಾರ ಅರು ತಿಂಗಳಲ್ಲಿ ಅಮಾನತಿಗೆ ಸಂಬಂಧಿಸದಿಂತೆ ಆದೇಶ ನೀಡದಿದ್ದರೆ ಅದನ್ನು ಭಾವಿತ ಆದೇಶ ಎಂದು ಪರಿಗಣಿಸಿ ಅಮಾನತಿನಿಂದ ಆರು ತಿಂಗಳು ಪೂರ್ಣಗೊಂಡ ಬಳಿಕ ತಾನಾಗಿ ರದ್ದಾಗಲಿದೆ.

ಅಮಾನತು ಅದೇಶ ರದ್ದುಗೊಂಡ ಕೂಡಲೇ ನೇಮಕಾತಿ ಪ್ರಾಧಿಕಾರದಿಂದ ಸ್ಥಳ ನಿಯುಕ್ತಿ ಆದೇಶವನ್ನ ತಕ್ಷಣವೇ ಕೋರುವುದು ಸರ್ಕಾರಿ ನೌಕರನ ಕರ್ತವ್ಯ ಅಗಿರುತ್ತದೆ. ಅಮಾನತು ಅವಧಿ ಮುಗಿದ ಬಳಿಕ ಸಕ್ಷಮ ಪ್ರಾಧಿಕಾರದಿಂದ ಸ್ಥಳ ನಿಯುಕ್ತಿ ಕೋರದೇ ಇದ್ದಲ್ಲಿ ಅಮಾನತು ಅದೇಶ ರದ್ದಾದ ದಿನಾಂಕದಿಂದ ಆರಂಭವಾಗುವಂತೆ ಅದನ್ನು ಅನಧಿಕೃತ ಗೈರು ಹಾಜರಿ ಎಂದೇ ಪರಿಗಣಿಸಲಾಗುತ್ತದೆ. ಅಂದರೆ ಯಾವುದೇ ಒಬ್ಬ ಸರ್ಕಾರಿ ನೌಕರ ಅಮಾನತುಗೊಂಡ ಅರು ತಿಂಗಳ ಬಳಿಕ ಸರ್ಕಾರಿ ಕರ್ತವ್ಯಕ್ಕೆ ಮರಳಬೇಕು. ಮರಳದಿದ್ದರೆ ಅದು ಅನಧಿಕೃತ ಗೈರು ಹಾಜರಿ ಅಗುತ್ತದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 , ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ರ ಉಪ ಬಂಧದಡಿ ಅಮಾನತಿಗೆ ಒಳಗಾದ ಪ್ಕರಣದಲ್ಲಿ ( ಭ್ರಷ್ಟಾಚಾರ ಪ್ರಕರಣ) ಸಂಬಂಧಂ ಪಟ್ಟ ತನಿಖಾ ಸಂಸ್ಥೆಯು ಸಕ್ಷಮ ಪ್ರಾಧಿಕಾರಿಯು ಮೇಲೆ ತಿಳಿಸಿದಂತೆ ಆರು ತಿಂಗಳ ಅಮಾನತು ಅವಧಿ ಮೀರಿ ಅಮಾನತು ಅವಧಿ ವಿಸ್ತರಿಸಲು ಕೋರಿದಲ್ಲಿಮಾತ್ರ ಅಮಾನತು ಅವಧಿ ಮುಂದುವರೆಸಬೇಕು. ಹೊರತು ಪಡಿಸಿ ಭ್ರಷ್ಟಾಚಾರ ಪ್ರಕರಣದಲ್ಲೂ ಸಹ ಅಪಾಧಿತ ನೌಕರನ ಅಮಾನತು ಅವಧಿ ಆರು ತಿಂಗಳ ಬಳಿಕ ಸ್ವಯಂ ಚಾಲಿತವಾಗಿ ರದ್ದಾಗಲಿದೆ.

ಸಂದರ್ಭ ಅನುಸಾರ ಅರು ತಿಂಗಳ ಅವಧಿಯೊಳಗೆ ಇಲಾಖಾ ವಿಚಾರಣೆ ಆರಂಭಿಸದಿದ್ದರೆ ಅಥವಾ ದೋಷಾರೋಪ ಪಟ್ಟಿ ಹೊರಡಿಸದೇ ಇದ್ದಲ್ಲಿ ಆರು ತಿಂಗಳ ಒಳಗಾಗಿಯೇ ಸರ್ಕಾರಿ ನೌಕರನನ್ನು ಸೇವೆಗೆ ಪುನರ್ ಸ್ಥಾಪಿಸಲು ಸಕ್ಷಮ ಪ್ರಾಧಿಕಾರ ನಿರ್ಧಾರ ಕೈಗೊಳ್ಳಬೇಕು.   ಅಮಾನತು ಆದ ಸರ್ಕಾರಿ ನೌಕರನನ್ನು ಅಮಾನತುಗೊಂಡ ಹುದ್ದೆ/ ಸ್ಥಾನದಲ್ಲಿ ಪುನಃ ಮುಂದುವರೆಸುವಂತಿಲ್ಲ.  ಅಮಾನತಿಗೆ ಸಂಬಂಧಿಸಿದಂತೆ ಈ ಎಲ್ಲಾ ತಿದ್ದುಪಡಿ ನಿಯಮಗಳು ಎಲ್ಲಾ ಇಲಾಖೆಗಳ ನೌಕರರಿಗೆ ಅನ್ವಯಿಸುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. .

Related News

spot_img

Revenue Alerts

spot_img

News

spot_img