26.4 C
Bengaluru
Monday, December 23, 2024

ಯುಪಿಒಆರ್: ಆಸ್ತಿ ಮಾಲೀಕತ್ವದ ಹೊಸ ಗುರುತು

ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇನ್ನು ಮುಂದೆ ಡಿಜಿಟಲೀಕರಣಗೊಳಿಸಿದ ಮತ್ತು ಜಿಯೋರೆಫರನ್ಸ್‌ ಮಾಡಲಾದ ನಗರ ಸ್ವತ್ತು ಮಾಲೀಕತ್ವ ಕಾರ್ಡ್‌ಗಳು (ಯುಪಿಒಆರ್) ಲಭ್ಯವಾಗಲಿದೆ. ಆಸ್ತಿಗೆ ಸಂಬಂಧಿಸಿದ ಸಕಲ ಮಾಹಿತಿಗಳು ಈ ಕಾರ್ಡ್‌ಗಳಲ್ಲಿ ಅಡಕವಾಗಿರುತ್ತವೆ.

ಈಗಾಗಲೇ ಬೆಂಗಳೂರಿನ ನಾಲ್ಕು ವಾರ್ಡ್‌ಗಳಲ್ಲಿ ಯುಪಿಒಆರ್ ವಿತರಣೆ ಪೂರ್ಣಗೊಂಡಿದ್ದು, ಮೂರು ವಾರ್ಡ್‌ಗಳಲ್ಲಿ ಪ್ರಗತಿಯಲ್ಲಿದೆ. ಸದ್ಯ ಭೂ ದಾಖಲೆ ವಿಭಾಗದಿಂದ 30 ತಂಡಗಳನ್ನು ರಚಿಸಿಕೊಂಡು ಪ್ರತಿ ತಿಂಗಳು ಒಂದು ಲಕ್ಷ ಸ್ವತ್ತುಗಳ ಕಾರ್ಡ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಕಂದಾಯ ಇಲಾಖೆಯ ಸರ್ವೆ ಮತ್ತು ಭೂ ದಾಖಲೆಗಳ ವಿಭಾಗದ ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು, ʻಒಂದೂವರೆ ವರ್ಷಗಳಲ್ಲಿ ಬೆಂಗಳೂರಿನ ಎಲ್ಲ 25 ಲಕ್ಷ ಸ್ವತ್ತುಗಳಿಗೆ ಕಾರ್ಡ್‌ಗಳ ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸುವ ವಿಶ್ವಾಸವಿದೆʼ ಎಂದಿದ್ದಾರೆ.

ನಗರ ಪ್ರದೇಶದಲ್ಲಿ ಯಾರು ಯಾವುದರ ಮಾಲೀಕತ್ವ ಹೊಂದಿದ್ದಾರೆ ಎಂಬ ಔಪಚಾರಿಕ ದಾಖಲೆಗಳನ್ನು ತಯಾರಿಸುವುದು ಯುಪಿಒಆರ್‌ ಉದ್ದೇಶ. ಅವಧಿ ಮೀರಿದ ಭೂ ದಾಖಲೆಗಳ ಸಮಸ್ಯೆಯನ್ನು ಪರಿಹರಿಸಲು ಇದನ್ನು ಜಾರಿಗೆ ತರಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಈ ಯೋಜನೆ ಅನುಷ್ಠಾನದಲ್ಲಿ ವಿಳಂಬ ಉಂಟಾಗಿದೆ.

ಡ್ರೋನ್‌ ಸರ್ವೆಯನ್ನು ಬಳಸಿಕೊಂಡು 2018ರಲ್ಲಿ ಜಯನಗರ ಮತ್ತು ರಾಮನಗರದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲಾಯಿತು. ನಂತರ ತುಮಕೂರು, ಹಾಸನ, ಉತ್ತರ ಕನ್ನಡ, ಬೆಳಗಾವಿ, ರಾಮನಗರ ಮತ್ತು ಬೆಂಗಳೂರುಗಳಲ್ಲಿ ಎರಡು ಹಂತಗಳ ಬೃಹತ್ ಅಧ್ಯಯನಕ್ಕೆ ಅನುಮೋದನೆ ನೀಡಲಾಯಿತು. ಸರ್ವೆಯ ಆರಂಭಿಕ ಹಂತದಲ್ಲಿ ಈ ಮೇಲಿನ ಪ್ರದೇಶಗಳ 50 ಸಾವಿರ ಚದರ ಕಿ.ಮೀ. ಒಳಗೊಳ್ಳುವ ಯೋಜನೆ ರೂಪಿಸಲಾಗಿತ್ತು.

ಯುಪಿಒಆರ್‌ ಹೇಗೆ ಕೆಲಸ ಮಾಡುತ್ತದೆ?
ಆಸ್ತಿ ಮಾಲೀಕರು ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಕಂದಾಯ ಇಲಾಖೆಯು ಅವರ ಆಸ್ತಿ ಗಡಿಯನ್ನು ಭೌತಿಕವಾಗಿ ಗುರುತಿಸುತ್ತದೆ. ಆಸ್ತಿಯ ಚಿತ್ರಗಳನ್ನು ಡ್ರೋನ್‌ ಮೂಲಕ ಸೆರೆಹಿಡಿದು, ಭೌತಿಕವಾಗಿ ಗಡಿ ಗುರುತಿಸಲಾಗುತ್ತದೆ. ನಂತರ ಇ-ಮೇಲ್‌ ಮೂಲಕ ಆಸ್ತಿಯ ಮಾಲೀಕರಿಗೆ ಮಾಹಿತಿ ನೀಡಿ, ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಯುಪಿಒಆರ್ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವಂತೆ ತಿಳಿಸಲಾಗುತ್ತದೆ. ಬಿಬಿಎಂಪಿ ದಾಖಲೆಗಳು ಮತ್ತು ಮಾಲೀಕರು ಅಪ್‌ಲೋಡ್‌ ಮಾಡಿದ ಅಧಿಕೃತ ದಾಖಲೆಗಳನ್ನು ಒಟ್ಟಾಗಿಸಿ ಕರಡು ಪ್ರತಿ ತಯಾರಿಸಲಾಗುತ್ತದೆ. ಕರಡು ಕಾರ್ಡ್‌ಗೆ ಆಕ್ಷೇಪಗಳಿದ್ದಲ್ಲಿ ಸಾರ್ವಜನಿಕರು ಒಂದು ತಿಂಗಳೊಳಗಾಗಿ ಸಲ್ಲಿಸಬೇಕಾಗುತ್ತದೆ.

ಉಪಯೋಗ ಏನು?
ಮಾರಾಟದ ನಂತರ ಮಾಡಿದ ಬದಲಾವಣೆಗಳನ್ನು ತಕ್ಷಣವೇ ನವೀಕರಿಸಲಾಗುತ್ತದೆ, ಆದ್ದರಿಂದ ಆಸ್ತಿ ಮಾಲೀಕರು ಖಾತಾ ವರ್ಗಾಯಿಸಲು ಯಾರನ್ನೂ ಸಂಪರ್ಕಿಸುವ ಅಗತ್ಯವಿಲ್ಲ. ಡಿಜಟಲೀಕರಣಗೊಂಡ ನಕ್ಷೆ ಬಳಸಿ ಸುಲಭವಾಗಿ ಆಸ್ತಿ ವಿಭಜನೆ ಮಾಡಬಹುದು. ಸಾಲ ಮತ್ತು ಇತರ ಪ್ರಯೋಜನಗಳನ್ನು ಸುಗಮವಾಗಿ ಪಡೆಯಬಹುದು.

ಬ್ಯಾಂಕ್ ಸಾಲ ಪಡೆಯಲು, ನ್ಯಾಯಾಲಯದಲ್ಲಿ ಆಸ್ತಿ ಸಂಬಂಧಿ ವ್ಯಾಜ್ಯಗಳಲ್ಲಿ, ಸ್ಥಳೀಯ ಆಡಳಿತಗಳಲ್ಲಿ ಮಾಲೀಕತ್ವ ಸಾಬೀತುಪಡಿಸಲು, ಉಪನೋಂದಣಾಧಿಕಾರಿ ಕಚೇರಿ, ಆಸ್ತಿ ಪಾಲು ಮಾಡಲು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು, ಕಟ್ಟಡ ನಿರ್ಮಾಣ ಅಥವಾ ಪರಿವರ್ತನೆ ಸಂದರ್ಭದಲ್ಲಿ, ಬೇರೆಯವರಿಗಾಗಿ ನ್ಯಾಯಾಲಯ-ಪೊಲೀಸ್‌ ಠಾಣೆಯಲ್ಲಿ ಜಾಮೀನು ನೀಡುವಾಗ ಈ ಕಾರ್ಡ್‌ಗಳು ಬಳಕೆಯಾಗಲಿವೆ.

Related News

spot_img

Revenue Alerts

spot_img

News

spot_img