ದೀರ್ಘಾವಧಿಗೆ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರಿಗೆ ರಿಯಲ್ ಎಸ್ಟೇಟ್ ಕ್ಷೇತ್ರವು ಯಾವಾಗಲೂ ಹೆಚ್ಚು ಆದ್ಯತೆಯ ಮತ್ತು ವಿಶ್ವಾಸಾರ್ಹವಾಗಿ ಉಳಿದಿದೆ. ಇತ್ತೀಚೆಗಿನ ಸಮೀಕ್ಷೆ ಪ್ರಕಾರ ಶೇ 50ರಷ್ಟು ಹೂಡಿಕೆದಾರರು ರಿಯಲ್ ಎಸ್ಟೇಟ್ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸ್ಥಿರತೆ ಮತ್ತು ದೀರ್ಘಾವಧಿಯಲ್ಲಿ ಸುಸ್ಥಿರ ಅಭಿವೃದ್ಧಿಯ ಕಾರಣಕ್ಕೆ ಜನರಲ್ಲಿ ಈ ಉದ್ಯಮದ ಬಗ್ಗೆ ಒಳ್ಳೆಯ ಭಾವನೆ ಇದೆ.
ರಿಯಲ್ ಎಸ್ಟೇಟ್ ಅನ್ನು ನಾಲ್ಕು ವಿಧಗಳಾಗಿ ವರ್ಗೀಕರಿಸಬಹುದಾದರೂ, ಸಾಮಾನ್ಯರಿಗೆ ಹೆಚ್ಚು ಪರಿಚಯ ಇಲ್ಲದ, ಆದರೆ ವಿಶ್ವಾಸಾರ್ಹವಾದ ವಾಣಿಜ್ಯ ರಿಯಲ್ ಎಸ್ಟೇಟ್ ಈಗ ಹೂಡಿಕೆ ವಿವಿಧ ಮಾದರಿಗಳ ಮೂಲಕ ಸಾರ್ವತ್ರಿಕಗೊಳ್ಳುತ್ತಿದೆ. ಆ ದಿಕ್ಕಿನಲ್ಲಿ ನೀವು ಹೆಜ್ಜೆ ಹಾಕುವ ಮೊದಲು ನೆನಪಿಡಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.
ಭಾಗಶಃ ಮಾಲೀಕತ್ವ
ಇದನ್ನು ಔಪಚಾರಿಕ ವ್ಯವಸ್ಥೆ ಎಂದು ಕರೆಯಬಹುದು. ಇದರಲ್ಲಿ ಹೂಡಿಕೆದಾರರ ಗುಂಪುಗಳು ಆಸ್ತಿ ಖರೀದಿಸಲು ಹಣವನ್ನು ಸಂಗ್ರಹಿಸುತ್ತವೆ. ಅವರು ಹೆಚ್ಚಿನ ಮೌಲ್ಯದ ಆಸ್ತಿಯ ಸಕ್ರಿಯವಲ್ಲದ ಮಾಲೀಕತ್ವವನ್ನು ಹಂಚಿಕೊಳ್ಳುತ್ತಾರೆ. ಇದು ಒಬ್ಬನೇ ವ್ಯಕ್ತಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ ಸ್ವತ್ತು ಖರೀದಿಸುವ ಸವಾಲನ್ನು ನಿವಾರಿಸುತ್ತದೆ. ಈ ಹೂಡಿಕೆಯನ್ನು ಮಧ್ಯಸ್ಥಿಕೆ ವೇದಿಕೆಯ ಮೂಲಕವೂ ಮಾಡಬಹುದಾಗಿದೆ. ಅದು ಎ-ಗ್ರೇಡ್ ಸ್ವತ್ತು ಶೋಧಿಸುವ ಎಲ್ಲಾ ಶ್ರಮವನ್ನು ತಗ್ಗಿಸುತ್ತದೆ, ಒಟ್ಟಾರೆ ಅಪಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿರೀಕ್ಷಿತ ಆದಾಯದ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.
ಈ ಹೂಡಿಕೆಯು ನೇರವಾಗಿ ಹೂಡಿಕೆದಾರರ ನಿಯಂತ್ರಣದಲ್ಲಿದೆ ಮತ್ತು ಸಾಮಾನ್ಯವಾಗಿ ಹೆಚ್ಚಿನ ಆದಾಯವನ್ನು ನೀಡುತ್ತದೆ.
ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ (ಆರ್‌ಇಐಟಿ):
ಹೂಡಿಕೆದಾರರು ಆರ್‌ಇಐಟಿಗಳಲ್ಲಿ ಕಡಿಮೆ ಮೊತ್ತವನ್ನೂ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆ ಬೇರೆ ಬೇರೆ ವಿಭಾಗಗಳಲ್ಲಿ ಹಂಚಿಕೊಂಡಿರುತ್ತದೆ. ಆದರೆ ಇದು ಹೂಡಿಕೆದಾರರ ನಿಯಂತ್ರಣಕ್ಕೆ ಒಳಪಟ್ಟಿರುವುದಿಲ್ಲ. ವಿವಿಧ ಕಾರಣಗಳಿಂದಾಗಿ ಇಲ್ಲಿ ಲಾಭಾಂಶ ಕಡಿಮೆ.
ಹೂಡಿಕೆಗೂ ಮುನ್ನ…
ವಾಣಿಜ್ಯ ರಿಯಲ್ ಎಸ್ಟೇಟ್‌ನಲ್ಲಿ ಯಶಸ್ಸು ಬಯಸುವಿರಾದರೆ ವೃತ್ತಿಪರರಂತೆ ಯೋಚಿಸುವುದನ್ನು ಕಲಿಯಿರಿ. ಅದಕ್ಕಾಗಿ ಅಧ್ಯಯನ ಅಗತ್ಯ.
ಸ್ಥಳ ಮುಖ್ಯ:
ಸ್ಥಳವನ್ನು ಅವಲಂಬಿಸಿ ನಿಮ್ಮ ಸ್ವತ್ತು ನೀಡುವ ಲಾಭಾಂಶ ನಿರ್ಧಾರವಾಗುತ್ತದೆ. ಸುತ್ತಲಿನ ಪ್ರದೇಶವು ಒಳ್ಳೆಯ ಅಭಿವೃದ್ಧಿ ಕಂಡಿದ್ದರೆ, ಸಾರಿಗೆ ಸಂಪರ್ಕ ಚೆನ್ನಾಗಿದ್ದರೆ ನಿಮ್ಮ ಸ್ವತ್ತುಗಳಿಗೆ ಬೇಡಿಕೆ ಹೆಚ್ಚಾಗಿ, ಹೆಚ್ಚಿನ ಲಾಭ ಗಳಿಕೆ ತಂದುಕೊಡುತ್ತದೆ.
ಸ್ವತ್ತಿನ ಗುಣಮಟ್ಟ:
ಲಾಬಿ, ಲಿಫ್ಟ್ ಸೌಲಭ್ಯಗಳ ಲಭ್ಯತೆ, ಚಾವಣಿ ಎತ್ತರ ಮುಂತಾದ ಗುಣಲಕ್ಷಣಗಳು ಸ್ವತ್ತಿನ ಗುಣಮಟ್ಟವನ್ನು ನಿರ್ಧರಿಸುತ್ತವೆ. ಎ, ಬಿ+, ಬಿ ಎಂದು ಇವುಗಳನ್ನು ವರ್ಗೀಕರಿಸಲಾಗುತ್ತದೆ. ಉನ್ನತ ಶ್ರೇಣಿಯ ಸ್ವತ್ತುಗಳಲ್ಲಿನ ಹೂಡಿಕೆ ಹೆಚ್ಚಿನ ಗಳಿಕೆಯನ್ನೂ ನೀಡುತ್ತವೆ.
ಬಾಡಿಗೆ ಅವಧಿ:
ಬಾಡಿಗೆದಾರರು ಹೆಚ್ಚು ಕಾಲ ಉಳಿದುಕೊಂಡಂತೆ ನಿಯಮಿತ ಆದಾಯ ಸಿಗುತ್ತದೆ. ಇದು ಆ ಪ್ರದೇಶದಲ್ಲಿ ಸ್ವತ್ತುಗಳ ಲಭ್ಯತೆಯನ್ನು ಆಧರಿಸಿರುತ್ತದೆ. ಇದನ್ನು ಅರಿತು ಹೂಡಿಕೆ ಮಾಡುವುದು ಒಳಿತು.
ಗುತ್ತಿಗೆ ಸ್ವರೂಪ:
ವಾಣಿಜ್ಯ ರಿಯಲ್ ಎಸ್ಟೇಟ್ ಗುತ್ತಿಗೆ ಸ್ವರೂಪ ಮನೆಗಳಿಗಿಂತ ಭಿನ್ನ. ಸಾಮಾನ್ಯವಾಗಿ 4+4+4 ಮಾದರಿಯ ಕರಾರು ಮಾಡಿಕೊಂಡು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಬಾಡಿಗೆ ಹೆಚ್ಚಿಸುವ ನಿರ್ಧಾರವಾಗಿರುತ್ತದೆ. ಈ ಕರಾರು ಅವಧಿಯಲ್ಲಿ ಬಾಡಿಗೆದಾರರು ಖಾಲಿ ಮಾಡಬೇಕೆಂದು ಮಾಲೀಕ ಒತ್ತಾಯಿಸಲು ಸಾಧ್ಯವಿಲ್ಲ, ಆದರೆ ಬಾಡಿಗೆದಾರರು ಈ ಆಯ್ಕೆಯಲ್ಲಿ ಸ್ವತಂತ್ರರು. ಹೆಚ್ಚಿನ ಲಾಕ್-ಇನ್ ಅವಧಿ ಇದ್ದಂತೆ ಹೂಡಿಕೆದಾರರಿಗೆ ಅನುಕೂಲ.