ನವ ಮುಂಬೈನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಭಾರಿ ಸಂಚಲನ ಮೂಡಿದ್ದು, ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮವು (ಸಿಡ್ಕೊ) ಈಚೆಗೆ ಹರಾಜಿಗೆ ಇಟ್ಟಿದ್ದ 28 ಪ್ಲಾಟ್‌ಗಳ ಪೈಕಿ ಒಂದು ಪ್ಲಾಟ್, ಪ್ರತಿ ಚದರ ಮೀಟರ್ಗೆ 5.54 ಲಕ್ಷ ರೂಪಾಯಿಯಂತೆ ಮಾರಾಟವಾಗಿದೆ.
ಸಾನಪಾಡಾದ ಪಾಮ್ ಬೀಚ್ ರಸ್ತೆಯ ಸೆಕ್ಟರ್ 20ರಲ್ಲಿನ 1.3 ಎಕರೆ ಪ್ಲಾಟ್‌ನ ಪ್ರತಿ ಚದರ ಮೀಟರ್‌ಗೆ ಸಿಡ್ಕೊ 1.14 ಲಕ್ಷ ರೂಪಾಯಿ ಮೂಲ ದರ ನಿಗದಿ ಮಾಡಿತ್ತು. ಇದೀಗ ಅದಕ್ಕಿಂತ ಸರಿಸುಮಾರು ಐದು ಪಟ್ಟು ಹೆಚ್ಚಿನ ಆದಾಯವನ್ನು ಪ್ಲಾಟ್ ತಂದುಕೊಟ್ಟಿದ್ದು, ಬರೋಬ್ಬರಿ 306 ಕೋಟಿ ರೂಪಾಯಿಗಳಿಗೆ ಬಿಕರಿಯಾಗಿದೆ.
ಡಿಪಿವಿಜಿ ವೆಂಚರ್ಸ್‌ನ ದಿನೇಶ್ ಪಸೋರಿಯಾ ಈ ಬಿಡ್ ತಮ್ಮದಾಗಿಸಿಕೊಂಡಿದ್ದಾರೆ. ಅವರ ಪಾಲುದಾರರಾದ ಯೋಗೇಶ್ ಠಕ್ಕರ್ ಅವರು, ʻಪಾಮ್ ಬೀಚ್ ರಸ್ತೆಯಲ್ಲಿ ಸಮುದ್ರಕ್ಕೆ ಅಭಿಮುಖವಾಗಿ ಇರುವ ಕೊನೆಯ ಪ್ಲಾಟ್ ಇದಾಗಿದೆ. ಅದೇ ಕಾರಣಕ್ಕೆ ದಾಖಲೆಯ ಬೆಲೆಗೆ ಮಾರಾಟವಾಗಿದೆ. ಈ ಪ್ಲಾಟ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಬೇಕೇ ಅಥವಾ ವಸತಿ ಉದ್ದೇಶಕ್ಕೆ ಬಳಸಬೇಕೇ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆʼ ಎಂದು ತಿಳಿಸಿದ್ದಾರೆ.
ನವ ಮುಂಬೈನಲ್ಲಿನ 28 ಪ್ಲಾಟ್‌ಗಳ ಇ- ಹರಾಜಿನಿಂದಾಗಿ ಒಟ್ಟಾರೆ 1,365 ಕೋಟಿ ರೂಪಾಯಿ ಸಿಡ್ಕೊ ಬೊಕ್ಕಸಕ್ಕೆ ಸೇರಿಸಿಕೊಂಡಿದೆ.
ಸಿಡ್ಕೊದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಮುಖರ್ಜಿ ಅವರು, ʻಪಾಮ್ ಬೀಚ್ ರಸ್ತೆಯ ಪ್ಲಾಟ್‌ಗೆ ದಾಖಲೆಯ ಬೆಲೆ ಸಿಕ್ಕಿದೆ. ಸಿಡ್ಕೊ ಅಳವಡಿಸಿಕೊಂಡ ಪಾರದರ್ಶಕ ಬಿಡ್ಡಿಂಗ್ ಹಾಗೂ ಇ-ಹರಾಜು ಪ್ರಕ್ರಿಯೆಗೆ ಮತ್ತು ಸಿಡ್ಕೊದ ಅಭಿವೃದ್ಧಿ ಯೋಜನೆಗಳಲ್ಲಿ ಮಾರುಕಟ್ಟೆಯು ಇಟ್ಟಿರುವ ಭರವಸೆಗೆ ಇದು ನಿದರ್ಶನವಾಗಿದೆʼ ಎಂದು ಹೇಳಿದ್ದಾರೆ.
ಕ್ರೆಡಾಯ್-ಎಂಸಿಎಚ್ಐ (ರಾಯ್ಗಡ್) ಸಂಸ್ಥಾಪಕ ಅಧ್ಯಕ್ಷ ರಾಜೇಶ ಪ್ರಜಾಪತಿ ಅವರು ಹೇಳುವ ಪ್ರಕಾರ, ನವಿ ಮುಂಬೈ ಪ್ರದೇಶದಲ್ಲಿನ ನಿರ್ಮಾಣ ಸಂಬಂಧಿ ಚಟುವಟಿಕೆಗಳಿಗೆ ಎದುರಾಗಿದ್ದ ಬಹುತೇಕ ಅಡೆತಡೆಗಳನ್ನು ನಗರಾಭಿವೃದ್ಧಿ ಸಚಿವಾಲಯ ಪರಿಹರಿಸಿದ ನಂತರ ಮತ್ತು ಹೊಸ ವಿಮಾನ ನಿಲ್ದಾಣ ಹಾಗೂ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅಭಿವೃದ್ಧಿ ಪ್ರಕ್ರಿಯೆ ನಂತರ ಈ ಪ್ರದೇಶದಲ್ಲಿ ಆಸ್ತಿಗಳಿಗೆ ಅದ್ಭುತವಾದ ಬೇಡಿಕೆ ಕಂಡುಬಂದಿದೆ.
ಅದೂ ಅಲ್ಲದೆ, ʻಈ ಪ್ರದೇಶವು ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿಡುತ್ತಿರುವುದರಿಂದ, ಗ್ರಾಹಕರು ನವಿ ಮುಂಬೈನಲ್ಲಿ ತಮ್ಮ ಹೂಡಿಕೆಗಳನ್ನು ಪ್ರಬಲಗೊಳಿಸುವ ಪ್ರಾಮುಖ್ಯತೆಯನ್ನು ಅರಿತುಕೊಳ್ಳುತ್ತಿದ್ದಾರೆ. ಬೇಡಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಲ್ಲಿ ನಾವಿದ್ದೇವೆʼ ಎಂದೂ ಅವರು ಅಭಿಪ್ರಾಯಪಡುತ್ತಾರೆ.
ʻದಾಖಲೆ ಮೀರಿಸುವ ಬಿಡ್‌ನಿಂದಾಗಿ, ಹೂಡಿಕೆ ಮಾಡಬೇಕೋ ಬೇಡವೋ ಎಂದು ಯೋಚನೆ ಮಾಡುತ್ತಿರುವ ಹಾಗೂ ಹೂಡಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಬೇರೆ ಗ್ರಾಹಕರಿಗೆ ಕೂಡ ಒಂದು ಬಲವಾದ ನಂಬಿಕೆ ಬರುತ್ತದೆ. ನಿರ್ಮಾಣ ಯೋಜನೆಗಳಿಗೆ ಆಕ್ಯುಪೆನ್ಸಿ (ಸ್ವಾಧೀನ) ಪ್ರಮಾಣಪತ್ರ ಪಡೆಯುವುದು ಹೆಚ್ಚಾಗುತ್ತಿದ್ದಂತೆ ನವ ಮುಂಬೈ ಇನ್ನಷ್ಟು ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆ ನಮಗಿದೆʼ ಎಂದು ವಿವರಿಸಿದರು.