26.4 C
Bengaluru
Monday, December 23, 2024

ಆಸ್ತಿ ಅಡಮಾನ ಸಾಲ: ಈ ಅಂಶಗಳನ್ನು ನೆನಪಿಡಿ

ನಿಮ್ಮ ಉದ್ಯಮಕ್ಕಾಗಿ ಒಂದಷ್ಟು ಹಣದ ಅಗತ್ಯ ಇದೆಯೇ? ಅಂತಹ ಅಗತ್ಯವನ್ನು ಪೂರೈಸಲು ನಿಮ್ಮ ಬಳಿ ಇರುವ ಆಸ್ತಿ ಸಮರ್ಥವಾಗಿದೆ ಎಂದು ನೀವು ಪರಿಗಣಿಸುತ್ತಿದ್ದೀರೇ? ಮನೆ ಅಥವಾ ಕಚೇರಿಗಳ ಮೇಲೆ ಸಾಲ ಮಾಡುವುದು ಖಂಡಿತ ಅತ್ಯುತ್ತಮ ಆಯ್ಕೆ. ನಿಮ್ಮ ಆಸ್ತಿಯನ್ನು ಅಡಮಾನ ಇಟ್ಟುಕೊಂಡು, ಕೈಗೆಟಕುವ ಬಡ್ಡಿ ದರದಲ್ಲಿ ಸಾಲದಾತ ಸಂಸ್ಥೆಗಳು ನಿಮಗೆ ಸಾಲ ನೀಡುತ್ತವೆ. ಈ ಸಾಲ ಪಡೆಯಲು ಅನುಸರಿಸಬೇಕಾದ ಐದು ಪ್ರಮುಖ ನಿಯಮಗಳನ್ನು ಇಲ್ಲಿ ವಿವರಿಸಲಾಗಿದೆ.

1. ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಸಾಲ ಪಡೆಯಿರಿ
ನಿಮ್ಮ ಒಟ್ಟು ಸಾಲ ಪಾವತಿಸುವ ಮಾಸಿಕ ಕಂತು ನಿಮ್ಮ ಆದಾಯದ ಶೇ 65ಕ್ಕಿಂತ ಹೆಚ್ಚು ಮೊತ್ತ ಆಗಿರಬಾರದು. ಆದ್ದರಿಂದ ಮರುಪಾವತಿ ಮಾಡಬಹುದಾದ ನಿಮ್ಮ ಸಾಮರ್ಥ್ಯವನ್ನು ನಿರ್ಧರಿಸಿಕೊಂಡು ದೊಡ್ಡ ಮೊತ್ತದ ಸಾಲಕ್ಕೆ ಅರ್ಜಿ ಹಾಕಿ.

2. ಕಡಿಮೆ ಅವಧಿಯ ಸಾಲ ಮರುಪಾವತಿ ಆಯ್ಕೆ
ನೀವು ಸಾಲ ಮರುಪಾವತಿಗೆ ದೀರ್ಘ ಅವಧಿಯನ್ನು ಆಯ್ಕೆ ಮಾಡಿಕೊಂಡಂತೆ ಇಎಂಐ (ಸಮಾನ ಮಾಸಿಕ ಕಂತು) ಕಡಿಮೆ ಬರುತ್ತದೆ. ಆದರೆ ದೀರ್ಘ ಅವಧಿಗೆ ನೀವು ಭಾರಿ ಪ್ರಮಾಣದ ಬಡ್ಡಿ ಕಟ್ಟಿರುತ್ತೀರಿ. ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಇಎಂಐ ಭರಿಸಲು ನಿಮಗೆ ಸಾಧ್ಯವಿಲ್ಲ ಎಂದಾದರೆ ಭವಿಷ್ಯದಲ್ಲಿ ನಿಮ್ಮ ಆದಾಯ ಹೆಚ್ಚಳ ಆದಾಗ ಇಎಂಐ ಮೊತ್ತವನ್ನೂ ಹೆಚ್ಚಳ ಮಾಡಿಕೊಳ್ಳಬಹುದು.

3. ಸಮಯಕ್ಕೆ ಸರಿಯಾಗಿ ಪಾವತಿ ಮಾಡಿ
ನೀವು ಇಎಂಐ ಪಾವತಿಯಲ್ಲಿ ವಿಳಂಬ ಮಾಡಿದಂತೆ, ಸಾಲದಾತರು ನಿಮಗೆ ದಂಡ ವಿಧಿಸುತ್ತಾರೆ ಮತ್ತು ಅದು ನಿಮ್ಮ ಒಟ್ಟಾರೆ ಪಾವತಿ ಮೊತ್ತವನ್ನು ಹೆಚ್ಚಾಗಿಸುತ್ತದೆ. ಅದೂ ಅಲ್ಲದೆ, ವಿಳಂಬ ಪಾವತಿಯು ನಿಮ್ಮ ಕ್ರೆಡಿಟ್‌ ಸ್ಕೋರ್‌ ಮೇಲೆ ದುಷ್ಪರಿಣಾಮ ಬೀರುತ್ತದೆ ಮತ್ತು ಭವಿಷ್ಯದಲ್ಲಿ ಸಾಲ ಲಭ್ಯತೆಯ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ.

4. ದೊಡ್ಡ ಸಾಲ ಪಡೆದಾಗ ವಿಮೆ ಆಯ್ದುಕೊಳ್ಳಿ
ಅಡಮಾನ ಸಾಲ ಪಡೆದಾಗ ದೀರ್ಘಾವಧಿ ಪಾವತಿ ಯೋಜನೆ ಆಯ್ದುಕೊಳ್ಳುವುದು ಸಹಜ. ಸಾಲ ಪಡೆದ ಮೊತ್ತವನ್ನು ಸರಿದೂಗಿಸಲು ವಿಮೆ ಆಯ್ದುಕೊಳ್ಳುವುದು ಅತ್ಯುತ್ತಮ. ಆಗ, ಸಾಲ ತೀರುವ ಮುನ್ನವೇ ಸಾಲಗಾರ ಮರಣಹೊಂದಿದರೆ, ಬಾಕಿ ಸಾಲವನ್ನು ತೀರಿಸಲು ಅವರ ಕುಟುಂಬದವರು ಪರದಾಡಬೇಕಿಲ್ಲ ಅಥವಾ ಸಾಲ ತೀರದ ಕಾರಣ ಅಡಮಾನ ಇಡಲಾದ ಆಸ್ತಿಯನ್ನು ಹರಾಜು ಮಾಡುವ ಸಂದರ್ಭ ಬರುವುದಿಲ್ಲ.

5. ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ
ಸಾಲ ಪಡೆಯುವಾಗ ದೊಡ್ಡ ಗಾತ್ರದ ಕಾಗದಪತ್ರಗಳನ್ನೇ ನಿಮ್ಮ ಮುಂದಿಡಲಾಗುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ಓದಲು ನೀವು ಬಯಸದೇ ಇರಬಹುದು. ಆದರೆ, ಭವಿಷ್ಯದಲ್ಲಿ ಯಾವುದೇ ಅನಿರೀಕ್ಷಿತ ಅಹಿತಕರ ಸಂಗತಿಗಳು ಉಂಟಾಗದಂತೆ ಎಚ್ಚರ ವಹಿಸಲು ಸಾಲದ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಅತ್ಯಗತ್ಯ. ಬಹಿರಂಗ ಪಡಿಸದ ಹೆಚ್ಚುವರಿ ಶುಲ್ಕಗಳಿದ್ದರೆ ನಿಮ್ಮ ಒಟ್ಟು ಸಾಲದ ಮೊತ್ತವೂ ಹೆಚ್ಚಾಗುತ್ತದೆ.

ಸಾಲಕ್ಕಾಗಿ ನೀಡಬೇಕಾದ ದಾಖಲೆಗಳು
* ಸರಿಯಾಗಿ ಭರ್ತಿಮಾಡಿದ ಅರ್ಜಿ
* ಆದಾಯ ದಾಖಲೆಗಳು- ಸಂಬಳ ಚೀಟಿ, ಫಾರ್ಮ್ 16 ಮತ್ತು ಬ್ಯಾಂಕ್ ವಹಿವಾಟು ವಿವರ (ಸಂಬಳದಾರರು), ಬ್ಯಾಂಕ್ ಸ್ಟೇಟ್‌ಮೆಂಟ್, ಹಣಕಾಸು ವಿವರ, ಆದಾಯ ತೆರಿಗೆ ಪಾವತಿ ವಿವರ (ಸ್ವ ಉದ್ಯೋಗಿಗಳು)
* ಕೆವೈಸಿ- ಗುರುತಿನ ಚೀಟಿ, ಸಹಿ, ವಿಳಾಸ, ಹೆಸರು, ಜನ್ಮ ದಿನಾಂಕದ ದಾಖಲೆಗಳು
* ಆಸ್ತಿಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳು
* ಸಂಸ್ಕರಣಾ ಶುಲ್ಕ ಸಂಬಂಧಿ ದಾಖಲೆಗಳು

Related News

spot_img

Revenue Alerts

spot_img

News

spot_img