22.7 C
Bengaluru
Monday, December 23, 2024

ಮಾದರಿ ಉಪನೋಂದಣಾಧಿಕಾರಿ ಕಚೇರಿಗಳ ನಿರ್ಮಾಣಕ್ಕೆ ಸಿದ್ಧತೆ: ಏನೇನು ಸೌಲಭ್ಯಗಳಿರಬೇಕು?

ಬೆಂಗಳೂರು: ಸರ್ಕಾರದ ಕೆಲವು ಕಚೇರಿಗಳು ಸದಾ ಜನರಿಂದ ತುಂಬಿರುತ್ತವೆ. ಕಚೇರಿಗಳ ಬಾಗಿಲು ತೆಗೆಯುವುದನ್ನೇ ಜನ ಕಾಯುತ್ತಿರುತ್ತಾರೆ. ಬೆಳಗ್ಗೆ ಆರಂಭವಾದರೆ, ಸಂಜೆ ಬಾಗಿಲು ಮುಚ್ಚುವ ವರೆಗೂ ಜನರು ಕಚೇರಿಯೊಳಗೆ ಸುಳಿದಾಡುತ್ತಲೇ ಇರುತ್ತಾರೆ. ಇಂತಹ ಜನನಿಬಿಡ ಕಚೇರಿಗಳಲ್ಲಿ ಸಬ್‌ರಜಿಸ್ಟ್ರಾರ್‌ (ಉಪನೋಂದಣಾಧಿಕಾರಿಗಳು) ಕಚೇರಿಯೂ ಒಂದು.

ಜಮೀನು, ಮನೆ, ಫ್ಲಾಟ್, ನಿವೇಶನ ಹೀಗೆ ನಾನಾ ತರಹದ ನೋಂದಣಿಗಳು, ವಿವಾಹ ಪ್ರಮಾಣ ಪತ್ರ ಪಡೆಯಲು ಜನರು ಸಬ್‌ರಿಜಿಸ್ಟ್ರಾರ್ ಕಚೇರಿಗಳಿಗೆ ಎಡತಾಕುತ್ತಲೇ ಇರುತ್ತಾರೆ. ಹೀಗೆ ಕಚೇರಿಗೆ ಬರವವರಲ್ಲಿ ಎಲ್ಲಾ ವಯೋಮಾನದವರೂ ಇರುತ್ತಾರೆ. ಹೀಗೆ ಬಂದಂತವರಿಗೆ ಕಚೇರಿಯ ವಾತಾವರಣ ಹೇಗಿರಬೇಕು, ಯಾವ ಯಾವ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಸೇರಿದಂತೆ ಹಲವು ನಿಯಮಗಳನ್ನು ರೂಪಿಸಿ ಇತ್ತೀಚೆಗೆ ಆದೇಶವೊಂದನ್ನು ಹೊರಡಿಸಲಾಗಿದೆ.

ಮಾದರಿ ಉಪನೋಂದಣಾಧಿಕಾರಿ ಕಚೇರಿ ರೂಪಿಸುವ ಸಂಬಂಧ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತೆ ಬಿ.ಆರ್. ಮಮತಾ ಅವರ ನೇತೃತ್ವದಲ್ಲಿ ಇತ್ತೀಚೆಗೆ ಸಭೆಯೊಂದನ್ನು ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.

ಮೊದಲ ಹಂತದ ಕಚೇರಿಗಳು:
ಮಾದರಿ ಉಪನೋಂದಣಿ ಕಚೇರಿಗಳನ್ನು ನಿರ್ಮಾಣ ಮಾಡಲು ಈ ಕೆಳಕಂಡ ಕಚೇರಿಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ.
ಉಪನೋಂದಣಿ ಕಚೇರಿ, ಪೀಣ್ಯ
ಉಪನೋಂದಣಿ ಕಚೇರಿ, ಬೊಮ್ಮನಹಳ್ಳಿ,
ಉಪನೋಂದಣಿ ಕಚೇರಿ, ಬ್ಯಾಟರಾಯನಪುರ
ಉಪನೋಂದಣಿ ಕಚೇರಿ, ಯಲಹಂಕ
ಉಪನೋಂದಣಿ ಕಚೇರಿ, ಗಾಂಧಿನಗರ
ಉಪನೋಂದಣಿ ಕಚೇರಿ, ಮಂಡ್ಯ
ಉಪನೋಂದಣಿ ಕಚೇರಿ, ಮಂಗಳೂರು
ಉಪನೋಂದಣಿ ಕಚೇರಿ, ಚಿಂಚೋಳಿ
ಉಪನೋಂದಣಿ ಕಚೇರಿ, ತುಮಕೂರು
ಉಪನೋಂದಣಿ ಕಚೇರಿ, ಗೌರಿಬಿದನೂರು

ಮಾದರಿ ಉಪನೋಂದಣಿ ಕಚೇರಿಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸಬೇಕು:
* ಮಾದರಿ ಉಪನೋಂದಣಿ ಕಚೇರಿಗಳಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಪ್ರತ್ಯೇಕವಾಗಿ ನಿರ್ಮಿಸಬೇಕು

* ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ ಮತ್ತು ಉಪನೋಂದಣಿ ಕಚೇರಿಗಳಿಗೆ ಸ್ವಂತ ಕಟ್ಟಡ ಹೊಂದುವ ಕುರಿತು ತಮ್ಮ ವ್ಯಾಪ್ತಿಯಲ್ಲಿನ ಕರ್ನಾಟಕ ಹೌಸಿಂಗ್ ಬೋರ್ಡ್ ಕಚೇರಿಯಿಂದ ಸಿ.ಎ. ನಿವೇಶನ ಮಂಜೂರಾತಿ ಪಡೆದು ಪ್ರಸ್ತಾವನೆ ಸಲ್ಲಿಸುವ ಕುರಿತು ಮತ್ತೊಮ್ಮೆ ಸಂಬಂಧಪಟ್ಟ ಜಿಲ್ಲಾ ನೋಂದಣಾಧಿಕಾರಿಗಳಿಗೆ ನೆನಪೋಲೆ ರವಾನಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

* ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನೋಂದಣಿ ಕಚೇರಿಗಳ ಕಟ್ಟಡದ ಮಾಲೀಕರು ಒಪ್ಪಿದಲ್ಲಿ ಮಾದರಿ ಉಪನೋಂದಣಿ ಕಚೇರಿಯನ್ನಾಗಿ ಮಾಡಲು ಈಗಿರುವ ಕಟ್ಟಡದಲ್ಲಿ ಕೆಲವು ಮಾರ್ಪಾಡುಗಳನ್ನು ಅವರ ಖರ್ಚಿನಲ್ಲಿ ಮಾಡಿಸಲು ಕಟ್ಟಡದ ಮಾಲೀಕರನ್ನು ಕೋರುವಂತೆ ಉಪನೋಂದಣಾಧಿಕಾರಿಗಳಿಗೆ ಸೂಚಿಸಬಹುದಾಗಿದೆ ಹಾಗೂ ಬಾಕಿ ಇರುವ ಬಾಡಿಗೆ ಮೊತ್ತವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎಂದು ಸೂಚಿಸಿದರು.

* ಕುಡಿಯುವ ನೀರಿನ ವ್ಯವಸ್ಥೆ, ಕಾಯುವ ಕೊಠಡಿ, ಸಹಾಯವಾಗಿ ಕೇಂದ್ರ, ಮಾಹಿತಿ ಸೂಚನಾ ಫಲಕಗಳ ವ್ಯವಸ್ಥೆ ಮಾಡುವುದು

* ಕಚೇರಿ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ (ಪುರುಷ ಮತ್ತು ಮಹಿಳೆಯರಿಗೆ) ಶೌಚಾಲಯ ವ್ಯವಸ್ಥೆ, ಕಚೇರಿಯಲ್ಲಿ ಸಾರ್ವಜನಿಕರಿಗೆ ಕೆಫೆಟೇರಿಯಾ ವ್ಯವಸ್ಥೆ ಕಲ್ಪಿಸುವುದು.

* ಚಿಕ್ಕಮಕ್ಕಳ ತಾಯಂದಿರಿದ್ದಲ್ಲಿ ತಾಯಿ ಮಗುವಿಗೆ ಹಾಲುಣಿಸುವ ಪ್ರತ್ಯೇಕ ವ್ಯವಸ್ಥೆ ಮತ್ತು ಸಣ್ಣ ಮಕ್ಕಳಿಗೆ ಪ್ಲೆ ಏರಿಯಾ ಕಲ್ಪಿಸುವುದು

* ಮಾದರಿ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ರ್ಯಾಂಪ್ ವ್ಯವಸ್ಥೆ ಮತ್ತು ವಿಕಲಚೇತನರಿಗೆ ವೀಲ್ ಚೇರ್ ಕಲ್ಪಿಸುವಂತೆ ಸೂಚಿಸಲಾಯಿತು.

* ಮಾದರಿ ಉಪನೋಂದಣಾಧಿಕಾರಿ ಕಚೇರಿ ನಿರ್ಮಿಸುವ ಕುರಿತು ನೋಡಲ್ ಅಧಿಕಾರಿಯನ್ನಾಗಿ ಚಿಕ್ಕಬಳ್ಳಾಪುರ ಜಿಲ್ಲಾ ನೋಂದಣಾಧಿಕಾರಿ ಶ್ರೀದೇವಿ ಅವರನ್ನು ಆಯ್ಕೆ ಮಾಡಲಾಗಿದೆ.

* ಮಾದರಿ ಉಪನೋಂದಣಿ ಕಚೇರಿಯನ್ನು ನಿರ್ಮಿಸಲು ಆಯ್ಕೆ ಆಗಿರುವ ಉಪನೋಂದಣಾಧಿಕಾರಿ ಕಚೇರಿಗಳ ಕಾಮಗಾರಿಯನ್ನು ಡಿಸೆಂಬರ್ 2022 ಒಳಗಾಗಿ ಪೂರ್ಣಗೊಳಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.

Related News

spot_img

Revenue Alerts

spot_img

News

spot_img