ಬೆಂಗಳೂರು, ನ. 11: ಕೃಷಿ ಭೂಮಿ, ನಿವೇಶನ ಸೇರಿದಂತೆ ಭೂ ವ್ಯಾಜ್ಯಗಳಲ್ಲಿ ಪೊಲೀಸರು ಮೂಗು ತೂರಿಸಬಾರದು. ಪೊಲೀಸ್ ಠಾಣೆಗಳನ್ನು ರಿಯಲ್ ಎಸ್ಟೇಟ್ ಇತ್ಯರ್ಥ ಕೇಂದ್ರಗಳನ್ನಾಗಿ ಮಾಡಬಾರದು ಎಂದು 2018 ರಲ್ಲಿಯೇ ಪೊಲೀಸ್ ಮಹಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಆದರೂ ಸಹ ಪೊಲೀಸರು ಕೆಲವೊಮ್ಮೆ ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯ ಪ್ರವೇಶಿಸಿ ಇತ್ಯರ್ಥ ಪಡಿಸುವ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವೊಮ್ಮೆ ಪೊಲೀಸರನ್ನು ಬುಕ್ ಮಾಡಿಕೊಳ್ಳುವ ಆರೋಪಗಳು ಕೇಳಿ ಬರುತ್ತಿವೆ.
ಕೃಷಿ, ಕೃಷಿಯೇತರ ಭೂಮಿ, ಕಟ್ಟಡ,ನಿವೇಶನ ವಿಚಾರದಲ್ಲಿ ದಿನ ನಿತ್ಯ ವಿವಾದಗಳು ಉಂಟಾಗುತ್ತಲೇ ಇವೆ. ದೂರುಗಳ ಸಂಖ್ಯೆಯೂ ಹೆಚ್ಚುತ್ತಿವೆ. ಸಾಮಾನ್ಯವಾಗಿ ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ನ್ಯಾಯಾಲಯದ ಮೂಲಕವೇ ಇತ್ಯರ್ಥ ಪಡಿಸಿಕೊಳ್ಳಬೇಕು. ಕೋರ್ಟ್ ಗಳಲ್ಲಿ ನ್ಯಾಯದಾನ ವಿಳಂಬ ಕಾರಣಕ್ಕೆ ಪೊಲೀಸ್ ಠಾಣೆಗಳ ಮೊರೆ ಹೋಗುವುದು ಸಹಜ.
ಇಂತಹ ಸಂದರ್ಭ ಬಳಿಸಿಕೊಂಡು ಪೊಲೀಸ್ ಅಧಿಕಾರಿಗಳು ದೊಡ್ಡ ಪ್ರಮಾಣದ ಅಕ್ರಮ ಸಂಭಾವನೆ ಪಡೆಯುತ್ತಾರೆ ಎಂಬ ಅರೋಪಗಳು ಕೇಳಿ ಬರುತ್ತಲೇ ಇವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕೃಷಿ, ಕೃಷಿಯೇತರ ಭೂಮಿ, ನಿವೇಶನ, ಕಟ್ಟಡ ವ್ಯಾಜ್ಯಗಳಲ್ಲಿ ಪೊಲೀಸರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಮಾರ್ಗಸೂಚಿಗಳನ್ನು ಪೊಲೀಸರು ಕಡ್ಡಾಯವಾಗಿ ಪಾಲಿಸಬೇಕು. ಈ ಮಾರ್ಗಸೂಚಿಗಳು ಸಾರ್ವಜನಿಕರು ತಿಳಿದುಕೊಂಡಲ್ಲಿ ಪೊಲೀಸರು ಅನಾವಶ್ಯಕವಾಗಿ ಸಿವಿಲ್ ವ್ಯಾಜ್ಯಗಳಲ್ಲಿ ಮೂಗು ತೋರಿಸಿದರೆ ಅದನ್ನು ಸಾರ್ವಜನಿಕರು ಪ್ರಶ್ನಿಸಬಹುದು. ಹೀಗಾಗಿ ಈ ಮಾರ್ಗಸೂಚಿಗಳನ್ನು ಇಲ್ಲಿ ವಿವರಿಸಲಾಗಿದೆ.
ಕೃಷಿ ಭೂಮಿ ಮಾಲೀಕತ್ವ ಮತ್ತು ಪೊಲೀಸರ ರಕ್ಷಣೆ :
ಕೃಷಿ ಭೂಮಿ ಮಾಲೀಕತ್ವ ಮತ್ತು ಸ್ವಾಧೀನತೆ ಹಕ್ಕು ಆಯಾ ಜಮೀನಿಗೆ ಸಂಬಂಧಿಸಿದಂತೆ ಹಕ್ಕು ಪತ್ರಗಳಲ್ಲಿ ( ರೆಕಾರ್ಡ್ ಆಫ್ ರೈರ್ಟ್ಸ್ ) ನಲ್ಲಿ ನಿಖರವಾಗಿ ನಮೂದಾಗಿರುತ್ತದೆ. ಪ್ರತಿಯೊಂದು ಜಮೀನಿಗೆ ಸಂಬಂಧಿಸಿದ ಹಕ್ಕು ದಾಖಲೆಗಳನ್ನು ಕರ್ನಾಟಕ ಭೂ ಕಂದಾಯ ಅಧಿನಿಯಮ 1966 ನಿಯಮ 62 ಅಡಿ ಸಂಬಂಧಪಟ್ಟ ತಹಶೀಲ್ದಾರರು ನಮೂನೆ 16 ರಲ್ಲಿ ನಿರ್ವಹಿಸಿರುತ್ತಾರೆ. ಭೂ ಮಾಲೀಕತ್ವ ಅಂಕಣ 10 ರಲ್ಲಿ ಭೂಮಿಯ ಸ್ವಾಧೀನತೆ ಅಂಕಣ 12 ರಲ್ಲಿ ನಮೂದಿಸಲಾಗಿರುತ್ತದೆ.
ಹೀಗಾಗಿ ಪೊಲೀಸರು ಭೂ ದಾಖಲೆ ಪತ್ರಗಳಲ್ಲಿ ಮತ್ತು ಖಾತಾ ಬದಲಾವಣೆ ರಿಜಿಸ್ಟರ್ ನಲ್ಲಿ ಅಥವಾ ಪಟ್ಟ ಪುಸ್ತಕದಲ್ಲಿ ನಮೂದಾಗಿರುವ ವಿಷಯಗಳು ಸುಳ್ಳು ಎಂದು ಖಡಾ ಕಂಡಿತವಾಗಿ ಸಿದ್ದವಾಗುವ ವರೆಗೂ ಭೂ ದಾಖಲೆಯಲ್ಲಿ ನಮೂದಾಗಿರುವ ಅಂಶಗಳನ್ನು ಸತ್ಯ ಎಂದು ಪೊಲೀಸರು ಭಾವಿಸಬೇಕು. ಭೂ ದಾಖಲೆಗಳಲ್ಲಿ ಭು ಮಾಲೀಕತ್ವ ಮತ್ತು ಸ್ವಾಧೀನದಲ್ಲಿರುವರಿಗೆ ಯಾವುದೇ ತೊಂದರೆ ಕೊಡುವಂತಿಲ್ಲ.
ಹೀಗಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ 1966 ರ ಅಡಿಯಲ್ಲಿ ನಮೂದಿಸಿರುವ ಕಲಂಗಳ ಪ್ರಕಾರ ಕೃಷಿ ಭುಮಿಗೆ ಸಂಬಂಧಪಟ್ಟ ಮಾಲೀಕತ್ವ ಮತ್ತು ಸ್ವಾಧೀನತೆಯನ್ನು ಈ ಭೂಮಿಗೆ ಸಂಬಂಧಪಟ್ಟ ವ್ಯಕ್ತಿಯ ಹೆಸರು ನಮೂನೆ 16 ರಲ್ಲಿರುವ ಭೂ ದಾಖಲೆ ಹಕ್ಕು ಪತ್ರದಲ್ಲಿ ಅಂಕಣ 10, 12 ರಲ್ಲಿ ಯಾರ ಹೆಸರು ಇರುತ್ತದೆಯ ಅವರಿಗೆ ಮಾತ್ರ ಕೃಷಿ ಜಮೀನಿಗೆ ಸಂಬಂಧಿಸಿದಂತೆ ಪೊಲಿಸರು ರಕ್ಷಣೆ ನೀಡಬೇಕು.
ಭೂ ಸುಧಾರಣೆ ಅಧಿನಿಯಮ 1974 ಜಾರಿಗೆ ಬಂದ ನಂತರ ಕರ್ನಾಟಕ ರಾಜ್ಯದಲ್ಲಿ ಯಾವುದೇ ರೀತಿಯ ಹಿಡುವಳಿ ಗೇಣಿ, ಬೆಳೆ ಹಂಚಿಕೊಳ್ಳುವ ವ್ಯವಸ್ಥೆಗೆ ಮಾನ್ಯತೆ ಇರುವುದಿಲ್ಲ. ಆದ್ದರಿಂದ ಯಾವುದೇ ಗೇಣಿ ವ್ಯವಸ್ಥೆ ಅಥವಾ ಬೆಳೆ ಹಂಚಿಕೊಳ್ಳುವ, ಇತರೆ ಯಾವುದೇ ರೀತಿಯ ಸ್ವಾಧೀನತೆಯನ್ನು ಆ ಭೂಮಿಯ ಮಾಲೀಕನಲ್ಲದೇ ಬೇರೆ ಯಾರೂ ಹೊಂದುವ ಅವಕಾಶ ಇರುವುದಿಲ್ಲ. ಆದ್ದರಿಂದ ಪೊಲಿಸ್ ಠಾಣೆಯಲ್ಲಿ ಪ್ರಭಾರದಲ್ಲಿರುವ ಅಧಿಕಾರಿಗಳು ಕೃಷಿ ಭೂಮಿಗೆ ಸಂಬಂಧಿಸಿದಂತೆ ವಿವಾದ ಉದ್ಭವಿಸಿದರೆ, ಹಕ್ಕುಪತ್ರಗಳ ಪ್ರಕಾರ ಅಂಕಣ 10, 12 ರಲ್ಲಿ ನಮೂದಾಗಿರುವ ವ್ಯಕ್ತಿ ಭೂಮಿಯನ್ನು ಶಾಂತರೀತಿಯಲ್ಲಿ ಅನುಭವಿಸಲು ಪೊಲೀಸರು ಅವಕಾಶ ಮಾಡಿಕೊಡಬೇಕು.
ಕೃಷಿ ಭೂಮಿಗೆ ಸಂಬಂಧಿಸಿದಂತೆ ಯಾವುದೇ ಮುಕ್ತಿಯಾರು ಪತ್ರ ( ಜನರಲ್ ಪವರ್ ಆಫ್ ಅಟಾರ್ನಿ) ಮಾರಾಟ ಒಪ್ಪಂದ ಕರಾರು ಪತ್ರ ಅಥವಾ ಭೂಮಿಯನ್ನು ಖರೀದಿಸಲು ಮುಂಗಡವಾಗಿ ಹಣ ನೀಡಿದ ದಾಖಲೆ ಪತ್ರಗಳನ್ನು ಹಾಜರು ಪಡಿಸಿ ಸ್ವಾಧೀನ ಕೊಡಿಸುವಂತೆ ನೀಡುವ ದೂರುಗಳನ್ನು ಪೊಲೀಸರು ಸ್ವೀಕರಿಸಬಾರದು. ಯಾವುದೇ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಇಂತಹ ದಾಖಲೆ ಹಾಜರು ಪಡಿಸಿದರೆ ಅವರಿಗೆ ಸೂಕ್ತ ಸಲಹೆ ನೀಡಿ ಅವರು ಕಂದಾಯ ಅಧಿಕಾರಿಗಳನ್ನು ಭೇಟಿ ಮಾಡಿ ಸಂಬಂಧಪಟ್ಟ ಭೂಮಿಯ ಖಾತೆ ಬದಲಾವಣೆಗೆ ಹಿಂಬರ ನೀಡಬಹುದು. ವಿನಃ ಭೂ ಸ್ವಾಧೀನತೆಯನ್ನು ಕೊಡಿಸಲು ಪ್ರಯತ್ನಿಸಬಾರದು. ಕಂದಾಯ ಇಲಾಖೆ ಅಧಿಕಾರಿಗಳು ಖಾತೆ ಬದಲಾವಣೆ ಮಾಡಿಕೊಟ್ಟು ಆ ದಾಖಲೆಗಳ ಪ್ರಮಾಣೀಕೃತ ದಾಖಲೆ ನೀಡಿದರೆ ಮಾತ್ರ ಅಂತಹ ಸಂದರ್ಭದಲ್ಲಿ ನೊಂದವರಿಗೆ ಪೊಲೀಸರು ರಕ್ಷಣೆ ನೀಡಬಹುದು. ಆದರೆ, ಭೂ ಮಾಲೀಕತ್ವ, ಸ್ವಾಧೀನತೆ ಸಂಬಂಧಿಸಿದ ವಿವಾದಗಳನ್ನು ಕಂದಾಯ ಅಧಿಕಾರಿಗಳು ಹೊರತು ಪಡಿಸಿ ವಿಚಾರಣೆ ನಡೆಸುವ ಅಧಿಕಾರ ಬೇರೆ ಯಾವುದೇ ಇಲಾಖೆಯ ಅಧಿಕಾರಿಗಳಿಗೆ ಇರುವುದಿಲ್ಲ ಎಂಬ ವಿಚಾರ ಸಾರ್ವಜನಿಕರು ಅರಿತಿರಬೇಕು.
ಜಿಪಿಎ ಮತ್ತು ಸೇಲ್ ಡೀಡ್ ಗೆ ಸ್ವಾಧೀನತೆ :
ಆಸ್ತಿಯ ಖರೀದಿ ಸಂಬಂಧ ಯಾವುದೇ ವ್ಯಕ್ತಿ ಜಿಪಿಎ ಅಥವಾ ಸೇಲ್ ಡೀಡ್ , ಇನ್ನಿತರೆ ಮುಂಗಡ ಹಣ ಕೊಟ್ಟು ಒಪ್ಪಂದ ಮಾಡಿಕೊಂಡಿರುವ ಸಂಬಂಧ ವಿವಾದ ಉಂಟಾಗಿ ಪೊಲೀಸರಿಗೆ ದೂರು ನೀಡಿದರೆ, ಭೂ ದಾಖಲೆಗಳಲ್ಲಿ ಹಕ್ಕು ಹೊಂದಿರುವ ಜಮೀನುದಾರನನ್ನು ಸ್ವಾಧೀನತೆಯಿಂದ ಪೊಲೀಸರು ಹೊರ ಹಾಕುವಂತಿಲ್ಲ. ಒಂದು ವೇಳೆ ಸೇಲ್ ಡೀಡ್, ಜಿಪಿಎ ಪುರಸ್ಕರಿಸಿ ಪೊಲೀಸರು ಕುಮ್ಮಕ್ಕು ನೀಡಿದರೆ, ಜಮೀನು ಸ್ವಾಧೀನತೆ ಬಿಟ್ಟು ಕೊಡುವಂತೆ ಮಾಡಿದರೆ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಮೇಲಾಧಿಕಾರಿಗಳಿಗೆ ಅಥವಾ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಬಹುದು. ಕರ್ತವ್ಯ ಲೋಸಲು ಅವಕಾಶವಿದೆ.
ಕೃಷಿ ಭೂಮಿಗೆ ಸಂಬಂಧಿಸಿದಂತೆ ಯಾವುದೇ ಒಂದು ನ್ಯಾಯಾಲಯ ನಿಖರ ತೀರ್ಪು ನೀಡಿದರೆ ಅಥವಾ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಅಂತಹ ಆದೇಶವನ್ನು ಯಾವುದೇ ವ್ಯಕ್ತಿ ಪೊಲೀಸರ ಮುಂದೆ ಹಾಜರು ಪಡಿಸಿದಾಗ, ಆ ಆದೇಶವನ್ನು ಸಂಬಂಧಪಟ್ಟ ತಹಶೀಲ್ದಾರರ ಮುಂದೆ ಹಾಜರು ಪಡಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಲಿಖಿತ ಸೂಚನೆಯನ್ನು ಪೊಲೀಸರಿಗೆ ನೀಡಬೇಕು. ಅಲ್ಲದೇ ಯಾವುದೇ ಪ್ರಕರಣದಲ್ಲಿ ಪೊಲೀಸರ ಮಾರ್ಗದರ್ಶನ ಬೇಕು ಎಂದೆನಿಸಿದರೆ, ಪೊಲೀಸ್ ಇಲಾಖೆಯ ಸಾರ್ವಜನಿಕ ಅಭಿಯೊಗ ಸಹಾಯಕರ ನಿರ್ದೇಶಕರು, ಅಭಿಯೋಗ ಉಪ ನಿರ್ದೇಶಕರು, ಕಾನೂನು ಸಲಹೆಗಾರರ ಸಲಹೆ ಪಡೆದು ಅವರ ಸಲಹೆ ಮೇರೆಗೆ ಪೊಲೀಸರು ಕಾರ್ಯ ನಿರ್ವಹಿಸಬೇಕು ಎಂದು ಪೊಲೀಸರಿಗೆ ಮಾರ್ಗದರ್ಶನ ನೀಡಲಾಗಿದೆ.
ಕೃಷಿ ಭೂಮಿಗೆ ಸಂಬಂಧಿಸಿದಂತೆ ಪೊಲೀಸರು ಈ ಮೇಲಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪಾಲಿಸದಿದ್ದರೆ, ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ದೂರು ನೀಡಬಹುದು. ಅನಾವಶ್ಯಕ ರಿಯಲ್ ಎಸ್ಟೇಟ್ ವ್ಯಾಜ್ಯಗಳಲ್ಲಿ ಮೂಗು ತೋರಿಸಿ ಪೊಲೀಸರು ಎದುರುದಾರರಿಗೆ ಸಹಾಯ ನೀಡಿದರೆ, ಕಾನೂನು ವಿರುದ್ಧವಾಗಿ ಕಾರ್ಯ ನಿರ್ವಹಿಸಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅವಕಾಶವಿದೆ.