ಆಸ್ತಿ ಖರೀದಿ ವಿಚಾರದಲ್ಲಿ ಸಾರ್ವಜನಿಕ ತಿಳುವಳಿಕೆ (public notice) ಮಹತ್ವದ ಪಾತ್ರ ವಹಿಸುತ್ತದೆ. ಇದು ಆಸ್ತಿ ಖರೀದಿದಾರರನ್ನು ಮೋಸ ಹೋಗುವುದನ್ನು ತಪ್ಪಿಸುತ್ತದೆ. ಆಸ್ತಿ ಮಾರಾಟಗಾರರು ಕೆಲವೊಮ್ಮೆ ಮುಚ್ಚಿಟ್ಟಿರುವ ಅಂಶಗಳು ಖರೀದಿದಾರರು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಸಾರ್ವಜನಿಕ ತಿಳುವಳಿಕೆ ನೋಟಿಸ್, ಅದರ ಪ್ರಕ್ರಿಯೆ, ಅದರಿಂದ ಆಗುವ ಅನುಕೂಲ, ಇದಕ್ಕೆ ಇರುವ ಕಾನೂನು ಮಾನ್ಯತೆ ಬಗ್ಗೆ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.
ಸಾರ್ವಜನಿಕ ತಿಳುವಳಿಕೆ ಅಥವಾ ಪಬ್ಲಿಕ್ ನೋಟಿಸ್ ಎಂದರೆ ಇದು ಆಸ್ತಿಯೊಂದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ನೀಡುವ ತಿಳುವಳಿಕೆ ಸಂದೇಶ. ಒಂದು ಆಸ್ತಿಯನ್ನು ತೆಗೆದುಕೊಳ್ಳುವಾಗ ಖರೀದಿದಾರರು ಆ ಆಸ್ತಿಗೆ ಸಂಬಂಧಿಸಿದ ಹಕ್ಕು ಮತ್ತು ಬಾಧ್ಯತೆ ಮತ್ತಿತರ ವಿಚಾರ ತಿಳಿದುಕೊಳ್ಳುವ ಸಲುವಾಗಿ ವಕೀಲರ ಮುಖೇನ ಅಥವಾ ಅವರೇ ಪತ್ರಿಕಾ ಮಾಧ್ಯಮದಲ್ಲಿ ಅಥವಾ ಡಿಜಿಟಲ್ ಮಾಧ್ಯಮದಲ್ಲಿ ಪ್ರಚರಪಡಿಸಬಹುದಾಗಿದೆ. ಈ ರೀತಿ ಪ್ರಚುರ ಪಡಿಸುವುದರಿಂದ ಸಾರ್ವಜನಿಕರ ತಿಳುವಳಿಕೆಗೆ ಹೋಗುತ್ತದೆ.
ಈ ಸ್ವತ್ತಿಗೆ ಸಂಬಂದಿಸಿದಂತೆ ಪಿತ್ರಾರ್ಜಿತ ಹಕ್ಕು, ಪಾಲುದಾರಿಕೆ, ಸರ್ಕಾರಿ ಸಂಸ್ಥೆಗಳಿಂದ ಪಡೆದಿರುವ ಲೋನ್, ಅಟಾಚ್‌ಮೆಂಟ್, ಸರ್ಕಾರಕ್ಕೆ ಪಾವತಿಸಬೇಕಾದ ಭೂ ಕಂದಾಯ ಬಾಕಿ ಇನ್ನಿತರ ವಿಚಾರಗಳು ಸಂಬಂಧಪಟ್ಟವರು ನೋಟಿಸ್ ನೀಡಿದವರಿಗೆ ನಿಗದಿತ ಕಾಲಮಿತಿಯಲ್ಲಿ ತಿಳಿಸಬಹುದಾಗಿದೆ.
ಸಾರ್ವಜನಿಕ ತಿಳುವಳಿಕೆ ( ಪಬ್ಲಿಕ್ ನೋಟಿಸ್ ) ಕಾನೂನಿನ ಪ್ರಕಾರ ಕಡ್ಡಾವಾಗಿ ನಿಗದಿ ಪಡಿಸಿರುವ ಕ್ರಮವೇನಲ್ಲ. ಆದರೆ, ಈ ರೀತಿ ಮಾಡುವುದರಿಂದ ಖರೀದಿದಾರರು ಸ್ವತ್ತಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಗಳು ಸುಲಭವಾಗಿ ತಿಳಿಯಬಹುದು.
ತದನಂತರ ತಕರಾರುಗಳಿಗೆ ಸಂಬಂಧಿಸದಿಂತೆ ಕೂಲಂಕುಶವಾಗಿ ದಾಖಲೆಗಳನ್ನು ಪರಿಶೀಲಿಸಿ ಖರೀದಿದಾರರು ಮುಂದುವರೆಯಬಹುದು. ಆಸ್ತಿಗೆ ಸಂಬಂಧಿಸಿದ ಏನಾದರೂ ವಿವಾದಗಳು ಸಾರ್ವಜನಿಕ ತಿಳುವಳಿಕೆ ವೇಳೆ ಗೊತ್ತಾದ ಬಳಿಕ ಅದನ್ನು ಖರೀದಿ ಮಾಡುವವುದರಿಂದ ಹಿಂದೆ ಸರಿಯಬಹುದು. ಇಲ್ಲವೇ ಯಾವುದೇ ತಕರಾರು ಬರದೇ ಇದ್ದಲ್ಲಿ ಆಸ್ತಿಯನ್ನು ಧೈರ್ಯವಾಗಿ ಖರೀದಿ ಮಾಡಬಹುದು.
ಸಾಮಾನ್ಯವಾಗಿ ಕೆಲವರು ವಕೀಲರ ಮೂಲಕ ಸಾರ್ವಜನಿಕ ಗಮನಕ್ಕೆ ಪ್ರಚುರ ಪಡಿಸಿ ತಂಟೆ ತಕಾರರು ಇದ್ದರೆ ವಕೀಲರ ವಿಳಾಸಕ್ಕೆ ಸೂಕ್ತ ದಾಖಲೆ ತಲುಪಿಸಲು ಕೋರಿಕೊಂಡಿರುತ್ತಾರೆ. ಕೆಲವು ಸಾರ್ವಜನಿಕ ನೋಟಿಸ್ ಗಳು , ಏಳು ದಿನ, ಹದಿನೈದು ದಿನ, 21 ದಿನ, ತಮ್ಮ ಇಚ್ಛೆಯಂತೆ ನಿಗದಿ ಪಡಿಸುತ್ತಾರೆ.
ಒಂದು ವೇಳೆ ಯಾವುದೇ ಸ್ವತ್ತನ್ನು ಸಾರ್ವಜನಿಕ ತಿಳುವಳಿಕೆಎ ನಿಗದಿ ಪಡಿಸಿದ ಸಮಯದಲ್ಲಿ ಯಾವುದೇ ತಕರಾರು ಬಾರದಿದ್ದರೆ, ಯಾವುದೇ ತಕರಾರು ಇಲ್ಲ ಎಂದು ಪರಿಗಣಿಸಿ ಖರೀದಿ ದಾರರು ಆ ಸ್ವತ್ತನ್ನು ಖರೀದಿಸುತ್ತಾರೆ. ಆದಾಗ್ಯೂ ಸಹ ಕೆಲವೊಮ್ಮೆ ಖರೀದಿಯಾದ ನಂತರ ಕೆಲವು ತಕಾರರು ಅಥವಾ ಸಮಸ್ಯೆ ಉದ್ಭವವಾಗಬಹುದು.
ಸಾರ್ವಜನಿಕರ ಗಮನಕ್ಕೆ ಸ್ವತ್ತುಗಳ ಬಗ್ಗೆ ತಿಳಿಸಿದ ನಂತರ, ನಿಗದಿ ಪಡಿಸಿದ ಸಮಯ ಮುಗಿದ ಬಳಿಕ ಸ್ವತ್ತುಗಳು ತಕರಾರಿಗೆ ಒಳಪಡುವುದಿಲ್ಲ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ಇದು ಆಸ್ತಿ ಖರೀದಿದಾರರಿಗೆ ಎಚ್ಚರಿಕೆ ಗಂಟೆ ಹೊರತು ಬೇರೇನೂ ಇಲ್ಲ.ಸಾರ್ವಜನಿಕ ನೋಟಿಸಿನ ನಂತರ ಸ್ವತ್ತುಗಳನ್ನು ಖರೀದಿ ಮಾಡಿದಾಗ ಖರೀದಿ ಮಾಡಿದ ಬಳಿಕ ತಕರಾರು ಬಂದರೆ, ಖರೀದಿದಾರರಿಗೆ ಅವರನ್ನು ಸಮರ್ಥಿಸಿಕೊಳ್ಲಲು ಇದನ್ನು ನ್ಯಾಯಾಲಯದಲ್ಲಿ ಒಂದು ಅಸ್ತ್ರವಾಗಿ ಬಳಸಬಹುದು ವಿನಃ ಪರಿಪೂರ್ಣವಲ್ಲ
ಸಾಮಾನ್ಯವಾಗಿ ಎಲ್ಲಾ ಸ್ವತ್ತುಗಳಿಗೆ ಸಾರ್ವಜನಿಕ ನೋಟಿಸ್ ನೀಡಿ ತದನಂತರ ಖರೀದಿ ಪ್ರಕ್ರಿಯೆ ಮಾಡುವುದು ಸೂಕ್ತ. ಅದಾಗ್ಯೂ ಪ್ರಚಲಿತದಲ್ಲಿ ದೊಡ್ಡ ದೊಡ್ಡ ನಗರ ಪ್ರದೇಶದಲ್ಲಿ ಅಥವಾ ಹೆಚ್ಚು ಮೌಲ್ಯ ಇರುವ ಸ್ವತ್ತುಗಳಿಗೆ ಅಕ್ಕ ಪಕ್ಕದವರಿಗೆ ಆಯಾ ಕುಟುಂಬದ ಬಗ್ಗೆ ಪೂರ್ಣ ವಿಚಾರ ತಿಳಿದಿರುವುದರಿಲ್ಲ. ಕೆಲವೊಮ್ಮೆ ಮಾರಾಟಗಾರರು ಕೆಲವು ಅಂಶಗಳನ್ನು ಮುಚ್ಚಿರುವ ಸಾಧ್ಯತೆಯಿರುತ್ತದೆ. ಮತ್ತೆ ಕೆಲವೊಮ್ಮೆ ಆಸ್ತಿಯ ವಾರಸುದಾರರ ಮಾಹಿತಿ ಮುಚ್ಚಿಡುವ ಸಾಧ್ಯತೆಯಿದೆ. ಇನ್ನೂ ಲೋನ್ ಬಗ್ಗೆ ಮಾಹಿತಿ ಮುಚ್ಚಿಡಬಹುದು. ಸರ್ಕಾರದ ಸ್ವಾಧೀನಕ್ಕೆ ಒಳಪಡ್ಟಿರುವ ವಿಚಾರ ಮುಚ್ಚಿಟ್ಟರಬಹುದು. ಹೀಗಾಗಿ ನಗರ ಪ್ರದೇಶದಲ್ಲಿ ಪಬ್ಲಿಕ್ ನೋಟಿಸ್ ಕೊಡುವುದರಿಂದ ಅವರುಗಳಿಗೆ ಸಂಬಂಧಿಸಿದ ವಿವಾದಗಳು ತಕರಾರುಗಳನ್ನು ತಿಳಿಯಬಹುದಾಗಿದೆ.