ಆದಾಯ ತೆರಿಗೆ ಕಾಯಿದೆ 1961 ರ ಪ್ರಕಾರ ಯಾವುದೇ ವಾಣಿಜ್ಯ ಕಟ್ಟಡ, ಸಿನಿಮಾ ಮಂದಿರ, ಬಾಡಿಗೆ ಮನೆ, ಇತರೆ ಯಾವುದೇ ಕಟ್ಟಡದಿಂದ ಆದಾಯ ಬರುತ್ತಿದ್ದರೆ ಅದಕ್ಕೂ ಆದಾಯ ತೆರಿಗೆ ಕಡ್ಡಾಯವಾಗಿ ಪಾವತಿ ಮಾಡಲೇಬೇಕು. ಬಾಡಿಗೆ ಮನೆಗೆ ಕಟ್ಟಡಗಳಿಂದ ಬರುವ ಆದಾಯಕ್ಕೆ ತೆರಿಗೆ ಪಾವತಿ ಮಾಡುವರಿಗೆ ಈ ಕೆಳಗಿನ ಕಾನೂನುಗಳು ಗೊತ್ತಿರಲೇಬೇಕು.
ಆದಾಯ ತೆರಿಗೆ:
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕಾದ ವಂತಿಗೆಯನ್ನು ಆದಾಯ ತೆರಿಗೆ ಎಂದು ಕರೆಯುತ್ತೇವೆ. ವೇತನ, ವ್ಯಾಪಾರ ಸೇರಿದಂತೆ ಈ ಕಾಯ್ದೆ ಅಡಿ ಮಿತಿಗೊಳಿಸಿರುವ ಆದಾಯ ಮಿರಿ ಗಳಿಸುವ ಸಂಪತ್ತಿಗೆ ವಿಧಿಸುವ ತೆರಿಗೆಯನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾವತಿ ಮಾಡಲೇಬೇಕು. ಸರ್ಕಾರ ಬಲವಂತದ ಕ್ರಮದ ಮೂಲಕ ತೆರಿಗೆಯನ್ನು ಕಟ್ಟಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ತೆರಿಗೆ ವಂಚಿಸಿದರೆ ಅಥವಾ ತೆರಿಗೆ ಕಟ್ಟದೇ ನುಣುಚಿಕೊಂಡರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕಟ್ಟಡಗಳಿಂದ ಬರುವ ಆದಾಯಯದ ಮೇಲೆ ತೆರಿಗೆ:
ಭಾರತಕ್ಕೆ ಅನ್ವಯಿಸುವ ಆದಾಯ ತೆರಿಗೆ ಕಾಯಿದೆ 1961 ರ ಅಡಿಯಲ್ಲಿ ಬಾಡಿಗೆ ಕಟ್ಟಡಗಳಿಂದ ಬರುವ ಆದಾಯಕ್ಕೆ ಸಹ ಕಟ್ಟಡದ ಮಾಲೀಕರು ಕಡ್ಡಾಯವಾಗಿ ತೆರಿಗೆ ಪಾವತಿಸಬೇಕು. ವಸತಿ ಉದ್ದೇಶದ ಮನೆಗಳು, ಸಿನಿಮಾ ಹಾಲ್, ಅಪಾರ್ಟ್‌ಮೆಂಟ್, ವಾಣಿಜ್ಯ ಕಟ್ಟಡ, ಯಾವುದೇ ಕಟ್ಟಡಗಳಿಂದ ಆದಾಯ ಬರುತ್ತಿದ್ದರೆ ಕಟ್ಟಡದ ಮಾಲೀಕರು ಪ್ರತಿ ವರ್ಷ ಆದಾಯವನ್ನು ಘೋಷಣೆ ಮಾಡಿಕೊಳ್ಳಬೇಕು. ಜತೆಗೆ ಆದಾಯ ತೆರಿಗೆಯನ್ನೂ ಪಾವತಿಸಬೇಕು.
ಆದಾಯ ತೆರಿಗೆ ಲೆಕ್ಕಾಚಾರ:
ಯಾವುದೇ ಒಂದು ಮನೆಯಿಂದ ವಾರ್ಷಿಕ ಬರುವ ಬಾಡಿಗೆಯನ್ನು ಒಟ್ಟು ಆದಾಯ ಎಂದು ಪರಿಗಣಿಸಲಾಗುತ್ತದೆ. ಆದರೆ, ಬಾಡಿಗೆಯಿಂದ ಬರುವ ಎಲ್ಲಾ ವರಮಾನಕ್ಕೆ ಆದಾಯ ತೆರಿಗೆ ಪಾವತಿ ಮಾಡಲು ಬರುವುದಿಲ್ಲ. ಬಾಡಿಗೆ ಕಟ್ಟಡಕ್ಕೆ ಪಾವತಿ ಮಾಡಿರುವ ನೀರಿನ ತೆರಿಗೆ ಹಾಗೂ ಮುನಿಸಿಪಲ್ ತೆರಿಗೆ ಇನ್ನಿತರ ತೆರಿಗೆಗಳನ್ನು ಕಡಿತ ಮಾಡಬೇಕಾಗುತ್ತದೆ. ಕಟ್ಟಡದಿಂದ ವಾರ್ಷಿಕ ಬರುವ ಬಾಡಿಗೆ ರೂಪದ ಆದಾಯದಲ್ಲಿ ವಾರ್ಷಿಕವಾಗಿ ಪಾವತಿ ಮಾಡಿದ ತೆರಿಗೆಗಳನ್ನು ಕಡಿತ ಮಾಡಬೇಕು.
ಇದಾದ ಬಳಿಕ ಕಟ್ಟಡದಿಂದ ಒಟ್ಟಾರೆಯಾಗಿ ಬಂದ ಆದಾಯದಲ್ಲಿ ಸೆಕ್ಷನ್ 24(A) ಪ್ರಕಾರ ಶೇ. 30 ರಷ್ಟು ಆದಾಯವನ್ನು ಕಟ್ಟಡ ನಿರ್ವಹಣಾ ವೆಚ್ಚವನ್ನು ಕಡಿತ ಮಾಡಬೇಕು.
ಸದರಿ ಬಾಡಿಗೆ ಕಟ್ಟಡ ನಿರ್ಮಾಣಕ್ಕಾಗಿ ಬ್ಯಾಂಕ್ ನಿಂದ ಲೋನ್ ಪಡೆದಿದ್ದಲ್ಲಿ ಆ ಲೋನ್ ಮೊತ್ತಕ್ಕೆ ಪಾವತಿ ಮಾಡಿದ ಬಡ್ಡಿಯನ್ನು ಸೆಕ್ಷನ್ 24(B) ಅಡಿಯಲ್ಲಿ ಕಡಿತ ಮಾಡಬೇಕು. ಆ ಬಳಿಕ ಉಳಿದ ಆದಾಯವನ್ನು ಮಾತ್ರ ಆದಾಯ ತೆರಿಗೆಗೆ ಪರಿಗಣಿಸಲಾಗುತ್ತದೆ.
ಒಂದು ಪ್ರಕರಣದ ವಿವರ:
ಸೋಮ ಎಂಬ ವ್ಯಕ್ತಿ ಒಂದು ಕಟ್ಟಡವನ್ನು ಹೊಂದಿದ್ದು ಮಾಸಿಕ 25000 ರೂ. ಬಾಡಿಗೆಯನ್ನು ಪಡೆಯುತ್ತಿದ್ದ. ಒಟ್ಟಾರೆ ವಾರ್ಷಿಯ ಆದಾಯ ( Gross Annual Value) – 12 ತಿಂಗಳು X 25,000 ರೂ. ಆದರೆ ವಾರ್ಷಿಕ ಆದಾಯ 3 ಲಕ್ಷ ರೂ. ಆಗುತ್ತದೆ.
ಅದರಲ್ಲಿ ಆಸ್ತಿ ತೆರಿಗೆ ವಾರ್ಷಿಕ 20,000 ರೂ.
ನಿವ್ವಳ ಆದಾಯ: 2.80,000 ರೂ.
ಕಟ್ಟಡದ ನಿರ್ವಹಣಾ ವೆಚ್ಚ ಕಡಿತ ಶೇ. 30 ರಷ್ಟು ಎಂದಾದಲ್ಲಿ 84,000 ರೂ.
ಕಟ್ಟಡದ ಮೇಲಿನ ಸಾಲಕ್ಕೆ ಪಾವತಿಸಿದ ಬಡ್ಡಿ ರೂ. 80,000 ರೂ.
ತೆರಿಗೆಗೆ ಒಳಪಡುವ ಮೊತ್ತ : 1.16,000 ರೂ.
ಇಲ್ಲಿ ಒಟ್ಟಾರೆ ವಾರ್ಷಿಕ ಆದಾಯ 05 ಲಕ್ಷ ರೂ. ಆದಾಯ ಒಳಗಿದ್ದರೆ, ಅದಕ್ಕೆ ಆದಾಯ ತೆರಿಗೆ ಪಾವತಿ ಮಾಡುವಂತಿಲ್ಲ. ಈ ಹಿಂದೆ ಇದರ ಮಿತಿಯನ್ನು 2.5 ರೂ.ಗೆ ಇತ್ತು. ಇದೀಗ ಅದರ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಇಲ್ಲಿ ಕಟ್ಟಡ ಮಾಲೀಕನಿಗೆ ವೇತನ ರೂಪದಲ್ಲಿ ಆದಾಯ ಬರುತ್ತಿದ್ದರೆ, ಅದೇ ವ್ಯಕ್ತಿಗೆ ಮನೆ ಬಾಡಿಗೆ ಬರುತ್ತಿದ್ದರೆ ಎರಡೂ ಆದಾಯವನ್ನು ಆದಾಯ ತೆರಿಗೆ ಇಲಾಖೆ ಮುಂದೆ ಘೋಷಣೆ ಮಾಡಬೇಕು ಎಂಬುದು ಗಮನಾರ್ಹ ವಿಚಾರ. ಒಂದು ವೇಳೆ ಬಾಡಿಗೆದಾರ ಬಾಡಿಗೆ ಪಾವತಿಸದೇ ಇದ್ದರೆ, ಅದನ್ನು ಆದಾಯ ಎಂದು ಪರಿಗಣಿಸಲಾಗದು. ಆದಾಯ ತೆರಿಗೆ ಇಲಾಖೆ ಪ್ರಾಧಿಕಾರ ಈ ಬಗ್ಗೆ ನಿರ್ಣಯ ಕೈಗೊಳ್ಳುತ್ತದೆ.