ರಿಲೀಸ್‌ಡೀಡ್ ಬಗ್ಗೆ ತಿಳಿಸಿಕೊಡಿ ಎಂದು ರೆವಿನ್ಯೂಫ್ಯಾಕ್ಟ್ ಓದುಗರೊಬ್ಬರು ಮನವಿ ಮಾಡಿದ್ದರು. ರಿಲೀಸ್ ಡೀಡ್ ಎಂದರೇನು ? ಅದನ್ನು ಹೇಗೆ ಮಾಡಿಸಬೇಕು? ಯಾಕೆ ಮಾಡಿಸಬೇಕು. ಇದಕ್ಕೆ ತಗಲುವ ಶುಲ್ಕವೆಷ್ಟು ? ಎಂಬ ಪ್ರಶ್ನೆಗಳಿಗೆ ವಿವರ ನೀಡಲಾಗಿದೆ ಎಂಬುದರ ಬಗ್ಗೆ ಸಮಗ್ರ ವಿವರ ಇಲ್ಲಿ ನೀಡಲಾಗಿದೆ.
ಹಕ್ಕು ಬಿಡುಗಡೆ ಪತ್ರ :
ಯಾವುದೇ ಒಂದು ಸ್ಥಿರ ಅಥವಾ ಚರಾಸ್ತಿ ಮೇಲೆ ವ್ಯಕ್ತಿಗೆ ಇರುವ ಹಕ್ಕನ್ನು ಬಿಡುಗಡೆ ಮಾಡುವ ಪ್ರಕ್ರಿಯೆಗೆ ಹಕ್ಕು ಬಿಡುಗಡೆ ಪತ್ರ ಎಂದು ಕರೆಯುತ್ತೇವೆ. ಯಾವುದೇ ವಂಶಸ್ತರು ಅಥವಾ ವ್ಯಕ್ತಿಗಳು ತಮ್ಮಲ್ಲಿರುವ ಪಿತ್ರಾರ್ಜಿತ ಹಕ್ಕು ( Inherited rights ) ಅಥವಾ ಜಂಟಿ ಹಕ್ಕು ( Co- ownership rights ) ಹಕ್ಕುಗಳನ್ನು ಬಿಟ್ಟುಕೊಡುವುದಕ್ಕೆ ಹಕ್ಕು ಬಿಡುಗಡೆ ಪತ್ರ ಎಂದು ಕರೆಯುತ್ತೇವೆ.
ಪಿತ್ರಾರ್ಜಿತ ಹಕ್ಕು( Inherited rights ):
ಪಿತ್ರಾರ್ಜಿತ ಹಕ್ಕು ಎಂದರೆ ವಂಶಪಾರಂಪರ್ಯವಾಗಿ ಬರುವ ಹಕ್ಕುಗಳು. ಉದಾಹರಣೆಗೆ ತಾತನ ಹೆಸರಿನಲ್ಲಿರುವ ಜಮೀನು ಇರುತ್ತದೆ. ತಾತ ನಿಧನರಾದ ನಂತರ ಮಕ್ಕಳು ಮೊಮ್ಮಕ್ಕಳಿಗೆ ಪಿತ್ರಾರ್ಜಿತ ಹಕ್ಕು ಬರುತ್ತದೆ. ಆಸ್ತಿ ಮೇಲಿರುವ ಹಕ್ಕನ್ನು ಪಿತಾರ್ಜಿತ ಆಸ್ತಿ ಎಂದು ಕರೆಯುತ್ತೇವೆ. ಪಿತಾರ್ಜೀತ ಹಕ್ಕು ಕೇವಲ ವಂಶಸ್ತರಿಗೆ ಸೀಮಿತವಾಗಿರುತ್ತದೆ. ಎರಡು ಮೂರು ತಲೆಮಾರು ಅಥವಾ ಹೆಚ್ಚು ತಲೆಮಾರು ಇರಬಹುದು.
ಜಂಟಿ ಹಕ್ಕು:
ಎರಡು ಅಥವಾ ಹೆಚ್ಚಿನ ವ್ಯಕ್ತಿಗಳು ಒಂದು ಆಸ್ತಿಯನ್ನು ಖರೀದಿಸಿದಾಗ ಜಂಟಿ ಹಕ್ಕು ಉಂಟಾಗುತ್ತದೆ. ಜಂಟಿ ಹಕ್ಕು ಯಾವುದೇ ಸಂಬಂಧದವರು ಆಗಿರಬಹುದು. ಮೇಲಿನ ಎರಡು ರೀತಿಯ ಹಕ್ಕುಗಳು ಯಾರಿಗೆ ಬೇಕೋ ಅವರಿಗೆ ಸ್ವತ್ತು ಅನುಭವಿಸಲು ಹಕ್ಕು ಬಿಡುಗಡೆ ಅಥವಾ ವಿಭಾಗ ಪತ್ರ ಮಾಡಿಕೊಳ್ಳಬಹುದು.
ಹಕ್ಕು ಬಿಡುಗಡೆ ಪತ್ರ: ಕರ್ನಾಟಕ ಮುದ್ರಾಂಕ ಕಾಯ್ದೆ ಆರ್ಟಿಕಲ್ 45 ಹಕ್ಕು ಬಿಡುಗಡೆ ಮುದ್ರಾಂಕ ಶುಲ್ಕದ ಬಗ್ಗೆ ಸೂಚಿಸುತ್ತದೆ. ಕುಟುಂಬದೊಳಗಿನ ಹಕ್ಕು ಬಿಡುಗಡೆಗೆ ನಿಗದಿತ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಇರುತ್ತದೆ. ಕುಟುಂಬ ಬಿಟ್ಟು ಬೇರೆಯವರಲ್ಲಿ ಹಕ್ಕು ಬಿಡುಗಡೆ ನಡೆದರೆ ಮಾರುಕಟ್ಟೆ ಮೌಲ್ಯದ ಮೇರೆಗೆ ಶೇ. 05 ರಷ್ಟು ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ 1 ರಷ್ಟು ಪಾವತಿಸಬೇಕಿರುತ್ತದೆ.
ವಿಭಾಗ ಪತ್ರ:
ಒಂದು ಆಸ್ತಿ ಮೇಲಿನ ಹಕ್ಕಿಗೆ ಸಂಬಂಧಿಸಿದಂತೆ ವಿಭಾಗ ಮಾಡಿಕೊಳ್ಳುವುದನ್ನು ವಿಭಾಗ ಪತ್ರ ಎಂದು ಕರೆಯುತ್ತೇವೆ. ಪಿತ್ರಾರ್ಜಿತ ಆಸ್ತಿ ಅಥವಾ ಜಂಟಿ ಹಕ್ಕು ಇರುವರು ಮಾತ್ರ ವಿಭಾಗ ಪತ್ರ ಮಾಡಿಕೊಳ್ಳಲು ಸಾಧ್ಯ.
ವಿಭಾಗಪತ್ರ ಕೇವಲ ವಂಶಸ್ತರು ಮಾತ್ರ ಮಾಡಿಕೊಳ್ಳಬೇಕು ಎಂಬ ಭಾವನೆ ಜನರಲ್ಲಿದೆ. ಆದ್ರೆ ವಾಸ್ತವದಲ್ಲಿ ಯಾರು ಬೇಕಾದರೂ ವಿಭಾಗ ಪತ್ರ ಮಾಡಿಕೊಳ್ಳಬಹುದು. ವಿಭಾಗ ಪತ್ರಕ್ಕೆ ಮುದ್ರಾಂಕ ಶುಲ್ಕ ಒಂದು ಭಾಗಕ್ಕೆ ಎಷ್ಟೇ ಆಸ್ತಿ ಇದ್ದರೂ ( ನಗರ ಪಾಲಿಕೆ, ನಗರ ಸಭೆ, ಪುರಸಭೆ ವ್ಯಾಪ್ತಿಯ ಆಸ್ತಿಗಳಿಗೆ ) ರೂ. 1 ಸಾವಿರ ರೂ. ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ 500 ರೂ. ಪಾವತಿಸಬೇಕು. ಕರ್ನಾಟಕ ಮುದ್ರಾಂಕ ಕಾಯ್ದೆ ಆರ್ಟಿಕಲ್ 39 ವಿಭಾಗ ಪತ್ರದ ಮುದ್ರಾಂಕ ಶುಲ್ಕದ ಬಗ್ಗೆ ಹೇಳುತ್ತದೆ. ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವತ್ತುಗಳಿಗೆ ಸಂಬಂಧಿಸಿದಂತೆ ವಿಭಾಗ ಪತ್ರ ಮಾಡಿಸಿಕೊಳ್ಳಲು 500 ರೂ. ಮುದ್ರಾಂಕ ಶುಲ್ಕ, 250 ರೂ. ನೋಂದಣಿ ಶುಲ್ಕ ಪಾವತಿಸಬೇಕು. ಕೃಷಿ ಭೂಮಿಯಾಗಿದ್ದರೆ, 250 ರೂ. ಮುದ್ರಾಂಕ ಶುಲ್ಕ 50 ನೋಂದಣಿ ಶುಲ್ಕ ರೂ. ಪಾವತಿಸಬೇಕಾಗುತ್ತದೆ.