ಸೆಪ್ಟೆಂಬರ್ 30ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ ಹೆಚ್ಚಿಸಿದ್ದರಿಂದ ರೆಪೊ ದರ ಶೇ 5.9ಕ್ಕೆ ಏರಿಕೆಯಾಗಿದೆ. ಇದರಿಂದ ಗೃಹ, ವಾಹನ ಸಾಲದ ಬಡ್ಡಿ ದರ ಏರಿಕೆಯಾಗಲಿರು. ಆದರೆ ರೆಪೊ ದರ ಹೆಚ್ಚಿಸಿರುವ ಆರ್‌ಬಿಐ ಕ್ರಮ ನಿರೀಕ್ಷಿತವಾಗಿದ್ದರಿಂದ ಮನೆಗಳ ಮಾರಾಟದ ಮೇಲೆ ತತ್‌ಕ್ಷಣ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ರಿಯಲ್ ಎಸ್ಟೇಟ್ ತಜ್ಞರ ಅಭಿಪ್ರಾಯ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಆಗಸ್ಟ್‌ನಲ್ಲಿ 50 ಬೇಸಿಸ್ ಪಾಯಿಂಟ್ ಏರಿಕೆ ಮಾಡಿದ್ದರಿಂದ ರೆಪೊ ದರ ಶೇ.5.4ಕ್ಕೆ ಏರಿತ್ತು. ಈ ವರ್ಷದಲ್ಲಿ ಸತತ ನಾಲ್ಕನೇ ಬಾರಿ ರೆಪೊ ದರವನ್ನು ಹೆಚ್ಚಿಸಲಾಗಿದೆ
ರೆಪೊ ದರ ಸತ ಏರಿಕೆಯಿಂದ ವಸತಿ ಕ್ಷೇತ್ರದಲ್ಲಿ ಆಗಬಹುದಾದ ಬದಲಾವಣೆ ಬಗ್ಗೆ ರಿಯಲ್ ಎಸ್ಟೇಟ್ ತಜ್ಷರು ಮಾತನಾಡಿದ್ದಾರೆ. ‘ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿದರವನ್ನು ಏರಿಸಲಾಗಿದೆ. ಇದರಿಂದ ಸಾಮಾನ್ಯ ಸಾಲದ ಬೇಡಿಕೆ ಹಾಗೂ ಗೃಹ ಸಾಲ ಹೆಚ್ಚಳದಿಂದ ಮನೆ ಮಾರಾಟ ವಿಚಾರದಲ್ಲಿ ನಿಧಾನಗತಿ ಆಗುವುದು ನಿರೀಕ್ಷಿತ. ಗೃಹ ಸಾಲ ತುಟ್ಟಿಯಾಗುವ ಸಾಧ್ಯತೆಯಿದೆ. ಇದರಿಂದ ಹಬ್ಬಗಳ ಸಂದರ್ಭದಲ್ಲಿ ಮನೆಗಳ ಮಾರಾಟದ ಮೇಲೆ ಪರಿಣಾಮ ಬೀರಬಹುದು. ಕಡಿಮೆ ಹಾಗೂ ಮಧ್ಯಮ ವೆಚ್ಚದ ಮನೆಗಳ ಮೇಲೆ ಪರಿಣಾಮ ಬೀರಬಹುದು‘ ಎಂದು ತಜ್ಞರು ವಿವರಣೆ ನೀಡಿದ್ದಾರೆ.
ಬಡ್ಡಿ ಹೆಚ್ಚಳದಿಂದ ವಹಿವಾಟಿಗೆ ಧಕ್ಕೆ ಆಗಲಿಕ್ಕಿಲ್ಲ ಎಂದು ಹೇಳುವ ತಜ್ಞರು, “ರೆಪೊ ದರವನ್ನು ನಿರಂತರವಾಗಿ ಹೆಚ್ಚಿಸುತ್ತ ಸಾಗುವುದು ಎಷ್ಟು ಸುಸ್ಥಿರ ಎಂಬ ಬಗ್ಗೆಯೂ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ. ದರ ಏರಿಕೆ ಮುಂದುವರಿದರೆ, ಮುಂದಿನ ವರ್ಷದಿಂದ ಅದು ವಹಿವಾಟಿನ ಮೇಲೆ ಹಾಗೂ ಅರ್ಥ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮವನ್ನು ಗಮನಿಸಬೇಕಾಗುತ್ತದೆ. ಹಣದುಬ್ಬರವನ್ನು ನಿಯಂತ್ರಿಸುವಾಗ ಆರ್ಥಿಕ ಬೆಳವಣಿಗೆ ಜೊತೆ ರಾಜಿಯಾಗದ ರೀತಿಯಲ್ಲಿ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಎಚ್ಚರಿಕೆ ವಹಿಸಬೇಕು,” ಎಂದು ಸಲಹೆ ನೀಡಿದ್ದಾರೆ.