16.4 C
Bengaluru
Thursday, February 6, 2025

ಭಾರತೀಯ ದತ್ತಾಂಶ ಕೇಂದ್ರಕ್ಕೆ ಬೇಕಿದೆ 70.8 ಲಕ್ಷ ಚದರ ಅಡಿ ಸ್ಥಳಾವಕಾಶ

ಹಣಕಾಸು, ಶಿಕ್ಷಣ, ಆರೋಗ್ಯ, ಮನರಂಜನೆ ಮತ್ತು ಸಗಟು ವ್ಯಾಪಾರ ಹಾಗೂ ಕ್ಲೌಡ್‌ ಸೇವಾದಾತರ ಭಾರಿ ಪ್ರಮಾಣದ ಬದ್ಧತೆಗಾಗಿ ದತ್ತಾಂಶಗಳ ಬಳಕೆ ಹೆಚ್ಚಳವಾಗುತ್ತಿರುವ ಕಾರಣ ಭಾರತೀಯ ದತ್ತಾಂಶ ಕೇಂದ್ರವು ಅಭೂತಪೂರ್ವ ಪ್ರಗತಿ ಕಾಣಲಿದೆ. ಅದಕ್ಕೆ ಅನುಗುಣವಾಗಿ ಅವುಗಳ ಕಾರ್ಯಾಚರಣೆಗೆ ಮುಂದಿನ ಎರಡೂವರೆ ವರ್ಷಗಳಲ್ಲಿ 70.8 ಲಕ್ಷ ಚದರ ಅಡಿ ಸ್ಥಳಾವಕಾಶದ ಅಗತ್ಯವೂ ಉಂಟಾಗಲಿದೆ. ಇದು 4.6 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಜಾಗತಿಕ ವಾಣಿಜ್ಯ ರಿಯಲ್‌ ಎಸ್ಟೇಟ್ ಸೇವಾ ಸಂಸ್ಥೆ ಜೆಎಲ್‌ಎಲ್‌ ತನ್ನ ವರದಿಯಲ್ಲಿ ತಿಳಿಸಿದೆ.

“ಎರಡೂವರೆ ವರ್ಷಗಳಲ್ಲಿ ಈ ಉದ್ಯಮವು 637 ಮೆಗಾವಾಟ್‌ಗಳಿಂದ 1318 ಮೆಗಾವಾಟ್‌ಗಳಿಗೆ ದ್ವಿಗುಣಗೊಳ್ಳಲಿದೆ” ಎಂದು ʻಡಾಟಾ ಸೆಂಟರ್ ಅಪ್ಡೇಟ್: 2022ರ ಮೊದಲ ಅರ್ಧʼ ವರದಿಯಲ್ಲಿ ಉಲ್ಲೇಖಿಸಿದೆ.

“ಈ ಸಂಭವನೀಯ ಬೇಡಿಕೆಯಲ್ಲಿ ಸಿಂಹಪಾಲು ಮುಂಬೈನದ್ದಾಗಿರಲಿದೆ. ಮುಂಬೈ ಒಂದರಲ್ಲೇ 40.6 ಲಕ್ಷ ಚದರ ಅಡಿ ಸ್ಥಳಾವಕಾಶಕ್ಕೆ ಬೇಡಿಕೆ ಬರಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಚೆನ್ನೈ (10.9 ಲಕ್ಷ ಚದರ ಅಡಿ), ದೆಹಲಿ-ಎನ್‌ಸಿಆರ್‌ (7 ಲಕ್ಷ ಚದರ ಅಡಿ) ಇರಲಿವೆ. ಆಡಳಿತಾತ್ಮಕ ಅನುಮೋದನೆ ಮತ್ತು ನಿರ್ಮಾಣ ಕಾರ್ಯಕ್ಕೆ ಸಮಯ ತಗುಲುವುದರಿಂದಾಗಿ ಪೂರ್ಣಪ್ರಮಾಣದ ದತ್ತಾಂಶ ಕೇಂದ್ರ ಕಾರ್ಯಾಚರಣೆಗೆ 3-4 ವರ್ಷಗಳು ಬೇಕಾಗುತ್ತವೆ. ಕೆಲವು ಕಂಪನಿಗಳು ತಾಂತ್ರಿಕ ಮಾನದಂಡಗಳನ್ನು ಅಳವಡಿಸಿಕೊಂಡು, ಈಗಾಗಲೇ ಅಸ್ತಿತ್ವದಲ್ಲಿರುವ ಕೈಗಾರಿಕಾ ಕಟ್ಟಡಗಳನ್ನೇ ದತ್ತಾಂಶ ಕೇಂದ್ರಗಳ ಕಾರ್ಯಾಚರಣೆಯ ಅಗತ್ಯಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳುತ್ತಿವೆ,” ಎಂದು ಜೆಎಲ್‌ಎಲ್‌ನ ಭಾರತ ವಿಭಾಗದ ಮುಖ್ಯ ಅರ್ಥಿಕ ತಜ್ಞ ಮತ್ತು ಸಂಶೋಧನಾ ಮುಖ್ಯಸ್ಥ ಶಮಂತಕ್‌ ದಾಸ್‌ ತಿಳಿಸುತ್ತಾರೆ.

2022ರ ದ್ವಿತೀಯಾರ್ಧದಿಂದ 2024ರ ಅವಧಿಯಲ್ಲಿ ಈ ನಿರೀಕ್ಷೆಯನ್ನು ಪೂರೈಸಲು ನವಿ-ಮುಂಬೈ ಪ್ರದೇಶದಲ್ಲಿ ವಿಸ್ತರಣೆಯ ಪ್ರಮುಖ ಪಾಲನ್ನು ಹೊಂದಿರುವ ಮುಂಬೈಗೆ 2.7 ಬಿಲಿಯನ್ ಅಮೆರಿನ್‌ ಡಾಲರ್‌ ಹೂಡಿಕೆ ಅಗತ್ಯವಿದೆ. ಚೆನ್ನೈನಲ್ಲಿ 1.1 ಬಿಲಿಯನ್ ಅಮೆರಿನ್‌ ಡಾಲರ್ ಹಾಗೂ ಎನ್‌ಸಿಆರ್-ದೆಹಲಿಯಲ್ಲಿ 0.6 ಬಿಲಿಯನ್‌ ಅಮೆರಿಕನ್‌ ಡಾಲರ್ ಹೂಡಿಕೆಯ ಅಗತ್ಯ ಉಂಟಾಗಲಿದೆ.

ಮುಂಚೂಣಿಯಲ್ಲಿ ಮುಂಬೈ:
“ಏಷ್ಯಾ ಪೆಸಿಫಿಕ್ ಮಾರುಕಟ್ಟೆಗಳ ಪೈಕಿ ಭಾರತೀಯ ದತ್ತಾಂಶ ಕೇಂದ್ರವು ಅತಿಹೆಚ್ಚು, ಅಂದರೆ ಶೇ 18ರಷ್ಟು ಪ್ರಗತಿ ದಾಖಲಿಸಿದೆ. 2021ರ ಅಂತ್ಯಕ್ಕೆ 500 ಮೆಗಾವಾಟ್ ಇದ್ದ ಪ್ರಮಾಣ 2022ರ ಜೂನ್‌ಗೆ 589 ಮೆಗಾವಾಟ್ಗೆ ತಲುಪಿದೆ. ಹೆಚ್ಚಳವಾದ 89 ಮೆಗಾವಾಟ್ನಲ್ಲಿ 58 ಮೆಗಾವಾಟ್ ಮುಂಬೈ ಪಾಲಾಗಿದೆ. ವಿದ್ಯುತ್ ಪೂರೈಕೆ ಖಾತ್ರಿ, ಕೇಬಲ್ ಲ್ಯಾಂಡಿಂಗ್, ಬಳಕೆದಾರರ ಬೃಹತ್ ಮಾರುಕಟ್ಟೆ ಹಾಗೂ ಪ್ರಕೃತಿ ವಿಕೋಪಗಳಿಂದ ಸುರಕ್ಷಿತವಾಗಿರುವ ಕಾರಣ ಮುಂಬೈ ನೆಚ್ಚಿನ ತಾಣವಾಗಿದೆ,” ಎಂದು ಜೆಎಲ್ಎಲ್‌ನ ಭಾರತೀಯ ಡಾಟಾ ಸೆಂಟರ್ ಅಡ್ವೈಸರಿಯ ಮುಖ್ಯಸ್ಥ ರಚಿತ್ ಮೋಹನ್ ಅಭಿಪ್ರಾಯಪಡುತ್ತಾರೆ.

2021ರ ಮೊದಲ ಆರು ತಿಂಗಳಲ್ಲಿ 47 ಮೆಗಾವಾಟ್‌ ದತ್ತಾಂಶ ಬಳಕೆ ಹೆಚ್ಚಳ ಉಂಟಾಗಿತ್ತು. ಅದಕ್ಕೆ ಹೋಲಿಸಿದರೆ ನಂತರದ ಆರು ತಿಂಗಳುಗಳಲ್ಲಿ ಭಾರಿ ಪ್ರಮಾಣದ (89 ಮೆಗಾವಾಟ್) ಹೆಚ್ಚಳ ಕಂಡುಬಂದಿದೆ. ದೊಡ್ಡ ಪ್ರಮಾಣದ ಬಳಕೆದಾರರು ಕ್ಲೌಡ್‌ ಸೇವೆಯತ್ತ ಮುಖಮಾಡಿದಾಗಿನಿಂದಲೂ ಮುಂಬೈ ಬೃಹತ್ (ಶೇ 65) ಪಾಲನ್ನು ತನ್ನದಾಗಿಸಿಕೊಂಡಿದೆ. ಉಳಿದಂತೆ ಪುಣೆ ಶೇ 10 ಮತ್ತು ಚೆನ್ನೈ ಶೇ 9 ರಷ್ಟು ಸೇವಾ ಪೂರೈಕೆಯಲ್ಲಿ ಪ್ರಗತಿ ಸಾಧಿಸಿವೆ.

Related News

spot_img

Revenue Alerts

spot_img

News

spot_img