ಬೆಂಗಳೂರು, ಸೆ. 20: ರಿಯಲ್ ಎಸ್ಟೇಟ್ ಕಂಪನಿಗಳು ಕೊಡುವ ಆಫರ್ ಗಳ ಪೂರ್ವ ಪರ ತಿಳಿದುಕೊಳ್ಳದೇ ಹೂಡಿಕೆ ಮಾಡಿದ್ರೆ ಜೀವನ ಪೂರ್ತಿ ಬಡ್ಡಿ ಕಟ್ಟಿಕೊಂಡು ಬದುಕಬೇಕಾಗುತ್ತದೆ. ರಿಯಲ್ ಎಸ್ಟೇಟ್ ಕಂಪನಿಗಳ ಅಣತಿಯಂತೆ ವರ್ತಿಸುವ ಬ್ಯಾಂಕುಗಳಲ್ಲಿ ಸಾರ್ವಜನಿಕರು ಸಾಲ ಮಾಡುವಾಗ ಎಚ್ಚರಿಕೆ ಹೆಜ್ಜೆ ಇಡಬೇಕು. ಸ್ವಲ್ಪ ಯಾಮಾರಿದರೆ ಸಮಸ್ಯೆ ಎದುರಾದೀತು. ಅಪಾರ್ಟ್ ಮೆಂಟ್ ನಲ್ಲಿ ಪ್ಲಾಟ್ ಖರೀದಿಸುವ ಆಸೆಯಿಂದ ಮಂತ್ರಿ ಡೆವಲಪರ್ಸ್ ಮಂತ್ರಿ ವೆಬ್ ಸಿಟಿ ಪ್ರಾಜೆಕ್ಟ್ ಮೇಲೆ ಹೂಡಿಕೆ ಮಾಡಿದ ಒಂದು ಸಾವಿರಕ್ಕೂ ಅಧಿಕ ಗ್ರಾಹಕರು ಇದೀಗ ನ್ಯಾಯ ಕೋರಿ ಠಾಣೆ ಮೆಟ್ಟಿಲೇರಿದ್ದಾರೆ. ಅಂದಹಾಗೆ ಮಂತ್ರಿ ಡೆವಲಪರ್ಸ್ ಮಾಡಿದ ಮಹಾ ಮೋಸದ ಅಸಲಿ ವರದಿಯನ್ನು revenuefacts.com ಇಲ್ಲಿ ದಾಖಲೆಗಳ ಸಮೇತ ನೀಡಿದೆ.
ಮಂತ್ರಿ ಡೆವಲಪರ್ಸ್ ಪ್ರಕರಣದ ಈಗಿನ ಸ್ಥಿತಿ: ರಾಜ್ಯದಲ್ಲಿ ಬಹುಖ್ಯಾತಿ ಪಡೆದಿರುವ ಮಂತ್ರಿ ಡೆವಲಪರ್ಸ್ ಮಂತ್ರಿ ವೆಬ್ ಸಿಟಿ ಯೋಜನೆಯಡಿ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಜನರಿಂದ ಹೂಡಿಕೆ ಮಾಡಿಸಿಕೊಂಡು ನಿಗದಿತ ಅವಧಿಗೆ ಪ್ಲಾಟ್ ನೀಡದೇ ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿದೆ. ಮಂತ್ರಿ ಡೆವಲಪರ್ಸ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ 12 ಎಫ್ಐಆರ್ ದಾಖಲಾಗಿವೆ. ಮಂತ್ರಿ ಡೆವಲಪರ್ಸ್ ವಿರುದ್ಧ ಜಾರಿ ನಿರ್ದೇಶನಾಲಯ ಸಹ ಕೇಸು ದಾಖಲಿಸಿಕೊಂಡು ಸುಮಾರು 300 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಮಂತ್ರಿ ಡೆವಲಪರ್ಸ್ ಅಕ್ರಮವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಸಿಐಡಿ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಿಐಡಿಯಿಂದ ಬಂಧನಕ್ಕೆ ಒಳಗಾಗಿದ್ದ ಪ್ರತೀಕ್ ಮಂತ್ರಿ ಮತ್ತು ಸುಶೀಲ್ ಮಂತ್ರಿ ಇತರರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಪ್ರಕರಣದ ತನಿಖೆ ಸ್ಥಗಿತಗೊಂಡಿದೆ.
2014 ಮಂತ್ರಿ ವೆಬ್ ಸಿಟಿ ಪ್ರಾಜೆಕ್ಟ್ : ಬೆಂಗಳೂರಿನ ಎರಡನೇ ಐಟಿ ಹಬ್ ಆಗಿ ರೂಪಾಂತರಗೊಳ್ಳುತ್ತಿರುವ ಹೆಣ್ಣೂರು ಬಳಿ ಮಂತ್ರಿ ಡೆವಲಪರ್ಸ್ ನಿಂದ 2014 ರಲ್ಲಿ ಮಂತ್ರಿ ವೆಬ್ ಸಿಟಿ ವಸತಿ ಯೋಜನೆ ಕೈಗೊಂಡಿತ್ತು. ಇದರ ಬಗ್ಗೆ ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹೀರಾತು ನೀಡಿತ್ತು. ಪ್ರೀ ಬುಕ್ಕಿಂಗ್ ಹೆಸರಿನಲ್ಲಿ ಸಾರ್ವಜನಿಕರ ಹೂಡಿಕೆಗೆ ಮಂತ್ರಿ ಡೆವಲಪರ್ಸ್ ಅವಕಾಶ ನೀಡಿತ್ತು.
ಮಂತ್ರಿ ವೆಬ್ ಸಿಟಿಯಲ್ಲಿ ಪ್ಲಾಟ್ ಖರೀದಿ ಮಾಡಬೇಕಾದರೆ, ಪ್ಲಾಟ್ ಮೊತ್ತದಲ್ಲಿ ಶೇ. 20 ರಷ್ಟು ಹಣವನ್ನು ಹೂಡಿಕೆ ಮಾಡಬೇಕು. ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಹೂಡಿಕೆಗಿಂತಲೂ ಎರಡು ಪಟ್ಟು ದುಡಿಮೆ ಮಾಡಬಹುದು ಎಂದು ಮಂತ್ರಿ ಡೆವಲಪರ್ಸ್ ಹೂಡಿಕೆದಾರರಿಗೆ ಅಮಿಷೆ ಒಡ್ಡಿತ್ತು.
ಅದರಂತೆ ಒಂದು ಸಾವಿರಕ್ಕೂ ಅಧಿಕ ಐಟಿ ಉದ್ಯೋಗಿಗಳು ಮಂತ್ರಿ ಡೆವಲಪರ್ಸ್ ಮಂತ್ರಿ ವೆಬ್ ಸಿಟಿ ಪ್ರಾಜೆಕ್ಟ್ ಮೇಲೆ ಹೂಡಿಕೆ ಮಾಡಲು ಮುಂದಾದರು. ಬಹುತೇಕರು ಪಂಚಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳಲು ಮುಂದಾಗಿದ್ದರು. ಅಚ್ಚರಿ ಏನೆಂದರೆ, ಮಂತ್ರಿ ವೆಬ್ ಸಿಟಿ ಮೇಲೆ ಹೂಡಿಕೆ ಮಾಡುವರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ನಿಡುವ ಬಗ್ಗೆ ಒಡಂಬಡಿಕೆ ನಡೆದಿತ್ತು. ಪ್ಲಾಟ್ ನ ಶೇ. 80 ರಷ್ಟು ಹಣ ಪಾವತಿ ಮಾಡಿದ ಬಳಿಕ ಉಳಿದ ಹಣ ಬ್ಯಾಂಕ್ ಸಾಲ ಒದಗಿಸುತ್ತದೆ. ಈ ಹಣ ಯೋಜನೆ ಪ್ರಗತಿ ಹಂತ ಹಂತವಾಗಿ ಪಡೆಯಲಾಗುತ್ತದೆ. ಆದರೆ, ಸಾಲದ ಇಎಂಐ ಮೊತ್ತವನ್ನು ಕಂಪನಿಯೇ ಪಾವತಿ ಮಾಡಲಿದೆ ಎಂಬ ಅವಕಾಶವನ್ನು ಒದಗಿಸಿತ್ತು.
ಮಂತ್ರಿ ಡೆವಲಪರ್ಸ್ ಈ ಮಾತು ನಂಬಿ, ಪ್ಲಾಟ್ ಮೊತ್ತದ ಶೇ. 20 ರಷ್ಟು ಮುಂಗಡ ಪಾವತಿ ಮಾಡಿದ್ದಾರೆ. ಅದರಂತೆ ಸತ್ಯನ್ ಆರ್ ಚಾಲ್ಲಾ ಎಂಬುವರು ಕೂಡ ಪ್ಲಾಟ್ ಮೊತ್ತದ ಶೇ. 20 ರಷ್ಟು ಮೊತ್ತ 22, 54,252 ರೂ.ಗಳನ್ನು ಪಾವತಿ ಮಾಡಿದ್ದಾರೆ. ಉಳಿದ ಬಾಕಿ ಮೊತ್ತವನ್ನು ಯೋಜನೆಗೆ ಪ್ರಗತಿಗೆ ಹಂತ ಹಂತವಾಗಿ ಬಿಡುಗಡೆ ಮಾಡುವ ಸಂಬಂಧ ಪಂಚಾಬ್ ನ್ಯಾಷನಲ್ ಬ್ಯಾಂಕ್ ಹೌಸಿಂಗ್ ಲೋನ್ ಪಡೆದಿದ್ದಾರೆ. ಒಂದು ವೇಳೆ ಸಾಲಗಾರರು ಸಾಲ ಕಟ್ಟದಿದ್ದ ಪಕ್ಷದಲ್ಲಿ ಮಂತ್ರಿ ಡೆವಲಪರ್ಸ್ ಜವಾಬ್ದಾರರಾಗುತ್ತಾರೆ ಎಂಬ ವಿಚಾರವನ್ನು ಬ್ಯಾಂಕಿನವರು ಈ ವೇಳೆ ತಿಳಿಸಿದ್ದಾರೆ.
ಅದಕ್ಕೆ ಅಣುಗುಣವಾಗಿ ಸತ್ಯನ್ ಆರ್ ಚಾವ್ಲಾ ಮಂತ್ರಿ ವೆಬ್ ಸಿಟಿಯಲ್ಲಿ ಒಂದು ಪ್ಲಾಟ್ ಬುಕ್ ಮಾಡಿದ್ದಾರೆ. ಕೆಲವು ಷರತ್ತುಗಳ ಅನ್ವಯ ಲೋನ್ ಮೊತ್ತವನ್ನು ಮಂತ್ರಿ ಡೆವಲಪರ್ಸ್ ಗೆ ಬಿಡುಗಡೆ ಮಾಡುವ ಬಗ್ಗೆಯೂ ಪಂಚಾಬ್ ನ್ಯಾಷನಲ್ ಬ್ಯಾಂಕ್ ಒಡಂಬಡಿಕೆಯಲ್ಲಿ ತಿಳಿಸಿತ್ತು.
ಅದರ ಪ್ರಕಾರ, ಪಂಚಾಬ್ ನ್ಯಾಷನಲ್ ಬ್ಯಾಂಕ್, ಮಂತ್ರಿ ಡೆವಲಪರ್ಸ್ ಲೋನ್ ಮೊತ್ತ ಬಿಡುಗಡೆಗೆ ಬೇಡಿಕೆ ಸಲ್ಲಿಸಬೇಕಿತ್ತು. ಆದಕ್ಕೆ ಸಾಲಗಾರರೂ ಸಮ್ಮತಿ ಸೂಚಿಸಿರಬೇಕು. ಅದಕ್ಕೂ ಮುಖ್ಯವಾಗಿ ಹಂತ ಹಂತವಾಗಿ ಲೋನ್ ಪಡೆಯಲು ಮಂತ್ರಿ ಡೆವಲಪರ್ಸ್ ಕಟ್ಟಡ ನಿರ್ಮಾಣ ಪ್ರಗತಿ ತೋರಿಸಬೇಕಿತ್ತು. ಅದರ ಪ್ರಕಾರ
ಶೇ. 10 ರಷ್ಟು ಮೊತ್ತ ಬುಕ್ಕಿಂಗ್ ವೇಳೆ ಪಾವತಿ.
ಶೇ. 15 ರಷ್ಟು ಮೊತ್ತ ಅಗ್ರಿಮೆಂಟ್ ವೇಳೆ ಪಾವತಿ
ಶೇ. 10 ರಷ್ಟು ಮೊತ್ತ ಯೋಜನೆ ಶಂಕು ಸ್ಥಾಪನೆ ವೇಳೆ ಪಾವತಿ,
ಶೇ. 10 ರಷ್ಟು ಮೊತ್ತ ಯೋಜನೆ ಮೊದಲ ಮಹಡಿ ನಿರ್ಮಾಣದ ಬಳಿಕ.
ಶೇ. 10 ರಷ್ಟು ಮೊತ್ತ ಯೋಜನೆ ನಾಲ್ಕನೇ ಮಹಡಿ ಕಾಮಗಾರಿ ಪೂರ್ಣವಾದ ಬಳಿಕ/
ಶೇ. 10 ರಷ್ಟು ಮೊತ್ತ ಯೋಜನೆಯ ಎಂಟನೇ ಪ್ಲೋರ್ ಕಾಮಗಾರಿ ಬಳಿಕ.
ಶೇ. 10 ರಷ್ಟು ಮೊತ್ತ ಯೋಜನೆ 12 ನೇ ಪ್ಲೋರ್ ಪೂರ್ಣಗೊಂಡ ಬಳಿಕ.
ಶೇ. 10 ರಷ್ಟು ಮೊತ್ತ ಯೋಜನೆ 15 ನೇ ಪ್ಲೋರ್ ಕಾಮಗಾರಿ ಪೂರ್ಣದ ಬಳಿಕ,
ಶೇ. 10 ರಷ್ಟು ಮೊತ್ತ ಯೋಜನೆ, ಕೊನೆಯ ಪ್ಲೋರ್ ನಿರ್ಮಾಣ ವೇಳೆ
ಪ್ಲಾಟ್ ಖರೀದಿದಾರರ ಸಾಲದ ಮೊತ್ತವನ್ನು ಹಂತ ಹಂತವಾಗಿ ಪಾವತಿ ಮಾಡಬೇಕಿತ್ತು. ಮಂತ್ರಿ ಡೆವಲಪರ್ಸ್ ಜತೆ ಶಾಮೀಲಾಗಿರುವ ಪಂಚಾಬ್ ನ್ಯಾಷನಲ್ ಬ್ಯಾಂಕ್, ಶೇ. 98 ರಷ್ಟು ಸಾಲದ ಮೊತ್ತವನ್ನು ಒಂದೇ ಸಲ ಮಂತ್ರಿ ಡೆವಲಪರ್ಸ್ ಖಾತೆಗೆ ವರ್ಗಾಯಿಸಿದೆ. ಇದಕ್ಕೆ ಸಾಲ ಪಡೆದ ಗ್ರಾಹಕರ ಅನುಮತಿ ಪಡೆಯದೇ ಸಾಲದ ಮೊತ್ತವನ್ನು ಡೆವಲಪರ್ಸ್ ಗೆ ರವಾನೆ ಮಾಡಿದೆ.
ಭಾರತೀಯ ರಿಸರ್ವ ಬ್ಯಾಂಕ್ ನ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಪಂಚಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರ ಸಾಲದ ಮೊತ್ತವನ್ನು ಮಂತ್ರಿ ಡೆವಲಪರ್ಸ್ ಗೆ ವರ್ಗಾಯಿಸಿದೆ. ಹೀಗೆ ಯೋಜನೆ ಹಂತ ಹಂತವಾಗಿ ಅಭಿವೃದ್ಧಿ ಪಡಿಸದೇ ಒಂದು ಸಾವಿರ ಹೂಡಿಕೆದಾರ ಗ್ರಾಹಕರ ಹಣವನ್ನು ಮಂತ್ರಿ ಡೆವಲಪರ್ಸ್ ಪಡೆದುಕೊಂಡಿದೆ. ಒಡಂಬಡಿಕೆ ಷರತ್ತುಗಳನ್ನು ಉಲ್ಲಂಂಘನೆ ಮಾಡಿ ಸಾಲವನ್ನು ವರ್ಗಾಯಿಸಿದ್ದು, ಇದರಿಂದ ಸಾಲ ಪಡೆದ ಗ್ರಾಹಕರು ಇಎಂಎಐ ಕಟ್ಟಲು ಪರದಾಡುವಂತಾಗಿದೆ.
ಅಚ್ಚರಿ ಏನೆಂದರೆ, 2014 ರಲ್ಲಿ ಆರಂಭವಾಗಿದ್ದ ಯೋಜನೆ 2016 ಕ್ಕೆ ಪೂರ್ಣಗೊಂಡು ಹೂಡಿಕೆದಾರ ಗ್ರಾಹಕರಿಗೆ ಪ್ಲಾಟ್ ಗಳನ್ನು ಹಂಚಿಕೆ ಮಾಡಬೇಕಿತ್ತು. ಪ್ಲಾಟ್ ಗಳನ್ನು ಪೂರ್ಣಗೊಳಿಸಿಲ್ಲ. ಇತ್ತ ಸಾಲ ನಿಡಿದ ಪಂಚಾಬ್ ನ್ಯಾಷನಲ್ ಬ್ಯಾಂಕ್ ಇಎಂಐ ಪಾವತಿಸುವಂತೆ ಗ್ರಾಹಕರನ್ನು ಪೀಡಿಸಿ ಮಾನಸಿಕ ಹಿಂಸೆ ನೀಡಲು ಆರಂಭಿಸಿದೆ. ಅಚ್ಚರಿ ಏನೆಂದರೆ ಹೆಣ್ಣೂರು ಬಳಿ ಮಂತ್ರಿ ಡೆವಲಪರ್ಸ್ ನಿರ್ಮಿಸಿರುವ ಮಂತ್ರಿ ವೆಬ್ ಸಿಟಿ ಪ್ರಾಜೆಕ್ಟ್ ಇನ್ನೂ ಪೂರ್ಣಗೊಂಡಿಲ್ಲ. ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಪಾವತಿಸಬೇಕು. ಇನ್ನೊಂದಡೆ ಪ್ಲಾಟ್ ಕೂಡ ಕೈಗೆ ಬಂದಿಲ್ಲ. ಇಂತಹ ಸಂಕಷ್ಟದಲ್ಲಿ ಇಎಂಐ ಪಾವತಿ ಮಾಡಲಾಗದೇ ಸಂಕಷ್ಟಕ್ಕೆ ಒಳಗಾದ ಗ್ರಾಹಕರು ರೆರಾ ಗೆ ಹೋಗಿ ದೂರು ಸಲ್ಲಿಸಿದ್ದಾರೆ. ಇನ್ನೂ ಕೆಲವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಮಂತ್ರಿ ಡೆವಲಪರ್ಸ್ ವಿರುದ್ಧ ದೂರು ನೀಡಿದ್ದಾರೆ.
ಒಂದು ಸಾವಿರ ಕೋಟಿ ರೂ. ವಂಚನೆ: ಹೆಣ್ಣೂರು ಬಳಿಯ ಮಂತ್ರಿ ವೆಬ್ ಸಿಟಿ ಯೋಜನೆಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂತ್ರಿ ಹೂಡಿಕೆ ಮಾಡಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅದರಲ್ಲಿ ಒಬ್ಬರು ಬರೋಬ್ಬರಿ 70 ಲಕ್ಷ ರೂ. ನಿಂದ ಹಿಡಿದು ಒಂದು ಕೋಟಿ ರೂ. ವರೆಗೂ ಹೂಡಿಕೆ ಮಾಡಿದ್ದಾರೆ. ಮಂತ್ರಿ ವೆಬ್ ಸಿಟಿಯಲ್ಲಿ ಎರಡು ಸಾವಿರ ಪ್ಲಾಟ್ ಗಳು ನಿರ್ಮಾಣವಾಗಬೇಕಿತ್ತು. ಸದ್ಯದ ಸ್ಥಿತಿಯಲ್ಲಿ ಮಂತ್ರಿ ವೆಬ್ ಸಿಟಿ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಹಣ ಡಬಲ್ ಮಾಡಿಕೊಳ್ಳಲು ಹೊಗಿ ಮೂರು ಪಟ್ಟು ಬಡ್ಡಿ ಕಟ್ಟಿ ಹೂಡಿಕೆದಾರರು ಹೈರಾಣ ಆಗಿದ್ದಾರೆ.
ಎಚ್ಚರಿಕೆ :ಯಾವುದೇ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನಲ್ಲಿ ಹೂಡಿಕೆ ಮಾಡಿ ಹಣ ಡಬಲ್ ಮಾಡುವ ಕನಸು ಕಾಣುತ್ತಿದ್ದರೆ ಮೊದಲು ಎಚ್ಚರಿಕೆ ವಹಿಸಬೇಕು. ಯೋಜನೆಯ ದಾಖಲೆಗಳ ಕಾನೂನು ಬದ್ಧತೆ ಪರಿಶೀಲಿಸಬೇಕು. ಆನಂತರ ನಿಜವಾಗಿಯೂ ಈ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ರಿಯಲ್ ಎಸ್ಟೇಟ್ ಹೂಡಿಕೆಯಿಂದ ದುಡಿದ ಹಣ ದುಬಾರಿ ಬಡ್ಡಿ ಕಟ್ಟಲು ಸಾಲುವುದಿಲ್ಲ. ಕೆಲವು ಬ್ಯಾಂಕುಗಳು ರಿಯಲ್ ಎಸ್ಟೇಟ್ ಕಂಪನಿಗಳ ಜತೆ ಶಾಮೀಲಾಗಿ ಸಾಲದ ಆಫರ್ ನೀಡುತ್ತವೆ. ಎಚ್ಚರ ತಪ್ಪಿದರೆ ಇಂತಹ ಸಂಕಷ್ಟಗಳಿಗೆ ಒಳಗಾಗಬೇಕಾಗುತ್ತದೆ.
ಮಂತ್ರಿ ವೆಬ್ ಸಿಟಿ ದೂರಿನ ಪ್ರತಿ ಕ್ಲಿಕ್ ಮಾಡಿ: