ದೇಶದಲ್ಲಿ ಈಗ ಹಬ್ಬಗಳ ಸಂಭ್ರಮ ಪ್ರಾರಂಭವಾಗಿದೆ. ಇತ್ತೀಚೆಗಷ್ಟೇ ಗಣೇಶ ಹಬ್ಬ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ದಸರಾ, ದೀಪಾವಳಿ, ಕ್ರಿಸ್‌ಮಸ್, ಹೊಸವರ್ಷ, ಸಂಕ್ರಾಂತಿ ಹೀಗೆ ಸಾಲು ಸಾಲು ಹಬ್ಬಗಳು ಬರಲಿವೆ. ಜನರು ಹೊಸಮನೆ, ನಿವೇಶನಗಳ ಖರೀದಿಗೆ ತಮ್ಮ ಇಷ್ಟದ ಹಬ್ಬಕ್ಕಾಗಿ ಕಾದು ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಲಿದೆಯೇ ಎಂಬ ನಿರೀಕ್ಷೆ ಹೆಚ್ಚಾಗಿದೆ.
ಸ್ವಂತ ಮನೆ ಹೊಂದುವುದು ಎಷ್ಟು ಮುಖ್ಯ ಎಂಬುದನ್ನು ಕೋವಿಡ್-19 ಸಾಂಕ್ರಾಮಿಕವು ಜನರಿಗೆ ಮನದಟ್ಟು ಮಾಡಿದೆ. ಜನರು ಬಾಡಿಗೆ ಮನೆಗೆ ಹೋಗುವ ಬದಲಾಗಿ, ಏನಾದರೂ ಅಹಿತಕ ಸಂಗತಿ ಘಟಿಸುವ ಮುನ್ನ ಸ್ವಂತ ಮನೆ ಖರೀದಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ.
ಅಸೋಚಾಮ್ (ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ) ವರದಿ ಪ್ರಕಾರ, ಭಾರತದ ಗೃಹ ಸಾಲ ಉದ್ಯಮವು ಇತ್ತೀಚೆಗಿನ ವರ್ಷಗಳಲ್ಲಿ ಒಟ್ಟಾರೆ ಶೇ 15ರಷ್ಟು ವಿಸ್ತರಣೆ ಕಂಡಿದೆ.
ಸಾಂಕ್ರಾಮಿಕದ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ರೆಪೊ ದರ ತಗ್ಗಿಸಿ, ಗೃಹ ಸಾಲಗಳ ಮೇಲಿನ ಬಡ್ಡಿ ದರ ಕಡಿಮೆ ಆಗುವಂತೆ ಮಾಡಿ ಮನೆ ಖರೀದಿದಾರರಿಗೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ 2022ರಲ್ಲಿ ರೆಪೊ ದರ ಮತ್ತು ಹಣದುಬ್ಬರ ದರವು ಆಕಾಶಕ್ಕೇರಿದ್ದರಿಂದ ಗೃಹ ಸಾಲಗಳ ಬಡ್ಡಿದರವೂ ಏರುಮುಖವಾಗಿದೆ.
ಇದೆಲ್ಲದರ ಹೊರತಾಗಿಯೂ ಹಬ್ಬಗಳ ಋತುವಿನ ಈ ಸಂದರ್ಭದಲ್ಲಿ, ಆಕರ್ಷಕ ಕೊಡಗೆಗಳು ಮತ್ತು ರಿಯಾಯಿತಿಗಳ ಮೂಲಕ ಮಾರುಕಟ್ಟೆ ವಿಸ್ತರಣೆಗೆ ಒಂದು ಅವಕಾಶ ಒದಗಿಸಿದೆ. ಆದರೆ ಹಣದುಬ್ಬರ ದರವು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವಸತಿ ಕ್ಷೇತ್ರವು ಬೇಡಿಕೆ ಕಂಡುಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ʻಪೂರೈಕೆ ಸರಣಿಯ ಒತ್ತಡ ಮತ್ತು ಓಡುತ್ತಿರುವ ತೈಲ ದರದ ಕಾರಣ ಪ್ರಪಂಚದಾದ್ಯಂತ ಆರ್ಥಿಕತೆಯು ತತ್ತರಿಸುತ್ತಿದೆ. ರಷ್ಯಾ ಉಕ್ರೇನ್ ಯುದ್ಧವೂ ಇದಕ್ಕೆ ಕೊಡುಗೆ ನೀಡಿದೆ. ಆದರೆ ಭಾರತದ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ಪರಿಣಾಮವಾಗಿ ಸಾಕಷ್ಟು ಅಡೆತಡೆಯ ನಂತರವೂ ಭಾರತದ ಆರ್ಥಿಕತೆಯು ಗುರುತಿಸಬಹುದಾದಂತಹ ಒಳ್ಳೆಯ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆರ್‌ಬಿಐ ರೆಪೊ ದರವನ್ನು ಈಗಿನ ಶೇ 5.4ಕ್ಕೆ ಏರಿಸುವುದು ಅನಿವಾರ್ಯವಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಈ ಮಾನದಂಡವನ್ನು ಪರಿಶೀಲಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಪೂರಕ ವಾತಾವರಣ ಸೃಷ್ಟಿಸುವ ನಿರೀಕ್ಷೆ ಇದೆʼ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸದ್ಯದ ಪರಿಸ್ಥಿತಿಯಲ್ಲಿ ಗೃಹ ಸಾಲಗಳ ಮೇಲಿನ ಬಡ್ಡಿ ದರ ಏರಿಕೆ ಕಾಣುತ್ತಿದ್ದರುವುದರ ಹೊರತಾಗಿಯೂ 2020ರ ಮಾರ್ಚ್ ಪೂರ್ವದಲ್ಲಿ ಇರುವುದಕ್ಕಿಂತಲೂ ಕಡಿಮೆ ಮಟ್ಟದಲ್ಲಿಯೇ ಇದೆ. ಆದ್ದರಿಂದ ಈ ಏರಿಕೆಯು ಮನೆ ಖರೀದಿ ಟ್ರೆಂಡ್ ಮೇಲೆ ವಿಶೇಷ ಪರಿಣಾಮ ಬೀರುವುದಿಲ್ಲ ಎಂಬ ನಿರೀಕ್ಷೆ ಇದೆ.
ಹೆಚ್ಚಿನ ಭಾರತೀಯರು ಅತ್ಯುತ್ತಮ ಪರಿಸರದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತಿರುವ ಪರಿಣಾಮ ಉತ್ತಮ ವಿನ್ಯಾಸ ಮತ್ತು ಸೌಕರ್ಯಗಳಿರುವ ಮನೆಗಳಿಗೆ ಬೇಡಿಕೆ ಮುಂದುವರಿಯುತ್ತಿದೆ. ಈ ವರ್ಗದ ಜನರಿಗೆ ಮಾಸಿಕ ಕಂತು ಕೈಗೆಟಕುವ ದರದಲ್ಲಿಯೇ ಇರಲಿದೆ.
ಎಲ್ಲಿಂದಲಾದರೂ ಕೆಲಸ ಮಾಡುವ ಆಯ್ಕೆ ಸಿಕ್ಕಿರುವ ಕಾರಣ ಹೆಚ್ಚಿನವರು ತಮ್ಮ ಸ್ವಂತ ಊರುಗಳಲ್ಲಿಯೇ ಉಳಿದುಕೊಂಡು ಕೆಲಸ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಸಣ್ಣ ಸಣ್ಣ ನಗರಗಳಲ್ಲಿಯೂ ವಸತಿ ಬೇಡಿಕೆ ಹೆಚ್ಚುತ್ತಿದೆ.
ದೇಶದ ವಿವಿಧ ಭೌಗೋಳಿಕತೆ ಮತ್ತು ಕ್ಷೇತ್ರಗಳಲ್ಲಿನ ಕ್ರೆಡಿಟ್ ಬೆಳವಣಿಗೆ ದರವನ್ನು ವಿಶ್ಲೇಷಿಸಿದರೆ, ಬೆಳವಣಿಗೆಯು ದೀರ್ಘಾವಧಿ ಬೇಡಿಕೆ ಹೆಚ್ಚಳದ ಪ್ರಾಥಮಿಕ ಹಂತದಲ್ಲಿ ಇದೆ. ಆದ್ದರಿಂದ ಸದ್ಯಕ್ಕಂತೂ ಬೇಡಿಕೆ ದಿಢೀರ್ ಕುಸಿಯು ಲಕ್ಷಣಗಳಿಲ್ಲ. ಮುಂಬರುವ ಹಬ್ಬಗಳ ಋತುವಿನಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚಳವಾಗುವ ಸೂಚನೆಯೇ ಗೋಚರಿಸುತ್ತಿದೆ.